Home News ಪ್ರಾದೇಶಿಕ ಅಸಮಾನತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಾರಕ

ಪ್ರಾದೇಶಿಕ ಅಸಮಾನತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಾರಕ

೬೯ ವರ್ಷಗಳ ಹಿಂದಿನ ಮಾತು. ಭಾಷಾವಾರು ಪ್ರಾಂತ್ಯ ರಚನೆಯಾದಾಗ ಕಲ್ಯಾಣ ಕರ್ನಾಟಕದ ಭಾಗ ಸೇರ್ಪಡೆಗೊಂಡಾಗ ಹಳೆ ಮೈಸೂರು ಭಾಗದವರು ಒಪ್ಪಿರಲಿಲ್ಲ. ಏಕೆಂದರೆ ಅದು ಬರಡು ಭೂಮಿ-ಬಡತನವೇ ಹೆಚ್ಚು. ಈಗಲೂ ಅದೇ ಪರಿಸ್ಥಿತಿ ಮುಂದುವರಿದಿದೆ. ನಿಜವಾಗಿಯೂ ಹೇಳಬೇಕೆಂದರೆ ಕಲ್ಯಾಣ ಕರ್ನಾಟಕದ ಜನ ಹೃದಯ ಶ್ರೀಮಂತರು. ಮಾತು-ಕೃತಿ ಎರಡರಲ್ಲೂ ನೇರಾನೇರ. ಅಲ್ಲಿಯ ಪ್ರಮುಖ ಕೊರತೆ ಎಂದರೆ ಮಾನಸಿಕ ಜಡತ್ವ. ಉದ್ಯಮಶೀಲರಲ್ಲ. ಈಗಲೂ ಅಲ್ಲಿಯ ಯುವಕರಿಗೆ ಸರ್ಕಾರಿ ನೌಕರಿ ಗಿಟ್ಟಿಸುವುದೇ ಜೀವನದ ಗುರಿ. ಏಕೆಂದರೆ ಪಿಂಚಣಿ ಸಿಗುತ್ತದೆ. ಬಹುತೇಕ ಜನ ಜೀವನದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಅಲ್ಲಿ ಡಿಗ್ರಿ ಪಡೆದವನು ಹಳೆ ಮೈಸೂರು ಭಾಗದ ಪಿಯುಸಿ ವಿದ್ಯಾರ್ಥಿಗೆ ಸಮಾನ. ಇಲ್ಲಿ ಪಿಯುಸಿ ಓದುವಾಗಲೇ ವಿದ್ಯಾರ್ಥಿ ತಾನು ಮುಂದೇನು ಆಗಬೇಕು ಎಂದು ಚಿಂತಿಸುತ್ತಾನೆ. ಅಲ್ಲಿಯವರಿಗೆ ಈ ರೀತಿಯ ಕನಸೇ ಇರುವುದಿಲ್ಲ. ಅಲ್ಲಿಯ ಗ್ರಾಮಗಳಿಗೆ ಹೋದರೆ ಊರಿಗೆಲ್ಲ ಒಬ್ಬರು- ಇಬ್ಬರು ಮಾತ್ರ ಶ್ರೀಮಂತರು. ಉಳಿದವರೆಲ್ಲ ಕೂಲಿಕಾರರು. ಮಧ್ಯಮವರ್ಗ ಇಲ್ಲವೇ ಇಲ್ಲ. ಸರ್ಕಾರಿ ನೌಕರರೇ ಮಧ್ಯಮ ವರ್ಗ. ಇಂಥ ಚಿತ್ರಣ ಇರುವ ಪ್ರದೇಶದಲ್ಲಿ ಅಸಮಾನತೆ ಎನ್ನುವುದು ಮನೆ ಮಾಡಿರುವುದು ಅಕ್ಷರಶಃ ನಿಜ. ಇದಕ್ಕೆ ರಾಜ್ಯ ಸರ್ಕಾರ ಮಂಡಿಸಿದ ಆರ್ಥಿಕ ಸಮೀಕ್ಷೆಯ ಆಧಾರ. ಇದರಂತೆ ಬೆಂಗಳೂರಿನ ವಾರ್ಷಿಕ ತಲಾವಾರು ಆದಾಯ ೭.೩೮ ಲಕ್ಷ ರೂ. ಕಲ್ಬುರ್ಗಿ ತಲಾವಾರು ಆದಾಯ ೧.