ಹಾಳಾದ ಊರಿಗೆ ಉಳಿದವನೇ ಗೌಡ
ಹುಬ್ಬಳ್ಳಿ: ಮುಡಾ ಹಗರಣದಲ್ಲಿ ಲೋಕಯುಕ್ತ ಸಂಸ್ಥೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪರಿವಾರದವರಿಗೆ ಕ್ಲೀನ್ ಚಿಟ್ ನೀಡಿರುವ ವಿಚಾರವಾಗಿ ಶೀಘ್ರದಲ್ಲೇ ಸಭೆ ಮಾಡಿ ಮುಂದಿನ ಕಾನೂನು ಹೋರಾಟದ ರೂಪುರೇಷೆಯನ್ನು ರೂಪಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ವಿಚಾರವಾಗಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್.ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ಪ್ರಾಥಮಿಕ ಹಂತದ ಹೋರಾಟ, ಚರ್ಚೆ ಮಾಡುತ್ತಾರೆ. ಅಗತ್ಯ ಬಿದ್ದರೆ ಹಿರಿಯ ನಾಯಕರೆಲ್ಲ ಸೇರಿ ಒಕ್ಕೊರಲಿನ ಹೋರಾಟ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಭ್ರಷ್ಟಾಚಾರದ ಪಿತಾಮಹ ಎಂಬುದು ಗೌಪ್ಯವಾಗಿ ಉಳಿದಿಲ್ಲ. ಅಮೇರಿಕ ಅಧ್ಯಕ್ಷ ಟ್ರಂಪ್ ಕೂಡ ಕಾಂಗ್ರೆಸ್ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ಚೈನಾ ಅಂಬಾಸಿಡರ್‌ರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದರು. ಕಾಂಗ್ರೆಸ್, ಭ್ರಷ್ಟಾಚಾರದ ಮೂಲಕ ಭಾರತದ ವೈರಿ ದೇಶಗಳ ಜೊತೆಗೆ ಕೈ ಜೋಡಿಸಿ ದೇಶದ ಪ್ರಜಾಪ್ರಭುತ್ವದ ಬುಡ ಅಲಾಡಿಸುವ ಹುನ್ನಾರ ನಡೆದಿದೆ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ನೈತಿಕ ಇಲ್ಲ ಎಂದು ಕಿಡಿ ಕಾರಿದರು.
ಬಸನಗೌಡ ಪಾಟೀಲ್ ಯತ್ನಾಳ ಹಾಗೂ ವಿಜಯೇಂದ್ರ ವಿಚಾರದ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಮಾತನಾಡುತ್ತಾರೆ. ಜನಾರ್ಧನ ರೆಡ್ಡಿ ಸಹ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎನ್ನುವುದು ನನಗೆ ಗೊತ್ತಿಲ್ಲ. ಅದನ್ನು ಅವರನ್ನೇ ಕಾಳಬೇಕು ಎಂದ ಜೋಶಿ, ರಾಜ್ಯಾಧ್ಯಕ್ಷರ ಆಯ್ಕೆ ಆದ ನಂತರವೇ ಬಿಜೆಪಿ ಕೋರ್ ಕಮೀಟಿ ಸಭೆ ನೆರವೇರಲಿದೆ ಎಂದರು.
ನಿತಿನ್ ಗಡ್ಕರಿ ಪ್ರಧಾನಿ ಆಗಬೇಕೆಂದ ಎಂಬುದು ಬಾಲಿಷ ಹೇಳೀಕೆ. ಸಂತೋಷ ಲಾಡ್ ಓರ್ವ ಪ್ರಬುದ್ಧ ರಾಜಕಾರಣಿ, ಅವರಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಇವರ ಇಂತಹ ಮಾತುಗಳಿಂದಲೇ ದೆಹಲಿ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದ್ದಾರೆ. ಹರಿಯಾಣದಲ್ಲಿ ನಾವೇ ಗೆಲ್ಲುತ್ತೇವೆ ಎಂದು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ರಾಹುಲ್ ಗಾಂಧಿ ಸೂಟು ಬೂಟ್ ತೆಗೆದುಕೊಂಡಿದ್ದರು. ಹಾಳಾದ ಊರಿಗೆ ಉಳಿದವನೇ ಗೌಡ ಎನ್ನುವುದು ಕಾಂಗ್ರೆಸ್ ನಾಯಕರ ಮನಸ್ಥಿತಿ ಎಂದರು.