ಹಾವೇರಿ: ಹೊಲಕ್ಕೆ ಹೋಗುವ ದಾರಿ ಸಂಬಂಧ ವಾಗ್ವಾದ ನಡೆದು ವ್ಯಕ್ತಿಯೋರ್ವ ತನ್ನ ಚಿಕ್ಕಪ್ಪನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಬೆಳಗ್ಗೆ ನಗರದ ಅಕ್ಕಿಪೇಟೆಯಲ್ಲಿ ಸಂಭವಿಸಿದೆ.
ಉಳ್ಳಿವೆಪ್ಪ ಅಕ್ಕಿ(೭೫) ಎಂಬ ವೃದ್ಧನಿಗೆ ಆತನ ಅಣ್ಣನ ಮಗನಾದ ಬಸವರಾಜ ಅಕ್ಕಿ ಮಚ್ಚು ಹಿಡಿದು ನಾಲ್ಕೈದು ಬಾರಿ ಹೊಡೆದಿದ್ದಾನೆ. ಇದರಿಂದ ಉಳಿವೆಪ್ಪ ಅಕ್ಕಿಗೆ ಕೈ, ತಲೆ, ಭುಜಕ್ಕೆ ಹೊಡೆತ ಬಿದ್ದಿದೆ. ಹಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಬಸವರಾಜ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.