ಹುಬ್ಬಳ್ಳಿ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಅಮಾನವೀಯ. ಭಯೋತ್ಪಾದನೆಯ ಹೆಸರಿನಲ್ಲಿ ಭಾರತವನ್ನು ನುಂಗುತ್ತಿರುವವರ ವಿರುದ್ಧ ಪ್ರಧಾನಿಗಳು ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರಗಾಮಿಗಳ ಕೃತ್ಯಕ್ಕೆ ಕಡಿವಾಣ ಹಾಕುವುದು ಅತ್ಯವಶ್ಯಕವಾಗಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸಿದ್ಧವಾಗಿದೆ. ದೇಶ, ಗಡಿಯ ರಕ್ಷಣೆಯ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕು. ದೇಶದ ಅಭದ್ರತೆಯನ್ನ ಕಣ್ಣಾರೆ ನೋಡಿದ ಮೇಲೆಯೂ ವಿತಂಡ ಹೇಳಿಕೆ ನೀಡಬಾರದು ಎಂದರು.
ಯುದ್ಧ ಬೇಡ ಎಂಬ ಹೇಳಿಕೆ ದೇಶದ ಸೈನಿಕರ ಆತ್ಮಸ್ಥೈರ್ಯ ಕುಗ್ಗಿಸುವಂತಹದ್ದು. ಕುಗ್ಗಿಸುವ ಹೇಳಿಕೆಗಳನ್ನ ಯಾರೂ ನೀಡಬಾರದು. ಭದ್ರತೆಯ ವಿಚಾರ ಬಂದಾಗ ರಾಜಕೀಯ, ಪಕ್ಷ ಹಾಗೂ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದರು.
ಚುನಾವಣೆ ಸಮಯದಲ್ಲಿ ಓಲೈಕೆ ಮಾಡಲಿ. ಆದರೆ, ದೇಶದ ವಿಚಾರದಲ್ಲಿ ಒಂದು ಧರ್ಮದ ಓಲೈಕೆ ಮಾಡುವುದು ಸರಿಯಲ್ಲ ಎಂದರು. ಶಾಸಕ ಬಸನಗೌಡ ಯತ್ನಾಳ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ, `ಅದು ಮುಗಿದು ಹೋದ ಅಧ್ಯಾಯ’ ಎನ್ನುತ್ತ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.