ನಮ್ಮ ಧರ್ಮಗ್ರಂಥಗಳಲ್ಲಿರುವ ಪ್ರತಿಯೊಂದು ಮಂತ್ರಕ್ಕೂ ತನ್ನದೇ ಆದ ಹೆಸರುಗಳಿವೆ. ತಾರಕ ಮಂತ್ರ ಎಂದು ಕರೆಯಲ್ಪಡುವ ಏಕೈಕ ಮಂತ್ರ ಅದು ರಾಮ ನಾಮ. ‘ತಾರಕ’ ಪದದ ಅರ್ಥ ನಮಗೆ ದಾಟಲು ಸಹಾಯ ಮಾಡುವುದು ಎಂದು. ತಾರಕ ಮಂತ್ರ ನಮಗೆ ‘ಸಂಸಾರ’ ಎಂಬ ಸಾಗರವನ್ನು ದಾಟಲು ಸಹಾಯ ಮಾಡುತ್ತದೆ. ಇದು ಜನನ ಮತ್ತು ಮರಣದ ಚಕ್ರಗಳನ್ನು ದಾಟಲು ಅಂದರೆ ಮುಕ್ತಿ ದೊರಕಲು ನಮಗೆ ಸಹಾಯ ಮಾಡುತ್ತದೆ. ನಮ್ಮ ಪ್ರಾಚೀನ ಋಷಿಮುನಿಗಳು ರಾಮ ನಾಮದ ಜಪದ ಮಹತ್ವ ತಿಳಿಸಿದ್ದಾರೆ.
ಶ್ಯಾವನ ಸ್ಮೃತಿಯಲ್ಲಿ ರಾಮ ನಾಮವು ಎಲ್ಲಾ ವೇದಗಳು, ಶಾಸ್ತ್ರಗಳು, ಇತಿಹಾಸಗಳು ಮತ್ತು ಪುರಾಣಗಳ ಸಾರವಾಗಿದೆ ಎಂದು ತಿಳಿಸಿದ್ದಾರೆ. ಋಷಿ ವಸಿಷ್ಠರು ರಾಮನಾಮವನ್ನು ಜಪಿಸಿದ ಫಲದಿಂದ ಮಹಾಸಿದ್ದಿ ದೊರಕಿತು. ಆದ್ದರಿಂದ ಅವರು ಪಠಿಸಿದ ಅದೇ ಮಂತ್ರದಿಂದ ಸರ್ವಶಕ್ತನಾದ ಬಾಲರೂಪಿಯಾದ ಅಯೋಧ್ಯಯಲ್ಲಿ ಜನಿಸಿದ ದಶರಥ ಕುಮಾರನಿಗೆ ಶ್ರೀರಾಮ ಎಂಬ ನಾಮವನ್ನೇ ಇಡಲು ಸೂಚಿಸಿದರು.
ಯೋಗದ ತತ್ತ್ವಶಾಸ್ತ್ರದಲ್ಲಿ, ‘ರಾ’ ಅನ್ನು ‘ಮೂಲಧಾರ’ ಎಂದು ಪರಿಗಣಿಸಲಾಗುತ್ತದೆ ಮತ್ತು ‘ಮಾ’ ‘ಸಹಸ್ರಾರ’ (ಆಗಿದೆ. ಆದ್ದರಿಂದ, ರಾಮ ನಾಮವನ್ನು ಸರಿಯಾದ ಸ್ವರದಲ್ಲಿ ಮತ್ತು ರೀತಿಯಲ್ಲಿ ಜಪಿಸಿದಾಗ, ಏಕಾಗ್ರತೆ ಸಹಿತ ಸರ್ಪಶಕ್ತಿಯು ದೇಹದಲ್ಲಿ ಕ್ರೋಢೀಕರಿಸುತ್ತದೆ. ಹೀಗೆ, ಕೇವಲ ರಾಮ ನಾಮವನ್ನು ಜಪಿಸುವುದರಿಂದ, ಒಬ್ಬನು ಯೋಗಿಯಾಗಬಹುದು. ಇನ್ನು ವಿಷ್ಣು ಸಹಸ್ರನಾಮದಲ್ಲಿ, ರುದ್ರದೇವರು ಪಾರ್ವತಿದೇವಿಗೆ ಏಕಾಂತದಲ್ಲಿ
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರ-ನಾಮ ತತ್-ತುಲ್ಯಂ ರಾಮ-ನಾಮ ವರಾನನೇ ||
ಮಂತ್ರವನ್ನು ಉಪದೇಶಿಸಿ ಇದು ಸರ್ವಸಿದ್ಧಿಪ್ರದಾಯಕ, ಮುಕ್ತಿದಾಯಕ ಎಂದು ರುದ್ರದೇವರೇ ಪಾರ್ವತಿದೇವಿಗೆ ತಿಳಿಸಿದ್ದಾರೆ. ಹಾಗು ರಾಮನಾಮವನ್ನು ಜಪಿಸುವುದರಿಂದ ೩೩ ಕೋಟಿ ದೇವತೆಗಳನ್ನೂ ಆವಾಹಿಸಿಕೊಂಡ ದೇಹವನ್ನು ಕಾಪಾಡುತ್ತಾರೆ ಎಂಬುದು ರಾಮ ನಾಮದ ವಿಶೇಷ.
