Home News ಹಲ್ಲೆ ಪ್ರಕರಣ: ಸಿಸಿಟಿವಿ ವಿಡಿಯೋಗಳು ಬಹಿರಂಗ: ವಿಂಗ್ ಕಮಾಂಡರ್ ವಿರುದ್ಧವೇ FIR ದಾಖಲು

ಹಲ್ಲೆ ಪ್ರಕರಣ: ಸಿಸಿಟಿವಿ ವಿಡಿಯೋಗಳು ಬಹಿರಂಗ: ವಿಂಗ್ ಕಮಾಂಡರ್ ವಿರುದ್ಧವೇ FIR ದಾಖಲು

ಬೆಂಗಳೂರು: ನಗರದಲ್ಲಿನ ವಿಂಗ್ ಕಮಾಂಡರ್‌ ಬೋಸ್ ಮೇಲೆ ಹಲ್ಲೆ ಪ್ರಕರಣದಲ್ಲಿ ಮಹತ್ವದ ಟ್ವಿಸ್ಟ್ ದೊರೆತಿದ್ದು, ಪೊಲೀಸರು ಇದೀಗ ವಿಂಗ್ ಕಮಾಂಡರ್‌ ಬೋಸ್ ವಿರುದ್ಧವೇ ಹತ್ಯಾ ಪ್ರಯತ್ನ ಕೇಸ್ ದಾಖಲಿಸಿದ್ದಾರೆ.
ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ನಡೆದ ರಸ್ತೆ ಕಾಳಗದಲ್ಲಿ ವಿಂಗ್‌ ಕಮಾಂಡರ್‌ ಸ್ವತಃ ವಿಡಿಯೋ ಮೂಲಕ ತನ್ನ ಮೇಲೆ ಕನ್ನಡಿಗನೊಬ್ಬ ಹಲ್ಲೆ ನಡೆಸಿದ್ದಾಗಿ ಹೇಳಿಕೊಂಡಿದ್ದ. ಮುಖಕ್ಕೆ ರಕ್ತ ಬರಿಸಿಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ. ವಿಂಗ್‌ಕಮಾಂಡರ್‌ ವಿಡಿಯೋ ಆಧರಿಸಿ ಕನ್ನಡಿಗನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇದರ ವಿರುದ್ಧ ಕನ್ನಡಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋದಲ್ಲಿ ವಿಂಗ್‌ ಕಮಾಂಡರ್‌ನ ಅಸಲಿ ಬಣ್ಣ ಬಯಲಾಗಿದ್ದರೂ ಆತನ ಮೇಲೆ ಎಫ್‌ಐಆರ್‌ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಕನ್ನಡಿಗರು ಗಂಭೀರ ಆರೋಪ ಮಾಡಿದ್ದರು. ಹಲವು ಕನ್ನಡಿಗರು ನ್ಯಾಯಕ್ಕಾಗಿ ಆಗ್ರಹಿಸಿ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯ ಬಳಿ ಜಮಾಯಿಸಿ ಇಡೀ ರಾತ್ರಿ ಕಳೆದಿದ್ದರು. ಇನ್ನು ಈ ಪ್ರಕರಣಕ್ಕೆ ಸಂಭದಿಸಿದಂತೆ ದೊರೆತಿರುವ ಸಿಸಿಟಿವಿ ವಿಡಿಯೋದಲ್ಲಿ ಯುವಕ ಹಲ್ಲೆ ಮಾಡಿಲ್ಲ. ಬದಲಾಗಿ ವಿಂಗ್ ಕಮಾಂಡ್​ ಬೋಸ್ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳೀಯರು ಎಷ್ಟೇ ಬಿಡಿಸಲು ಪ್ರಯತ್ನಿಸಿದ್ದರೂ ಸಹ ಕೇಳದ ಬೊಸ್​ ಯುವಕನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾನೆ. ಯುವಕ ನೆಲಕ್ಕೆ ಬಿದ್ದರೂ ಸಹ ಕೇಳದೇ ಮನಬಂದಂತೆ ಥಳಿಸಿದ್ದಾನೆ. ಅಲ್ಲದೇ ಯುವಕನ ಮೊಬೈಲ್​ಕಿತ್ತುಕೊಂಡು ಎಸೆದಿದ್ದಾನೆ. ಈ ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಪೊಲೀಸರು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಬಿಎನ್‌ಎಸ್‌ನ ಸೆಕ್ಷನ್ 109 ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಅವರ ಮೇಲೆ ಬಿಎನ್‌ಎಸ್‌ನ ಇನ್ನೂ ಕೆಲವು ಸೆಕ್ಷನ್‌ಗಳ ಅಡಿಯಲ್ಲಿಯೂ ಪ್ರಕರಣ ದಾಖಲಾಗಿದೆ.

https://www.facebook.com/share/p/1GEP1BgM3v

Exit mobile version