ಹುಬ್ಬಳ್ಳಿ: ಸರ್ಕಾರಿ ಶಾಲೆಗಳು ಮುಚ್ಚುತ್ತಿರುವಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆ ಉಳಿಸಲು, ಮಕ್ಕಳಿಗೆ ಸೌಲಭ್ಯ ಕಲ್ಪಿಸಲು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ತಮ್ಮ ಸ್ವಂತ ಹಣ ಖರ್ಚು ಮಾಡುವ ಮೂಲಕ ವಿಭಿನ್ನ ರೀತಿಯ ಪ್ರಯತ್ನ ಮಾಡಿರುವ ಶಿಕ್ಷಕ, ಶಿಕ್ಷಕಿಯರ ಕಾರ್ಯವನ್ನು ತುಂಬು ಹೃದಯದಿಂದ ಶ್ಲಾಘಿಸಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು, ಈ ಶಿಕ್ಷಕ-ಶಿಕ್ಷಕಿಯರಂತೆಯೇ ಸರ್ಕಾರಿ ಶಾಲೆಯ ಪ್ರತಿಯೊಬ್ಬ ಶಿಕ್ಷಕ-ಶಿಕ್ಷಕಿಯರು ಮಾಡಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನ ಆಲ್ದೂರು ಸಮೀಪದ ಮೋಚಗೊಂಡನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿಯರಾದ ಹೀನಾ ತಬುಸಂ ಹಾಗೂ ರಜಿಯಾ ಸುಲ್ತಾನ್ ಅವರು ಸ್ವಂತ ಎರಡುವರೆ ಲಕ್ಷ ರೂಗಳಲ್ಲಿ ಕೊಳವೆ ಬಾವಿ ಕೊರೆಸಿ ಶಾಲಾ ಮಕ್ಕಳಿಗೆ ನೀರಿನ ಸೌಕರ್ಯ ಕಲ್ಪಿಸಿದ್ದು, ಗದಗ ಜಿಲ್ಲೆ ರೋಣ ತಾಲೂಕಿನ ಕೊಚಲಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿಜಯಕುಮಾರ ಡಿ.ಆರ್ ಹಾಗೂ ಶಿಕ್ಷಕಿ ಎಸ್.ಬಿ ಕೊಟ್ರಶೆಟ್ಟಿ ಅವರು ೨೦೨೫-೨೦೨೬ನೇ ಸಾಲಿನಲ್ಲಿ ತಮ್ಮ ಶಾಲೆಗೆ ದಾಖಲಾಗುವ ಮಕ್ಕಳಿಗೆ ತಲಾ ೧೦೦೦ ಎಫ್.ಡಿ ಇಡಲು ನಿರ್ಧರಿಸಿರುವುದನ್ನು ಉಲ್ಲೇಖಿಸಿರುವ ಸಭಾಪತಿ ಹೊರಟ್ಟಿಯವರು ಸಂಬಂಧಪಟ್ಟ ಶಿಕ್ಷಕ-ಶಿಕ್ಷಕಿಯರಿಗೆ ಅಭಿನಂದನಾ ಪತ್ರ ಬರೆದಿದ್ದಾರೆ.
ರಾಜ್ಯದ ೨೫ ಸಾವಿರಕ್ಕೂ ಹೆಚ್ಚು ಕಿರಿಯ, ಹಿರಿಯ ಸರಕಾರಿ ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿರುವ ಪ್ರಾಥಮಿಕ ಶಾಲೆಗಳು ಮಕ್ಕಳ ದಾಖಲಾತಿಯ ಕೊರತೆಯನ್ನು ಎದುರಿಸುತ್ತಿವೆ. ಸರ್ಕಾರಿ ಶಾಲೆಗಳನ್ನು ಉಳಿಸಲು ಎಷ್ಟೇ ರೀತಿಯಲ್ಲಿ ಪ್ರಯತ್ನ ಮಾಡಿದರೂ ಸಹ ಫಲ ಲಭಿಸುತ್ತಿಲ್ಲ. ಮಕ್ಕಳ ಸಂಖ್ಯೆಯ ಕೊರತೆಯಿಂದ ದಿನದಿಂದ ದಿನಕ್ಕೆ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ನಿಂತಿರುವುದು ವಿಷಾದನೀಯ. ಇಂತಹ ಪರಿಸ್ಥಿತಿಯಲ್ಲಿ ಈ ಶಿಕ್ಷಕ- ಶಿಕ್ಷಕಿಯರು ಸರ್ಕಾರಿ ಶಾಲೆಗಳ ಅಭಿವೃದ್ದಿ, ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು, ಅವರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಮಾಡುವಂತಹ ವಿಭಿನ್ನ ಕಾರ್ಯ ಶ್ಲಾಘನೀಯ. ಅವರ ಕಾರ್ಯ ಮಾದರಿಯಾದುದು. ಪ್ರತಿಯೊಂದಕ್ಕೂ ಸರ್ಕಾರದತ್ತ ಬೊಟ್ಟು ಮಾಡದೇ, ನಿರೀಕ್ಷೆ ಮಾಡದೇ ಶಿಕ್ಷಕ-ಶಿಕ್ಷಕಿಯರೇ ಮನಸ್ಸು ಮಾಡಿದರೆ ಏನಾದರೂ ಮಾಡಲು ಸಾಧ್ಯ ಎಂಬುದಕ್ಕೆ ಉದಾಹರಣೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.