ಬೆಳಗಾವಿ: ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರು ಬೆಂಗಳೂರಿಗೆ ವಿಶ್ವಮಾನ್ಯತೆ ತಂದು ಕೊಟ್ಟ ದಕ್ಷ ನಾಯಕ ಎಂದು ಸಚಿವ ಶಿವಾನಂದ ಪಾಟೀಲ ಅವರು ಬಣ್ಣಿಸಿದ್ದಾರೆ.
ಎಸ್.ಎಂ ಕೃಷ್ಣ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಸಚಿವರು, ಮುಖ್ಯಮಂತ್ರಿಯಾಗಿ ಒಳ್ಳೆಯ ಆಡಳಿತ ನೀಡಿದ ಕೃಷ್ಣ ಅವರು, ಹಲವು ಸಾಧನೆಯ ಮೈಲುಗಲ್ಲುಗಳಿಗೆ ಕಾರಣರಾಗಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದು ಕೃಷ್ಣ ಅವರ ಅವಧಿಯಲ್ಲೇ ಎಂದು ಸ್ಮರಿಸಿದ್ದಾರೆ.
ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ರಾಜ್ಯ ಮತ್ತು ರಾಷ್ಟ್ರಕ್ಕೆ ಅವರ ಕೊಡುಗೆ ಗಣನೀಯವಾಗಿದೆ. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆಯನ್ನು ಪರಿಚಯಿಸಿದರು. ಸ್ತ್ರೀಶಕ್ತಿ ಸಂಘಗಳಿಗೆ ಬಲ ಬಂದಿದ್ದು ಕೂಡ ಅವರ ಕಾಲದಲ್ಲೇ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಕೃಷ್ಣ ಅವರ ಅಗಲಿಕೆ ತುಂಬಲಾರದ ನಷ್ಟ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.