ಸಾಮಾನ್ಯವಾಗಿ, ವೈಷ್ಣವರು, ಭಗವಾನ್ ವಿಷ್ಣುವನ್ನು ಮತ್ತು ಅವನ ರೂಪಗಳನ್ನು ಪರಮಾತ್ಮನೆಂದು ಪೂಜಿಸುತ್ತಾರೆ. ವೈಷ್ಣವರಿಗೆ ಅತ್ಯಂತ ಮಹತ್ವದ ಮಂತ್ರವೆAದರೆ ‘ಅಷ್ಟಾಕ್ಷರಿ’ (‘ಓಂ ನಮೋ ನಾರಾಯಣ’). ಶಿವನನ್ನು ಪರಮಾತ್ಮನೆಂದು ಪೂಜಿಸುವ ಶೈವರಿಗೆ ಅತ್ಯಂತ ಮಹತ್ವದ ಮಂತ್ರ ಪಂಚಾಕ್ಷರಿ ಮಂತ್ರ, ‘ಓಂ ನಮ ಶಿವಾಯ’.
‘ರ’ ಅಕ್ಷರವಿಲ್ಲದೆ, ‘ನಾರಾಯಣ’, ‘ನಯಣ’ ಎಂದು ಆಗುತ್ತದೆ ಅಂದರೆ ದಾರಿಯಿಲ್ಲದವನು ಎಂದರ್ಥ; ‘ಮ’ ಅಕ್ಷರವಿಲ್ಲದೆ, ‘ನಮ ಶಿವಾಯ’ ‘ನಶಿವಾಯ’ ಎಂದು ಓದುತ್ತದೆ. ಅಂದರೆ ಅದು ಅಶುಭ. ಆದ್ದರಿಂದ ಈ ಎರಡು ಮಂತ್ರಗಳ ಜೀವ ಅಕ್ಷರ (ಜೀವ ನೀಡುವ ಅಕ್ಷರಗಳು) ‘ರಾ’ ಮತ್ತು ‘ಮ’, ಹೀಗೆ ರಾಮನಾಮ ಪಠಿಸುವ ಎಲ್ಲರೂ ಭಗವಾನ್ ವಿಷ್ಣು ಹಾಗು ಮಹಾ ರುದ್ರದೇವರನ್ನು ಏಕಕಾಲದಲ್ಲಿ ಸಾಕ್ಷತ್ಕರಿಸಿಕೊಳ್ಳಬಹುದು. ಆದ್ದರಿಂದ ಶ್ರೀರಾಮನಾಮಾವನ್ನು ಎಲ್ಲಾ ಜಾತಿಯವರು, ಎಲ್ಲಾ ಕುಲದವರು ಸರ್ವಕಾಲದಲ್ಲೂ, ನಾವು ಯಾವ ಸ್ಥಿತಿಯಲ್ಲಿ (ಮನೆ, ಆಫೀಸ್, ಮುಂಜಾನೆಯ ನಡುಗೆ, ಅಡುಗೆ, ಊಟ, ವಿಹಾರಕ್ಕೆ ಹೋದಾಗಲೂ) ಇದ್ದರೂ ಜಪಿಸಬಹುದು. ಅಯೋಧ್ಯಯಲ್ಲಿ ಬಾಲರಾಮನ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಈ ಸುಸಂದರ್ಭದಲ್ಲಿ ನಿತ್ಯದಲ್ಲೂ ನೂರೆಂಟು ಬಾರಿ ಶ್ರೀ ರಾಮನಾಮ ಜಪಿಸಿ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು.