ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ೧೮೪ ರೌಡಿಗಳನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ಮುಚ್ಚಳಿಕೆ ಪತ್ರ ಬರೆಸಿಕೊಂಡು ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾ ಎಸ್ಪಿ ಅಂಶುಕುಮಾರ್ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಅಕ್ರಮಕ್ಕೆ ಸಂಬಂಧಪಟ್ಟಂತೆ ೩ ಎಫ್‌ಐಆರ್ ಹಾಗೂ ೨ ಎನ್‌ಸಿಆರ್ ದಾಖಲಿಸಿಕೊಂಡಿದ್ದೇವೆ ಎಂದರು.
‘ರೌಡಿ ಪಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಸರು ಇದೆಯಾ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅಂಶುಕುಮಾರ್, ‘ಹೌದು ಇದೆ. ಸಂಬಂಧಪಟ್ಟ ಠಾಣೆ ಪೊಲೀಸರು, ಅವರಿಂದಲೂ ಮುಚ್ಚಳಿಕೆ ಬರೆಸಿಕೊಂಡಿರಬಹುದು. ಈ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.
ಬಳಿಕ ಸಂಜೆ ವೇಳೆಗೆ ಪತ್ರಿಕಾ ಪ್ರಕಟಣೆ ನೀಡಿರುವ ಎಸ್ಪಿ ಅಂಶುಕುಮಾರ್, ಶಿಗ್ಗಾವಿಯ ಡಿಎಸ್‌ಪಿ ಹಾಗೂ ಪಿಐ ಅವರ ಕಚೇರಿಯ ದಾಖಲಾತಿಗಳನ್ನು ಪರಿಶೀಲಿಸಲಾಗಿ ಪ್ರಸ್ತುತ ಯಾಸೀರ್ ಅಹ್ಮದ್ ಪಠಾಣ ಅವರ ಮೇಲೆ ಯಾವುದೇ ರೀತಿ ರೌಡಿ ಶೀಟ್ ಇರುವುದಿಲ್ಲ ಎಂದು ತಿಳಿಸಿದ್ದಾರೆ.