ಬಾಗಲಕೋಟೆ: ರಾಜ್ಯದಲ್ಲಿ ಈಗಾಗಲೇ ಮುಖ್ಯಮಂತ್ರಿಯೊಬ್ಬರು ಆಡಳಿತ ನಡೆಸುತ್ತಿರುವಾಗ ಮತ್ತೊಬ್ಬ ಸಿಎಂ ಚರ್ಚೆಯೇ ಅಪ್ರಸ್ತುತ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಈ ಹಿಂದೆ ೫ ವರ್ಷ ಸಿಎಂ ಆದವರು, ಅವರೇನು ಸಾಮಾನ್ಯರಲ್ಲ. ಸಿಎಂ ಬದಲಾವಣೆ ಗಾಸಿಪ್‌ಗಳು ಇದ್ದೇ ಇರುತ್ತದೆ. ಒಬ್ಬರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವಾಗ ಇಡೀ ಬದಲಾವಣೆ ವಿಚಾರವೇ ಅಪ್ರಸ್ತುತ ಎಂದರು.
ಸಚಿವರಾದ ಸತೀಶ ಜಾರಕಿಹೊಳಿ, ಕೆ.ಎನ್. ರಾಜಣ್ಣ ಪಕ್ಷದ ನಾಯಕರು, ಪರಮೇಶ್ವರ ಮಾಜಿ ಅಧ್ಯಕ್ಷರು, ಡಿಕೆಶಿ ಅಧ್ಯಕ್ಷರು. ನಾನು ಸಹ ಹಿಂದೆ ಅಧ್ಯಕ್ಷ ಆಗಿದ್ದೆ, ನಾನು ದೆಹಲಿಗೆ ಹೋದ್ರೆ ನೀವು ಅದನ್ನ ಬರೆಯುವುದಿಲ್ಲ. ಬೇರೆಯವರು ಹೋದ್ರೆ ನೀವು ಹೇಳುತ್ತೀರಿ ಎಂದು ಮಾಧ್ಯಮಗಳ ಕಡೆಗೆ ಬೊಟ್ಟು ಮಾಡಿದರು.
ರಾಜಕೀಯದಲ್ಲಿ ಪೈಪೋಟಿ ಇದ್ದೇ ಇರುತ್ತದೆ. ಇದೇನು ದೊಡ್ಡ ವಿಷಯವಲ್ಲ, ಇದರಿಂದ ನಮ್ಮ ಪಕ್ಷದಲ್ಲಿ ಬಿರುಕಿದೆ ಎಂದರ್ಥ ಅಲ್ಲ. ನಮ್ಮಲ್ಲಿರೋ ಸಣ್ಣ ವಿಷಯವೆಲ್ಲ ಶೀಘ್ರ ಇತ್ಯರ್ಥವಾಗಲಿವೆ ಎಂದರು.
ಡಿಸಿಎಂ ಹುದ್ದೆ ಹೆಚ್ಚುವರಿ ಕಿರೀಟವೇನಲ್ಲ ಎಂದ ಸಚಿವ ರಾಜಣ್ಣ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಅವರು, ನೋಡಿ ಈ ಬಗ್ಗೆ ನೀವು ರಾಜಣ್ಣ ಅವರನ್ನೇ ಕೇಳಿ. ಇಂತಹ ಚರ್ಚೆಗಳು ಬಹಿರಂಗವಾಗಿ ಆಗುವಂತಹದ್ದು ಸರಿಯಲ್ಲ, ಇದರ ಅವಶ್ಯಕತೇನು ಇಲ್ಲ. ಪಕ್ಷ ಇದನ್ನೆಲ್ಲಾ ನೋಡುತ್ತಿದೆ. ಮುಂದೆ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಅವರು ತೆಗೆದುಕೊಳ್ಳುತ್ತಾರೆ. ಪಕ್ಷ ರಾಜಣ್ಣ ಸೇರಿದಂತೆ ನನ್ನ ಹಾಗೂ ಎಲ್ಲರ ಅಭಿಪ್ರಾಯ ತೆಗೆದುಕೊಳ್ಳುತ್ತದೆ ಎಂದು ನುಡಿದರು.