Home News ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ

ಸರ್ಕಾರ ಹತ್ತು ಸುಗ್ರೀವಾಜ್ಞೆ ಜಾರಿಗೊಳಿಸಿದರೂ ಕಿರುಕುಳ ತಪ್ಪಿಸಲು ಸಾಧ್ಯವಿಲ್ಲ.

ಮೋದಿ ಬದಲಾವಣೆಯ ಬಗ್ಗೆ ನೀವು ಮಾತನಾಡುತ್ತಿದ್ದೀರಿ, ನೀವು ಮೊದಲು ರಾಹುಲ್ ಗಾಂಧಿಯನ್ನು ಬದಲಾಯಿಸಿ

ನಾನೊಬ್ಬ ನಿಷ್ಟಾವಂತ ಕಾರ್ಯಕರ್ತ ರಾಜ್ಯಾಧ್ಯಕ್ಷ ಸ್ಥಾನವನ್ನು ನನಗೇ ಕೊಟ್ಟರೂ ಜವಾಬ್ದಾರಿಯಿಂದ ನಿಭಾಯಿಸುವೆ

ಹುಬ್ಬಳ್ಳಿ: ಮೈಕ್ರೋ ಫೈನಾನ್ಸ್‌ಗಳಿಂದ ಜನರಿಗೆ ಆಗುತ್ತಿರುವ ಕಿರುಕುಳಕ್ಕೆ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಕಾರಣ. ಸಡಿಲು ನೀತಿಯಿಂದಲೇ ಕಿರುಕುಳ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ ಶೆಟ್ಟರ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃಕ್ರೋ ಫೈನಾನ್ಸ್‌ಗಳ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಹತ್ತು ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಿದರೂ ಕಿರುಕುಳ ತಪ್ಪಿಸಲು ಸಾಧ್ಯವಿಲ್ಲ. ಬಡ ಮತ್ತು ಮಧ್ಯಮ ವರ್ಗದವರಿಗೆ ಸುಲಭವಾಗಿ ಸಾಲ ಸಿಗುವ ವ್ಯವಸ್ಥೆ ಇದಾಗಿರುವುದರಿಂದ ಮೃಕ್ರೋ ಫೈನಾನ್ಸ್ ನಿಯಂತ್ರಣ ಸುಲಭದ ಮಾತಲ್ಲ ಎಂದರು.
ರಾಜ್ಯ ಸರ್ಕಾರವೇ ಬಡ, ಸಾಮಾನ್ಯ ವರ್ಗದವರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲದ ವ್ಯವಸ್ಥೆಯನ್ನು ಕಲ್ಪಿಸಬೇಕು. ಹೀಗಾದಲ್ಲಿ ಮೈಕ್ರೋ ಫೈನಾನ್ಸ್ ಮತ್ತು ಖಾಸಗಿ ಲೇವಾದೇವಿದಾರರ ಅಡ್ರೆಸ್ಸೇ ಇರುವುದಿಲ್ಲ. ಇದರ ಹೊರತಾಗಿ ಸರ್ಕಾರ ಫೈನಾನ್ಸ್‌ಗಳ ಮೇಲೆ ಕಠಿಣ ಕ್ರಮ ಕೈಗೊಂಡರೆ ಬಡವರಿಗೆ ಸುಲಭವಾಗಿ ಸಾಲ ಸಿಗದಂತಾಗಿ, ಬೀದಿಗೆ ಬಿದ್ದು, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತವೆ. ಸಾಲ ಸುಲುಭವಾಗಿ ಸಿಗುವಂತಹ ಪರ್ಯಾಯ ವ್ಯವಸ್ಥೆ ತರಬೇಕು ಎಂದರು.

