Home News ಮೇಲುಕೋಟೆಯಲ್ಲಿ ವೈರಮುಡಿ ಉತ್ಸವಕ್ಕೆ ಸಕಲ ಸಿದ್ಧತೆ

ಮೇಲುಕೋಟೆಯಲ್ಲಿ ವೈರಮುಡಿ ಉತ್ಸವಕ್ಕೆ ಸಕಲ ಸಿದ್ಧತೆ

ವರದಿ: ಲೋಕೇಶ್.ವಿ
ಮಂಡ್ಯ : ಪ್ರಸಿದ್ಧ ಯಾತ್ರಾಸ್ಥಳ ಮೇಲುಕೋಟೆಯಲ್ಲಿ ಶ್ರೀ ಚೆಲುವ ನಾರಾಯಣ ಸ್ವಾಮಿ ವೈರಮುಡಿ ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಮಂಡ್ಯದಿಂದ ಮೇಲುಕೋಟೆಗೆ ವಜ್ರ ಖಚಿತ ವೈರಮುಡಿ ಹಾಗೂ ರಾಜಮುಡಿ ಕಿರೀಟವನ್ನು ತೆಗೆದುಕೊಂಡು ಹೋಗಲಾಯಿತು.
ಸೋಮವಾರ ಬೆಳಿಗ್ಗೆ ಜಿಲ್ಲಾ ಖಜಾನೆಯಲ್ಲಿ ವೈರಮುಡಿ ಮತ್ತು ರಾಜಮುಡಿ ಕಿರೀಟವನ್ನು ಹೊರತೆಗೆದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು, ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಅಧಿಕಾರಿ ಕೆ ಆರ್ ನಂದಿನಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಲವರು ಪೂಜೆ ಸಮರ್ಪಿಸಿದರು.
ತರುವಾಯ ವಜ್ರ ಖಚಿತ ವೈರಮುಡಿ, ರಾಜ ಮುಡಿ ಕಿರೀಟವನ್ನು ಹೊತ್ತು ಭಕ್ತಿ ಭಾವ ಮೆರೆದು ಪರಕಾಲು ಮಠದ ವಾಹನದಲ್ಲಿ ಇರಿಸಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಶ್ರೀ ಲಕ್ಶ್ಮೀ ಜನಾರ್ಧನ ಸ್ವಾಮಿ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮೇಲುಕೋಟೆಯತ್ತ ಮೆರವಣಿಗೆ ಹೊರಟಿತು ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಇಂಡುವಾಳು, ಕೆ.ಶೆಟ್ಟಹಳ್ಳಿ, ಬಾಬುರಾಯನಕೊಪ್ಪಲು, ಶ್ರೀರಂಗಪಟ್ಟಣದಬನ್ನಿಮಂಟಪ, ಕಿರಂಗೂರು, ದರಸಗುಪ್ಪೆ, ಪಾಂಡವಪುರ, ಹರಳಹಳ್ಳಿ, ಬನಘಟ್ಟ, ಕೆ.ಹೊಸೂರು ಗೇಟ್, ಟಿ.ಎಸ್.ಛತ್ರ, ಬೆಳ್ಳಾಳೆ, ಅಮ್ಮತಿ, ನ್ಯಾಮನಹಳ್ಳಿ, ಜಕ್ಕನಹಳ್ಳಿ, ಕದಲಗೆರೆ ಮಾರ್ಗವಾಗಿ ಯಾತ್ರಾಸ್ಥಳ ಮೇಲುಕೋಟೆಗೆ ತೆರಳಲಿದ್ದು,ದಾರಿ ಯುದ್ಧಕ್ಕೂ ಹಳ್ಳಿ ಹಳ್ಳಿಗಳಲ್ಲಿ ವೈರಮುಡಿ ಕಿರೀಟಕ್ಕೆ ಜನತೆ ಪೂಜೆ ಸಮರ್ಪಿಸಿ ಪಾನಕ ಮಜ್ಜಿಗೆ ವಿತರಿಸಿ ಭಕ್ತಿಭಾವ ಮೆರೆದು ಪುನೀತ ರಾಗುವುದು ವೈರಮುಡಿ ವಿಶೇಷವಾಗಿದೆ.
ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿ ಸನ್ನಿಧಿಯಲ್ಲಿ ರಾತ್ರಿ ವಿಶೇಷ ಪೂಜೆ ಸಮರ್ಪಿಸಿದ ನಂತರ ಚಲುವನಾರಾಯಣಸ್ವಾಮಿಗೆ ವಿಶೇಷ ಅಲಂಕಾರದೊಂದಿಗೆ ವಜ್ರ ಖಚಿತ ವೈರಮುಡಿ ಕಿರೀಟ ಧಾರಣೆ ಮಾಡಲಾಗುವುದು. ಶ್ರೀದೇವಿ ಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣನ ವೈರಮುಡಿ ಉತ್ಸವ ಮಹಾಮಂಗಳಾರತಿಯೊಂದಿಗೆ ಆರಂಭಗೊಂಡು ಮುಂಜಾನೆವರೆಗೆ ನಡೆಯಲಿದ್ದು, ಲಕ್ಷಾಂತರ ಭಕ್ತರು ವೈರಮುಡಿ ಉತ್ಸವ ಕಣ್ತುಂಬಿಕೊಳ್ಳಲಿದ್ದಾರೆ.

Exit mobile version