Home ತಾಜಾ ಸುದ್ದಿ ಸತ್ತವರ ನೆರಳಲ್ಲಿ ಅಧಿಕಾರಿಗಳ ಆಟ…

ಸತ್ತವರ ನೆರಳಲ್ಲಿ ಅಧಿಕಾರಿಗಳ ಆಟ…

0

ರವಿನಾಯಕ
ಬೆಂಗಳೂರು: ಭೂ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕಂದಾಯ ಇಲಾಖೆ ಆರ್‌ಟಿಸಿ(ಪಹಣಿ)ಗಳಿಗೆ ಆಧಾರ್ ಜೋಡಣೆ ಅಭಿಯಾನ ಆರಂಭಿಸಿದ್ದರೂ ರಾಜ್ಯಾದ್ಯಂತ ಸುಮಾರು ೪೮.೮೦ ಆಸ್ತಿ ಖಾತೆಗಳು ಮೃತಪಟ್ಟ ರೈತರ ಹೆಸರಿನಲ್ಲಿ ಚಾಲ್ತಿಯಲ್ಲಿವೆ.
ತುಮಕೂರು ೫.೫೬ ಲಕ್ಷ ಖಾತೆಗಳು, ಬೆಳಗಾವಿ ೪.೧೨ ಲಕ್ಷ , ಬಳ್ಳಾರಿ ೨.೮೦ ಲಕ್ಷ , ಚಿಕ್ಕಬಳ್ಳಾಪುರ ೨.೩೬ ಲಕ್ಷ, ಉಡುಪಿ ೨.೭೬ ಲಕ್ಷ, ಕೊಡಗು ೨.೮೧ ಲಕ್ಷ, ಮಂಡ್ಯ ೩.೮೦, ಮೈಸೂರು ೨.೩೫ ಲಕ್ಷ ಸೇರಿದಂತೆ ೩೧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು ೪೮,೮೦,೮೮೭ ಆರ್‌ಟಿಸಿಗಳು ಮೃತರ ಹೆಸರಿನಲ್ಲಿ ಇನ್ನೂ ಚಾಲ್ತಿಯಲ್ಲಿವೆ.
ವಾರಸುದಾರರು ತಮ್ಮ ಹೆಸರಿಗಾಗಿ ಅರ್ಜಿ ನೀಡಿದ್ದರೂ ಖಾತೆ ಹಂಚಿಕೆ ಆಗಿಲ್ಲ. ಕಾನೂನು ಪ್ರಕಾರ ೪೫ ದಿನಗಳಲ್ಲಿ ಖಾತೆ ಬದಲಾವಣೆ ಆಗಬೇಕು. ಆದರೆ ಈ ಎಲ್ಲ ಕಾನೂನು ಸರ್ಕಾರದ ನಿಯಮಗಳ ಉಲ್ಲಂಘನೆಯಾಗುತ್ತಿರುವುದು ಸ್ಪಷ್ಟ. ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಈ ಕೆಲಸವಾಗುತ್ತಿಲ್ಲ. ನಮಗೆ ಕಚೇರಿಗೆ ಅಲೆದು ಸಾಕಾಗಿದೆ ಎಂದು ರೈತರು ಹೇಳುತ್ತಿದ್ದಾರೆ.
ಇವುಗಳನ್ನೆಲ್ಲ ನಿಯಂತ್ರಿಸಲು ಸರ್ಕಾರ ಮುಂದಾಗಿದೆ. ಆದರೆ, ದಶಕಗಳಿಂದ ಲಕ್ಷಾಂತರ ಪಹಣಿಗಳ ಮಾಲೀಕರುಸತ್ತಿದ್ದರೂ ದಾಖಲೆಗಳಲ್ಲಿ ಮಾತ್ರ ಜೀವಂತ. ಬೆಳೆ ಹಾನಿ ಪರಿಹಾರ, ವಿಮೆ ಸೇರಿದಂತೆ ಸೇರಿದಂತೆ ಕೃಷಿ, ತೋಟಗಾರಿಕೆ, ಕಂದಾಯ ಹೀಗೆ ವಿವಿಧ ಇಲಾಖೆ ಸೌಲಭ್ಯಗಳನ್ನು ಅನ್ಯರ ಪಾಲಾಗುತ್ತಾ ಬಂದಿವೆ.

