Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಅಶೋಕಾ ಜನಮನದಲ್ಲಿ ನೂಕುನುಗ್ಗಲು: 11ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಅಶೋಕಾ ಜನಮನದಲ್ಲಿ ನೂಕುನುಗ್ಗಲು: 11ಕ್ಕೂ ಹೆಚ್ಚು ಮಂದಿ ಅಸ್ವಸ್ಥ

0

ಸಂ.ಕ. ಸಮಾಚಾರ, ಪುತ್ತೂರು: ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಶೋಕಾ ಜನಮನ ದೀಪಾವಳಿ ಕೊಡುಗೆ ವಿತರಣಾ ಕಾರ್ಯಕ್ರಮವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಿದ್ದು, ಈ ಕಾರ್ಯಕ್ರಮದಲ್ಲಿ ಉಂಟಾದ ನೂಕುನುಗ್ಗಲಿನಿಂದ ಆಮ್ಲಜನಕದ ಕೊರತೆ ಉಂಟಾಗಿ 11ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅಸ್ವಸ್ಥರಾದವರನ್ನು ದಾಖಲಿಸಲಾಗಿದ್ದು, ಯೋಗಿತಾ(20), ಸಭಾ ಮಾಡಾವು(20), ಅಮೀನಾ ಪಾಟ್ರಕೋಡಿ(56), ನೇತ್ರಾವತಿ ಇರ್ದೆ ( 37), ಲೀಲಾವತಿ ಕಡಬ(50), ವಸಂತಿ ಬಲ್ನಾಡು (53), ಕುಸುಮ (62), ರತ್ನಾವತಿ ಪೆರಿಗೇರಿ( 67), ಅಫೀಲಾ ಪಾಟ್ರಕೋಡಿ( 20), ಸ್ನೇಹಪ್ರಭಾ ( 41) ಹಾಗೂ ಜಸೀಲಾ (30) ಆಮ್ಲಜನಕದ ಕೊರತೆಯಿಂದ ಅಸ್ವಸ್ಥಗೊಂಡಿದ್ದಾರೆ. ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ ಹೆಚ್ಚು ಮಂದಿ ಭಾಗಿಯಾದ ಕಾರಣ ನೂಕುನುಗ್ಗಲು ಉಂಟಾಯಿತು. ಈ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದ ಜನರು ಅಸ್ವಸ್ಥರಾದರು. ಕುಡಿಯಲು ನೀರೂ ಸಿಗದೆ ಪರದಾಟ ಉಂಟಾಯಿತು. ಸಣ್ಣ ಸಣ್ಣ ಮಕ್ಕಳನ್ನು ಹಿಡಿದುಕೊಂಡು ಬಂದಿದ್ದ ಹೆಂಗಸರು ಪಡಬಾರದ ಕಷ್ಟ ಅನುಭವಿಸುವಂತಾಯಿತು.

ಮಳೆಯ ಕಾರಣ ಕೆಸರು ತುಂಬಿದ್ದ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಯಿತು. ಬೆಳಿಗ್ಗೆಯೇ ಕಾರ್ಯಕ್ರಮಕ್ಕೆ ಬಂದಿದ್ದ ಸಹಸ್ರಾರು ಮಂದಿ 3 ಗಂಟೆ ತನಕ ಕಾಯಬೇಕಾಯಿತು. ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಆಗಮಿಸಿದಾಗ 1:30 ರ ಬಳಿಕ ಸಭಾ ಕಾರ್ಯಕ್ರಮ ನಡೆದು ಕಾರ್ಯಕ್ರಮ ಮುಗಿದಾಗ 3 ಗಂಟೆಯಾಗಿತ್ತು. ಹಸಿವಿನಿಂದ ಕಂಗಾಲಾಗಿದ್ದ ಮಂದಿ ಊಟ ಕೊಡಲು ಆರಂಭಿಸಿದಾಗ ಒಮ್ಮೆಲೆ ನೂಕುನುಗ್ಗಲು ಉಂಟಾಯಿತು. ಇದರ ಪರಿಣಾಮ ಆಮ್ಲಜನಕದ ಕೊರತೆ ಉಂಟಾಯಿತು.

NO COMMENTS

LEAVE A REPLY

Please enter your comment!
Please enter your name here

Exit mobile version