ಪೊಲೀಸ್ ವ್ಯವಸ್ಥೆ ಮತ್ತು ಖಾಸಗಿ ಲೇವಾದೇವಿದಾರರ ನಡುವೆ ಒಳ ಒಪ್ಪಂದವಿದೆ. ಹೀಗಾಗಿ ಸುಗ್ರೀವಾಜ್ಞೆಗೆ ಬೆಲೆ ಇಲ್ಲದಂತಾಗಿದೆ. ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಹಲವೆಡೆ ಆತ್ಮಹತ್ಯೆಗಳು ಇನ್ನೂ ಮುಂದುವರೆದಿವೆ. ಸರ್ಕಾರ ಯಾವ ಅಧಿಕಾರಿ ಮೇಲೆ ಕ್ರಮ ಕೈಗೊಂಡಿದೆ? ಮುಖ್ಯಮಂತ್ರಿ ಹೇಳಿದರು ಕಾನೂನು ಜಾರಿಗೆ ಬರುತ್ತಿಲ್ಲ. ಕಾನೂನು ಜಾರಿಗೆ ತರದ ಅಧಿಕಾರಿಗಳನ್ನು ಹೊಣೆ ಮಾಡಬೇಕು. ಒಬ್ಬ ಅಧಿಕಾರಿಯನ್ನು ಅಮಾನತು ಮಾಡಿದರೆ ಮುಂದಿನವರು ಕಾನೂನು ಪಾಲನೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಮಾನದ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿ ಯತ್ನಾಳ್ ಸೇರಿದಂತೆ ಮತ್ತಿತರರು ನೀಡಿರುವ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಈಗಾಗಲೇ ರಾಜ್ಯಧ್ಯಕ್ಷ ಸ್ಥಾನದಲ್ಲಿ ಒಬ್ಬರು ಇದ್ದಾರೆ. ಚುನಾವಣೆಯೂ ಬಂದಿದೆ, ಯಾರನ್ನು ನೇಮಕ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ನಾನೊಬ್ಬ ನಿಷ್ಟಾವಂತ ಕಾರ್ಯಕರ್ತ ರಾಜ್ಯಾಧ್ಯಕ್ಷ ಸ್ಥಾನವನ್ನು ನನಗೇ ಕೊಟ್ಟರೂ ಜವಾಬ್ದಾರಿಯಿಂದ ನಿಭಾಯಿಸುತ್ತೇನೆ ಎಂದರು.
ಮೋದಿ ಅವರನ್ನು ಬದಲಾಯಿಸುವ ಚರ್ಚೆ ನಡೆದಿದೆ ಎಂಬ ಸಂತೋಷ್ ಲಾಡ್ ಹೇಳಿಕೆಗೆ ತಿರುಗೇಟು ನೀಡಿರುವ ಶೆಟ್ಟರ, ಕಾಂಗ್ರೆಸ್ ನಾಯಕರಿಗೆ ಮುಸ್ಲಿಂ, ಅಲ್ಪಸಂಖ್ಯಾತರನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ. ದೆಹಲಿಯಲ್ಲಿ ಕಾಂಗ್ರೆಸ್‌ಗೆ ಒಂದು ಅಥವಾ ಎರಡು ಸೀಟು ಬಂದರೆ ದೊಡ್ಡ ಮಾತು. ಮೋದಿ ಬದಲಾವಣೆಯ ಬಗ್ಗೆ ನೀವು ಮಾತನಾಡುತ್ತಿದ್ದೀರಿ, ನೀವು ಮೊದಲು ರಾಹುಲ್ ಗಾಂಧಿಯನ್ನು ಬದಲಾಯಿಸಿ. ಆಗಲಾದರೂ ಕಾಂಗ್ರೆಸ್ ಸುಧಾರಿಸುತ್ತದೆ. ಮೋದಿಯಂತಹ ದೊಡ್ಡ ವ್ಯಕ್ತಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡುವುದು ಸರಿಯಲ್ಲ. ಮೋದಿ ಬದಲಾವಣೆ ಬಗ್ಗೆ ಯಾರು ಮಾತನಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಎಲ್ಲಿ ಚರ್ಚೆ ನಡೆದಿದೆ ಅಂತ ಬಹಿರಂಗವಾಗಿ ಹೇಳಲಿ ಎಂದು ಅವರು ಆಗ್ರಹಿಸಿದರು.

Exit mobile version