ಬಾಳೆಹೊನ್ನೂರು: ರಾಜ್ಯ ಸರ್ಕಾರ ಜಾತಿಗಣತಿ ಜಾರಿಗೊಳಿಸಲು ಮುಂದಾಗಿದ್ದು, ಜಾತಿಗಣತಿ ವರದಿ ಪೂರ್ವ ನಿಯೋಜಿತವಾಗಿದ್ದು, ಮತ್ತೊಮ್ಮೆ ಪರಾಮರ್ಶೆಗೆ ಒಳಪಡಿಸಬೇಕು ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರು ತಿಳಿಸಿದ್ದಾರೆ.
ರಂಭಾಪುರಿ ಪೀಠದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಜಾತಿಗಣತಿ ವಿಚಾರ ಕಳೆದ ೧೦ ವರ್ಷಗಳಿಂದ ಚರ್ಚೆಯಲ್ಲಿದೆ. ವರದಿ ಸಂಬಂಧ ಕೆಲವರು ಪರ ಇದ್ದರೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಪೂರ್ವ ನಿಯೋಜಿತ ವರದಿ ಎನ್ನುವುದು ಜನರಿಗೆ ಗೊತ್ತಾಗಿದೆ. ಜನರು ಏನು ದಡ್ಡರಲ್ಲ, ವರದಿಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಒಕ್ಕಲಿಗರ ಸಂಘ, ನಾಡಿನ ಮಠಾಧೀಶರು, ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಜಾತಿಗಣತಿ ವರದಿ ಮತ್ತೊಮ್ಮೆ ಪರಾಮರ್ಶಿಸಿ ಮಾಡಿದಲ್ಲಿ ಎಲ್ಲಾ ವರ್ಗದ ಜನರಿಗೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಾಗುತ್ತದೆ.
ಕೆಲವು ಸಮುದಾಯಗಳನ್ನು ತೃಪ್ತಿಪಡಿಸುವುದಕ್ಕಾಗಿ ತರಾತುರಿಯಲ್ಲಿ ವರದಿ ಜಾರಿಗೆ ತಂದಲ್ಲಿ ಮತ್ತಷ್ಟು ಜಾತಿ ಸಂಘರ್ಷ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಸರಿಯಾದ ಜಾತಿಗಣತಿ ಹೊರ ಬಂದರೇ, ಮೀಸಲಾತಿ ಎಷ್ಟು ಹೆಚ್ಚು ಮಾಡಬೇಕೆನ್ನುವುದು ತಿಳಿಯುತ್ತದೆ. ಸಂವಿಧಾನದ ರೇಖೆ ಮೀರಿದರೇ ಸಂಘರ್ಷಕ್ಕೆ ಕಾರಣವಾಗುತ್ತದೆ. ಅದಕ್ಕೆ ನಮ್ಮನ್ನಾಳುವ ಸರ್ಕಾರ ಅವಕಾಶ ನೀಡಬಾರದು. ಎಲ್ಲಾ ಪಕ್ಷದ ಪ್ರಜ್ಞಾವಂತರು ಜಾತಿಗಣತಿ ವರದಿ ಜಾರಿ ಖಂಡಿಸಿದ್ದಾರೆ. ಹೈಕಮಾಂಡ್ ಒತ್ತಾಸೆಗೆ ಒಳಗಾಗಿ ಮುಖ್ಯಮಂತ್ರಿಗಳು ವರದಿ ಜಾರಿಗೆ ತರಲು ಮುಂದಾದರೆ ಮುಂದೆ ತೊಂದರೆಯಾಗಬಹುದು. ಮುಖ್ಯಮಂತ್ರಿಗಳು ಯೋಚನೆ ಮಾಡಿ ಶಾಸಕರ ಅಭಿಪ್ರಾಯ ಪಡೆಯಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.