Home ತಾಜಾ ಸುದ್ದಿ ಸಂವಿಧಾನದಲ್ಲಿ ಅಡಕವಾಗಿರುವ ನಾಗರಿಕ ಹಕ್ಕನ್ನು ಕಸಿದುಕೊಂಡಿದ್ದಾರೆ

ಸಂವಿಧಾನದಲ್ಲಿ ಅಡಕವಾಗಿರುವ ನಾಗರಿಕ ಹಕ್ಕನ್ನು ಕಸಿದುಕೊಂಡಿದ್ದಾರೆ

0

ಮತಾಂತರ, ಲವ್‌ಜಿಹಾದ್‌, ಭಯೋತ್ಪಾದನೆ, ಡ್ರಗ್ ಮಾಫಿಯಾ ವಿರುದ್ಧ ಪ್ರತಿಭಟನೆಗೆ ಮಂಗಳೂರು ನಗರ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಈ ಮೂಲಕ ಸಂವಿಧಾನದಲ್ಲಿ ಅಡಕವಾಗಿರುವ ನಾಗರಿಕ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ಹಿಂದು ಮಹಿಳಾ ಸುರಕ್ಷಾ
ಸಮಿತಿ ಆರೋಪಿಸಿದೆ.
ಮಂಗಳೂರಿನ ತಾಲೂಕು ಕಚೇರಿ ಎದುರು ಸೋಮವಾರ ಆಯೋಜಿಸಿದ್ದ ಲವ್‌ ಜಿಹಾದ್‌ ವಿರುದ್ಧದ ಪ್ರತಿಭಟನೆಗೆ ನಗರ ಪೊಲೀಸ್‌ ಕಮಿಷನರ್‌ ಅನುಮತಿ ನೀಡದ್ದನ್ನು ವಿರೋಧಿಸಿ ಸಮಿತಿ ಪ್ರಮುಖರಾದ ಶ್ರೀಲಕ್ಷ್ಮೀ ಮಠದಮೂಲೆ ಬಳಿಕ ವಿಶ್ವ ಹಿಂದು ಪರಿಷತ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದೂ ಸಮಾಜವನ್ನು ಲವ್‌ ಜಿಹಾದ್‌ ವಿರುದ್ಧ ಜಾಗೃತಿಗೊಳಿಸುವ ಉದ್ದೇಶಕ್ಕಾಗಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಪೊಲೀಸರ ಅಥವಾ ಸರ್ಕಾರದ ವಿರುದ್ಧ ನಮ್ಮ ಪ್ರತಿಭಟನೆ ಆಗಿರಲಿಲ್ಲ. ಆದರೆ ಪೊಲೀಸ್‌ ಕಮಿಷನರ್‌ ಅನುಮತಿಸಲು ನಿರಾಕರಿಸಿದ್ದಾರೆ. ಇವರ ನಿರ್ಧಾರದ ಹಿಂದೆ ಯಾರೋ ಪ್ರಭಾವಿಗಳ ಒತ್ತಡ ಇರುವುದು ಭಾಸವಾಗುತ್ತಿದೆ ಎಂದರು. ಇನ್ನೋರ್ವ ಪ್ರಮುಖರಾದ ರೂಪಾ ಬಂಗೇರ ಮಾತನಾಡಿ, ಮಹಿಳೆಯರ ರಕ್ಷಣೆ, ಜಾಗೃತಿ ಕುರಿತು ಪ್ರತಿಭಟನೆ ನಡೆಸುವ ಹಕ್ಕು ಇಲ್ಲ ಎಂದಾದರೆ, ಮಹಿಳೆಯರ ಸುರಕ್ಷತೆಯನ್ನು ಗಮನಿಸುವ ಜವಾಬ್ದಾರಿ ಪೊಲೀಸ್‌ ಇಲಾಖೆಗೆ ಇಲ್ಲವೇ? ಇಂದಿನ ದಿನಗಳಲ್ಲಿ ಮನೆಯಿಂದ ಹೊರಗೆ ಹೋಗ ಮಹಿಳೆಯರು ಸುರಕ್ಷಿವಾಗಿ ವಾಪಸ್‌ ಬರುತ್ತಾರೆ ಎಂಬ ಖಚಿತತೆ ಇಲ್ಲ. ಇಂತಹ ಸನ್ನಿವೇಶದಲ್ಲಿ ಮತಾಂತರ, ಲವ್‌ ಜಿಹಾದ್‌ಗಳಿಗೆ ಸರ್ಕಾರ ಕಡಿವಾಣ ಹಾಕಬೇಕು ಎಂದರು. ವಕೀಲ ಹರೀಶ್‌ ಕುಮಾರ್‌ ಮಾತನಾಡಿ, ಮಂಗಳೂರು ಪೊಲೀಸರು ರಾಜ್ಯ ಸರ್ಕಾರದ ಏಜೆನ್ಸಿಯಂತೆ ವರ್ತಿಸುತ್ತಿದ್ದಾರೆ. ಲವ್‌ ಜಿಹಾದ್‌, ಮತಾಂತರ ಇಲ್ಲ ಎಂದು ಹೇಳುವ ಪೊಲೀಸ್‌ ಅಧಿಕಾರಿಗಳು, ಮುಂದೆ ಉಗ್ರವಾದವೂ ಇಲ್ಲ ಎನ್ನಬಹುದು. ಪ್ರಸ್ತುತ ಪ್ರತಿಭಟನೆಯನ್ನು ಮುಂದೂಡಿದ್ದು, ಮುಂದೆ ಬೃಹತ್‌ ಹೋರಾಟ ನಡೆಸುವುದಾಗಿ ಹೇಳಿದರು. ಸಕಲೇಶಪುರದಿಂದ ಉಪ್ಪಿನಂಗಡಿಗೆ ಆಗಮಿಸುವ ಬಸ್‌ನಲ್ಲಿ ಅನ್ಯಮತೀಯನೊಬ್ಬ ಹಿಂದು ಯುವತಿಗೆ ಕಿರುಕುಳ ನೀಡಿದ್ದು, ಈ ಕುರಿತ ವಿಡಿಯೋ ವೈರಲ್‌ ಆಗಿದ್ದರೂ ಕಾಮುಕನ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಕ್ರಮ ಕೈಗೊಂಡಿಲ್ಲ. ಆತನ ವಿರುದ್ಧ ಸಂತ್ರಸ್ತೆಯೇ ಪೊಲೀಸರಿಗೆ ದೂರು ನೀಡಲಿದ್ದಾರೆ ಎಂದು ದ.ಕ. ಸುರಕ್ಷಾ ಸಂಕುಲ ಸಂಚಾಲವಕ ಪುನೀತ್ ಅತ್ತಾವರ ತಿಳಿಸಿದರು. ಪ್ರಮುಖರಾದ ಶ್ವೇತಾ ಆದ್ಯಪಾಡಿ, ಸುಕನ್ಯಾ ರಾವ್‌ ಮತ್ತಿತರರಿದ್ದರು.

Exit mobile version