ಬಾಗಲಕೋಟೆ: ಹಂಗಲ್ಲರಲೇ ಎಲ್ಲರೂ ನಿಂತೀರಲಾ.. ಮಂದಿಗೆ ಅಡ್ಡ್ಯಾಡಕರ ಬಿಡ್ತಿರಿ ಇಲ್ರಲೇ.. ತಗೋರಿ ನಾನು ಅಂತಾ ಸ್ವಾಮಿ ಅಲ್ಲ.. ಡ್ರೆಸ್ ಮ್ಯಾಲೆ ನಮಸ್ಕಾರ ಮಾಡಬಾರದು.. ಹುಚ್ಚನನ್ಮಕ್ಕಳ ಯಾವ ಜಗದ್ಗುರುವಿಗೂ ಡ್ರೆಸ್ ಮ್ಯಾಲೆ ನಮಸ್ಕಾರ ಮಾಡಬಾರದು..!
ಹೀಗೆ ಸ್ವಾಮೀಜಿಯೊಬ್ಬರು ಬೈಯ್ಯುತ್ತಿದ್ದರೂ ಸಾಲುಗಟ್ಟಿ ನಿಂತ ಪೊಲೀಸರು ಆಶೀರ್ವಾದ ರೂಪದಲ್ಲಿ ಹಣ ಪಡೆದ ಘಟನೆ ಬಾದಾಮಿಯಲ್ಲಿ ನಡೆದಿದೆ.
ಸಿದ್ದನಕೊಳ್ಳದ ಶ್ರೀಶಿವಕುಮಾರ ಸ್ವಾಮೀಜಿ ಸ್ವಭಾವತಃ ಮಾತನಾಡುವ ಶೈಲಿಯೇ ಹಾಗಿದ್ದರೂ ಕರ್ತವ್ಯ ನಿರತ ಪೊಲೀಸರು ಸಮವಸ್ತ್ರದಲ್ಲಿ ಸ್ವಾಮೀಜಿ ಕಾಲಿಗೆ ಬಿದ್ದಿದ್ದಲ್ಲದೇ ಸಾಲುಗಟ್ಟಿ ನಿಂತು ಹಣ ಪಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸ್ವಾಮೀಜಿ ವಾಹನದ ಚಾಲಕನೇ ಆ ವಿಡಿಯೋ ಹಂಚಿಕೊಂಡಿರುವ ಮಾಹಿತಿ ಲಭ್ಯವಾಗಿದೆ.
ವಿಡಿಯೋ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟೀಕರಣ ನೀಡಿರುವ ಸ್ವಾಮೀಜಿ, ವಿಡಿಯೋದಲ್ಲಿ ಕಾಣಸಿಕೊಂಡ ಪೇದೆ ಮೊದಲಿನಿಂದಲೂ ಮಠದ ಭಕ್ತರು, ರಾಜಕಾರಣಿಗಳಿಂದ ಹಿಡಿದು ಪೊಲೀಸರವರೆಗೆ ಭಕ್ತರಿದ್ದಾರೆ. ಆಶೀರ್ವಾದ ರೂಪದಲ್ಲಿ ಹಣ ನೀಡಿರುವುದನ್ನು ಬೇರೆ ದೃಷ್ಟಿಯಿಂದ ನೋಡಬಾರದು. ಮೊದಲಿನಿಂದಲೂ ನಾನು ಭಕ್ತರಿಗೆ ಹಣ ನೀಡಿ ಆಶೀರ್ವದಿಸುತ್ತ ಬಂದಿದ್ದೇನೆ ಎಂದು ವಿಡಿಯೋ ಪ್ರಕಟಣೆ ನೀಡಿದ್ದಾರೆ.