೪೩ ಲಕ್ಷ ರೂ. ಅಂದರೆ ಬೆಂಗಳೂರಿನ ಜನ ೬ ಪಟ್ಟು ಹೆಚ್ಚು ಆದಾಯ ಪಡೆಯುತ್ತಿದ್ದಾರೆ. ಅದರಿಂದಲೇ ಅವರಿಗೆ ರೈಲು, ಬಸ್, ಮೆಟ್ರೋ, ವಿಮಾನ, ಪಂಚತಾರಾ ಹೋಟೆಲ್ ಎಲ್ಲವೂ ಇದೆ. ೨೪ ಗಂಟೆಯೂ ದುಡಿಯಬಹುದು. ಬೆಂಗಳೂರು ಮಲಗುವುದೇ ಇಲ್ಲ. ಇಲ್ಲಿಯ ಜನ ಹಗಲು-ರಾತ್ರಿ ದುಡಿದು ಸಂಪಾದಿಸಲು ಕೆಲಸವಿದೆ. ಕಲ್ಬುರ್ಗಿಯಲ್ಲಿ ದಿನವೆಲ್ಲ ದುಡಿದರೂ ಕೂಲಿ ಕೊಡುವವರು ಯಾರೂ ಇಲ್ಲ. ಹಳ್ಳಿಗಳಲ್ಲಿ ಹಸುಗೂಸಿಗೆ ತಾಯಿ ಹಾಲು ಇಲ್ಲ ಎಂದು ಚಹಾದಲ್ಲಿ ಬಿಸ್ಕತ್ ತಿನ್ನಿಸುವ ಕುಟುಂಬಗಳಿವೆ. ಅಲ್ಲಿಯ ಮಕ್ಕಳು ಹಸಿವಿನ ಹಾಲೇ ಕಾಣುವುದಿಲ್ಲ. ಮೊಸರು ಎಂಬುದು ಕನಸಿನ ಮಾತು. ದೇವರು ದೊಡ್ಡವನು. ಸೂರ್ಯನ ಶಾಖವನ್ನು ವರ್ಷವಿಡೀ ಇರುವಂತೆ ಕಾಪಾಡಿದ್ದಾನೆ. ಅದರಿಂದ ಎಲ್ಲ ರೋಗರುಜಿನಗಳು, ಬ್ಯಾಕ್ಟೀರಿಯಾಗಳು ಸತ್ತು ಹೋಗುತ್ತವೆ. ಶೇ. ೯೦ರಷ್ಟು ಜನ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ರಾಯಚೂರಿನಲ್ಲಿ ಈಗಲೂ ಅತಿ ಕಡಿಮೆ ತೂಕದ ಮಕ್ಕಳು ಜನಿಸುತ್ತವೆ. ಇಲ್ಲಿಯ ಜನರಿಗೆ ಪ್ರಾದೇಶಿಕತೆಯೇ ಒಂದು ಶಾಪ. ಸುದೈವದಿಂದ ಕಳೆದ ವರ್ಷ ಉತ್ತಮ ಮಳೆ ಬಂದಿತ್ತು. ಅದರಿಂದ ಅಲ್ಪಸ್ವಲ್ಪ ಬೆಳೆ ಬಂದಿತು. ಇಲ್ಲದಿದ್ದಲ್ಲಿ ಬರಗಾಲ ನಿಶ್ಚಿತ. ಅದರಲ್ಲೂ ಕೊಪ್ಪಳ, ಯಾದಗಿರಿ ಜಿಲ್ಲೆಗಳ ಜನರಿಗೆ ಗುಳೇ ಹೋಗುವುದು ಕಾಶಿಯಾತ್ರೆ ಇದ್ದಂತೆ. ದುಡಿಯುವ ಗಂಡಸರು, ಹೆಂಗಸರು ಮುಂಬೈ, ಬೆಂಗಳೂರು ಕಡೆ ಮುಖ ಮಾಡುವುದು ಖಚಿತ. ಹಿಂದೆ ಬರಗಾಲ ಎಂದು ಒಂದು ರೈಲಿಗೆ ಹೆಸರು ಇಡಲಾಗಿತ್ತು. ಇದು ರಾತ್ರಿ ಕಲ್ಬುರ್ಗಿ ಬಿಟ್ಟರೆ ಬೆಳಗ್ಗೆ ಮುಂಬೈ ತಲುಪುತ್ತಿತ್ತು. ಅಲ್ಲಿ ಕಲ್ಬುರ್ಗಿ ಗಲ್ಲಿ ಎಂಬ ಓಣಿ ಇದೆ. ಅಲ್ಲಿ ಗುಳೇ ಹೋದರೆಲ್ಲ ಇರುತ್ತಾರೆ. ಹಗಲು ಇರುಳು ಕೂಲಿ ಕೆಲಸ. ಮಳೆ ಬಂದ ಮೇಲೆ ಹಳ್ಳಿಗೆ ಬರಬೇಕು. ಆಗ ಹಳ್ಳಿಯಲ್ಲಿ ಏನೂ ಇಲ್ಲ. ಹಿರಿಯರು ಹಸಿವಿನಿಂದ ಸಾಯುತ್ತಿರುತ್ತಿದ್ದರು. ಮಕ್ಕಳು ರೋಗರುಜಿನಕ್ಕೆ ಬಲಿಯಾಗುತ್ತಿದ್ದವು. ಈಗ ಕಾಲ ಬದಲಾಗಿದೆ. ಬರಗಾಲ ಬರುವುದು ಕಡಿಮೆಯಾಗಿದೆ. ಗುಳೆ ಹೋಗುವುದು ಇಳಿಮುಖಗೊಂಡಿದೆ. ಇಂಥ ಪರಿಸ್ಥಿತಿಯಿಂದ ಜನರ ಮಕ್ಕಳು ಬೆಂಗಳೂರಿನ ಐಟಿ-ಬಿಟಿ ಕೆಲಸ ಮಾಡುವವರ ಮಕ್ಕಳೊಂದಿಗೆ ಪೈಪೋಟಿ ನಡೆಸಿ ಉದ್ಯೋಗ ಪಡೆಯಬೇಕೆಂದು ನಾವು ಬಯಸುತ್ತೇವೆ. ಈಗ ೩೭೧ ಜೆ ಮೀಸಲಾತಿ ಇರುವುದರಿಂದ ಉದ್ಯೋಗದಲ್ಲಿ ಕಲ್ಯಾಣ ಕರ್ನಾಟಕದವರಿಗೆ ಉದ್ಯೋಗ ದೊರಕುತ್ತಿವೆ. ಇಲ್ಲಿಯ ಜನಪ್ರತಿನಿಧಿಗಳೂ ಇದೇ ರೀತಿ ಇರುವುದು ಸಹಜ. ಅವರು ಹಳೆಮೈಸೂರಿನ ನಾಯಕರು ಹೇಳಿದಂತೆ ಕೇಳುತ್ತಾರೆ. ಉತ್ತರ ಕರ್ನಾಟಕದ ಶಾಸಕರ ಸಂಖ್ಯೆ ಅಧಿಕವಾಗಿದ್ದರೂ ಅವರಿಗೆ ನಾಯಕರು ಹಳೆ ಮೈಸೂರಿನವರೇ. ಇದಕ್ಕೆ ದಾಸ್ಯ ಮನೋಭಾವ ಕಾರಣವೇ ಹೊರತು ಮತ್ತೇನೂ ಅಲ್ಲ. ಕೃಷ್ಣ ಮೇಲ್ದಂಡೆ ಯೋಜನೆಗೆ ಹಣ ಕೊಡಬೇಕು ಎಂದರೆ ಕಾವೇರಿಗೂ ಹಣ ಕೊಡಬೇಕು. ಇದು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ ಆಡಳಿತ ವೈಖರಿ. ಕಲ್ಯಾಣ ಕರ್ನಾಟಕದವರಿಗೆ ಜೇನುಗೂಡು ಎಂದರೇನು ಎಂಬುದೇ ಗೊತ್ತಿಲ್ಲ. ಜೇನುತುಪ್ಪ ದೂರದ ಮಾತು. ಪ್ರಾದೇಶಿಕ ಅಸಮಾನತೆ ಹೋಗಬೇಕು ಎಂದರೆ ಉಳ್ಳವರು ಉದಾರ ಮನಸ್ಸಿನಿಂದ ಇಲ್ಲದವರಿಗೆ ಕೊಡಬೇಕು. ಏನೂ ಇಲ್ಲದವರು ಅದನ್ನೇ ತಿಂದು ಸುಮ್ಮನೆ ಕೂಡುವುದಕ್ಕಿಂತ ರಾಜ್ಯದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಾದೇಶಿಕ ಅಸಮಾನತೆಯಲ್ಲೇ ಬದುಕುವುದನ್ನು ಕೈಬಿಡಬೇಕು. ಎಲ್ಲಕ್ಕಿಂತ ಮಾನಸಿಕ ಜಡತ್ವ ದೊಡ್ಡ ಶತ್ರು.

Exit mobile version