ಇದರಿಂದ ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಕಾರ್ಯ ಕಂದಾಯ ಇಲಾಖೆ ಕೆಲ ಅಧಿಕಾರಿಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿವೆ ಎಂಬ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಕೈಗೊಂಡಿರುವ ಜಮೀನುಗಳ ಪಹಣಿಗಳಿಗೆ ಆಧಾರ್ ಜೋಡಣೆಯಿಂದ ಇಷ್ಟೊಂದು ಸಂಖ್ಯೆಯಲ್ಲಿ ಪಹಣಿಗಳ ಮೂಲ ಮಾಲೀಕರು ಇಲ್ಲದೆ ಜಾಲ್ತಿಯಲ್ಲಿರುವುದು ಬೆಳಕಿಗೆ ಬಂದಿದೆ.
ಎಷ್ಟು ಬಾಕಿ, ಜೋಡಣೆ ಎಷ್ಟು?
ಕಂದಾಯ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ೪.೧೩ ಕೋಟಿ ಆರ್‌ಟಿಸಿ ಖಾತೆಗೆಳು ಇವೆ. ಆ ಪೈಕಿ ೨.೧೬ ಕೋಟಿ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಸರ್ಕಾರಿ ಆಸ್ತಿ ಪಾಸ್ತಿಗಳ ಹೆಸರಿನಲ್ಲಿ ಸುಮಾರು ೯೩,೦೮೪ ಆಸ್ತಿ ಖಾತೆಗಳಿವೆ. ಇದರಲ್ಲಿ ೨.೫೩ ಲಕ್ಷ ಖಾತೆಗಳು ಸರ್ಕರದ ಹೆಸರಿನಲಿರುವುದನ್ನು ಖಚಿತ ಪಡಿಸಲಾಗಿದೆ. ಅಲ್ಲದೇ ಮೂಲ ಮಾಲೀಕರ ಹೆಸರಿನಲ್ಲಿದ್ದ ಹಾಗೂ ಮೃತರ ಹೆಸರಿನಲ್ಲಿರು ಆರ್‌ಟಿಸಿಗಳನ್ನು ಸಉಮಾರು ೬೨.೩೧ ಲಕ್ಷ ರೈತರು ಖಾತೆ ಬದಲಾವಣೆ ಮಾಡಿಸಿಕೊಂಡಿದ್ದಾರೆ. ಒಟ್ಟು ನಾಲ್ಕು ಕೋಟಿ ಖಾತೆಗಳಲ್ಲಿ ಮೃತರ ಲಿಂಕ್ ಆಗಿರುವ ಆಧಾರ್‌ಗಲ್ಲಿ ಭಾವಚಿತ್ರಗಳೇ ಇಲ್ಲದ ೭.೬೫ ಲಕ್ಷ ಖಾತೆಗಳು ಇವೆ. ಒಟ್ಟಿನಲ್ಲಿ ಕಂದಾಯ ಇಲಾಖೆ ಕೈಗೊಂಡಿರುವ ಆರ್‌ಟಿಸಿ (ಪಹಣಿ)ಗಳಿಗೆ ಆಧಾರ್ ನಂಬರ್ ಜೋಡಣೆ ರಾಜ್ಯದಲ್ಲಿ ಇಲ್ಲಿಯವರೆಗೆ ಶೇ.೮೨ ರಷ್ಟಾಗಿದೆ. ೭.೯೪ ಲಕ್ಷ ಹೊಸ ಖಾತೆದಾರರ ಹೆಸರಿನಲ್ಲಿ ಆರ್‌ಟಿಸಿಗಳು ಚಾಲ್ತಿಯಲ್ಲಿವೆ.
ಮೃತರ ಹೆಸರಿನಲ್ಲಿ ಜಮೀನು ಖಾತೆಗಳು ಚಾಲ್ತಿಯಲ್ಲಿರುವುದರಿಂದ ಸರ್ಕಾರದ ಅಂದಾಜು ಲೆಕ್ಕಾಚಾರದಲ್ಲಿ ಲಕ್ಷಾಂತರ ಹೆಕ್ಟರ್ ಭೂಮಿ ಹೊರಗುಳಿದಿದೆ. ಇದರಿಂದ ಕೆಲವು ಪ್ರಕರಣಗಳಲ್ಲಿ ಸತ್ತವರ ಜಮೀನುಗಳ ಮೇಲೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವ ದೂರುಗಳಿವೆ. ರಾಜ್ಯಾದ್ಯಂತ ಇಂತಹ ಅಕ್ರಮಗಳಿಂದ ವಂಚನೆಗೆ ಒಳಗಾದವರು ಹಲವು ವರ್ಷಗಳಿಂದ ಕೋರ್ಟ್, ಕಚೇರಿಗೆ ಅಲೆಯುತ್ತಿದ್ದಾರೆ. ಇದನ್ನು ತಡೆಯುವ ಹಾಗೂ ಜನಸಾಮಾನ್ಯರ ಪಾಲಿಗೆ ಅವರ ಜಮೀನಿನ ಹಕ್ಕನ್ನು ರಕ್ಷಿಸಿ ಅಧಿಕೃತಗೊಳಿಸುವ ಉದ್ದೇಶದಿಂದ ಆಧಾರ್ ಜೋಡಣೆ ಅಭಿಯಾನಕ್ಕೆ ಚಾಲನೆ ನೀಡಿತ್ತು. ಆದರೂ ಇಷ್ಟೊಂದು ಸಂಖ್ಯೆಲ್ಲಿ ಆರ್‌ಟಿಸಿ ಖಾತೆಗಳು ಹಾಗೆ ಉಳಿದಿವೆ.

Exit mobile version