ಮಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ಕಂಬಳಕ್ಕೆ ಅಡ್ಡಗಾಲು ಹಾಕಿದ ಪೇಟಾ(ಪೀಪಲ್ ಫಾರ್ ದ ಎಥಿಕಲ್ ಟ್ರೀಟ್ಮೆಂಟ್ ಆಫ್ ಎನಿಮಲ್ಸ್) ಮುಂದಿನ ಏಪ್ರಿಲ್‌ನಲ್ಲಿ ಶಿವಮೊಗ್ಗದಲ್ಲಿ ನಡೆಯಲಿರುವ ಕಂಬಳ ವಿರುದ್ಧವೂ ಹೈಕೋರ್ಟ್ ಮೆಟ್ಟಿಲೇರಿದೆ. ಇದೇ ವೇಳೆ ಕಂಬಳಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಶಿವಮೊಗ್ಗ ಕಂಬಳ ಸಮಿತಿಯೂ ಕೋರ್ಟ್ ಬಾಗಿಲು ತಟ್ಟಿದೆ.
ಬೆಂಗಳೂರಿನಲ್ಲಿ ಕಳೆದ ಡಿಸೆಂಬರ್ ೨೫ರಂದು ಎರಡನೇ ವರ್ಷದ ಕಂಬಳ ನಡೆಸಲು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಸಿದ್ಧತೆಗೆ ಮುಂದಾದಾಗ ಪೇಟಾ ಅಡ್ಡಗಾಲು ಹಾಕಿತ್ತು. ಬೆಂಗಳೂರು ಕಂಬಳದ ದಿನಾಂಕ ನಿಗದಿಯಾಗಿಲ್ಲ ಎಂದು ಕಂಬಳ ಸಮಿತಿ ಕೋರ್ಟ್‌ಗೆ ಸ್ಪಷ್ಟನೆ ನೀಡಿತ್ತು. ಬಳಿಕ ಮಂಗಳೂರಿನ ಪಿಲಿಕುಳ ಕಂಬಳ ನಿಗದಿಯಾದಾಗ ಅದಕ್ಕೂ ಪೇಟಾ ತಡೆಗೆ ಯತ್ನಿಸಿತು. ಪಿಲಿಕುಳ ಕಂಬಳ ಮೃಗಾಲಯ ಸಮೀಪವೇ ನಡೆಯುವುದರಿಂದ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎಂದು ಕೋರ್ಟ್‌ಗೆ ರಿಟ್ ಸಲ್ಲಿಸಿದೆ. ಈ ನಡುವೆ ಶಿವಮೊಗ್ಗ ಕಂಬಳ ಏಪ್ರಿಲ್ ೧೯ ಮತ್ತು ೨೦ರಂದು ನಿಗದಿಯಾಗಿದೆ. ಇದರ ವಿರುದ್ಧವೂ ಹೈಕೋರ್ಟ್‌ಗೆ ಎರಡು ತಿಂಗಳ ಹಿಂದೆಯೇ ಪೇಟಾ ದೂರು ನೀಡಿದೆ.
ಕಂಬಳ ಜಾನಪದ ಕ್ರೀಡೆಯಾಗಿದ್ದು, ಅದನ್ನು ದ.ಕ ಹಾಗೂ ಉಡುಪಿ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ನಡೆಸಲು ಅವಕಾಶ ನೀಡಬಾರದು ಎಂಬ ತರ್ಕವನ್ನು ಮುಂದೊಡ್ಡಿದೆ. ಆದರೆ ಶಿವಮೊಗ್ಗ ಕಂಬಳ ಸಮಿತಿ ಅಧ್ಯಕ್ಷರಾದ ಅವಿಭಜಿತ ದ.ಕ.ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿರುವ ಲೋಕೇಶ್ ಶೆಟ್ಟಿ ಅವರು ಹೈಕೋರ್ಟ್ಗೆ ಮನವಿ ಸಲ್ಲಿಸಿ ಕಂಬಳ ನಡೆಸಲು ಅವಕಾಶ ನೀಡುವಂತೆ ಕೋರಿದ್ದಾರೆ.
ಶಿವಮೊಗ್ಗದಲ್ಲಿ ನಡೆಯುವ ಕಂಬಳದಲ್ಲಿ ಭಾಗವಹಿಸುವುದು ಅವಿಭಜಿತ ದ.ಕ. ಜಿಲ್ಲೆಯ ಕಂಬಳ ಯಜಮಾನರು, ಕೋಣಗಳು ಹಾಗೂ ಕೋಣ ಓಡಿಸುವವರು. ಹಾಗಾಗಿ ಇದರಲ್ಲಿ ಯಾವುದೇ ವ್ಯತ್ಯಾಸಗಳು ಇಲ್ಲ. ಹಾಗಾಗಿ ಪೇಟಾದ ತಡೆ ಬೇಡಿಕೆಯನ್ನು ನಿರಾಕರಿಸಿ ಕಂಬಳಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಸ್ವೀಕೃತವಾಗಿದೆ ಎಂದಿದ್ದಾರೆ.