Home ಅಂಕಣ ಪೊಲೀಸರ ಕೈಕಟ್ಟಿ ಕೆಲಸ ಮಾಡಿ ಎಂದರೆ ಹೇಗೆ?

ಪೊಲೀಸರ ಕೈಕಟ್ಟಿ ಕೆಲಸ ಮಾಡಿ ಎಂದರೆ ಹೇಗೆ?

0

ರಾಜ್ಯದಲ್ಲಿ ಕ್ರಿಮಿನಲ್ ಪ್ರಕರಣಗಳು ಹೆಚ್ಚಾಗುತ್ತಿವೆ. ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಕೊಲೆ-ಸುಲಿಗೆ, ಜೂಜಾಟ, ಹಾಡಹಗಲೇ ರೌಡಿಗಳ ಕಾದಾಟ, ಕಂಡ ಕಂಡಲ್ಲೆಲ್ಲ ಗಾಂಜಾ ಘಮಲು, ಕಿರಾಣಿ ಅಂಗಡಿ, ಬೀಡಿ ಶಾಪ್‌ಗಳಲ್ಲೂ ಮದ್ಯ-ಮಾದಕ ದ್ರವ್ಯಗಳ ಮಾರಾಟ, ಕೋಮು ಗಲಭೆ ಹಬ್ಬಿಸುವ ಕಿಡಿಗೇಡಿಗಳು ರಾಜಾರೋಷವಾಗಿ ಓಡಾಡಿಕೊಂಡಿರುವುದು, ಇನ್ನು ಜೈಲಿನಲ್ಲಿ ಏನೆಲ್ಲ ಸೌಲಭ್ಯಗಳು ದೊರೆತು ಕೈದಿಗಳು ಯಾವುದೇ ಕೊರತೆ ಇಲ್ಲದಂತೆ ತಮ್ಮ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು, ಸುವರ್ಣವಿಧಾನ ಸೌಧಕ್ಕೆ ನುಗ್ಗಿ ಗೇಟ್‌ಗಳನ್ನು ಒದೆಯುವುದು, ಜನಪ್ರತಿನಿಧಿ ಮೇಲೆಯೇ ಹಲ್ಲೆ ಮಾಡುವ ಪ್ರಯತ್ನಗಳನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ, ಓದುತ್ತಿದ್ದೇವೆ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಇದೆಯೋ ಎಂಬ ವಿರೋಧ ಪಕ್ಷಗಳ ಆರೋಪ ನಿಜವೇ ಎಂಬ ಗುಮಾನಿ ಬರುವ ರೀತಿಯಲ್ಲಿ ಸರ್ಕಾರವೇ ಪೊಲೀಸರ ಕೈಕಟ್ಟಿದೆಯೇ? ಎಂಬ ಅನುಮಾನ ಜನತೆಯಲ್ಲಿ ಮೂಡುವಂತಾಗಿದೆ.
ನಗರ ಪ್ರದೇಶಗಳಲ್ಲಿ ರಿಕ್ರಿಯೇಷನ್ ಹೆಸರಿನ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ರಾಜಾರೋಷವಾಗಿ ಇಸ್ಪೀಟ್ ಜೂಜಾಟ ನಡೆಯುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿಯೇ, ಅಂದರ್ ಬಾಹರ್, ಮಟ್ಕಾ ಜೂಜಾಟ ನಡೆಯುತ್ತಿವೆ. ಶಿವಮೊಗ್ಗ ಜಿಲ್ಲೆ ರಿಪ್ಪನ್‌ಪೇಟೆಯಂತಹ ಪಟ್ಟಣಗಳಲ್ಲೂ ಮೀಟರ್ ಬಡ್ಡಿ ದಂಧೆಗೆ ಜನಸಾಮಾನ್ಯರು ನಲುಗಿಹೋಗಿದ್ದಾರೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಬಹುತೇಕ ನಗರಗಳಲ್ಲಿ ಕಿರಾಣಿ ಅಂಗಡಿಗಳಲ್ಲೇ ಮದ್ಯ ಸಿಗುತ್ತಿದೆ, ಪೆಟ್ಟಿಗೆ ಅಂಗಡಿಗಳಲ್ಲಿ ಗಾಂಜಾದಂತಹ ಅಮಲು ಪದಾರ್ಥ ಮಾರಾಟವಾಗುತ್ತಿದೆ. ಒಂಟಿ ಮಹಿಳೆಯರೇ ಸರಗಳ್ಳರಿಗೆ ಟಾರ್ಗೆಟ್ ಆಗುತ್ತಿದ್ದಾರೆ. ಕಾನೂನು ಗಾಳಿಗೆ ತೂರಿ ಶಾಲಾ-ಕಾಲೇಜು ಹಾಗೂ ಆಸ್ಪತ್ರೆಗಳ ಅಕ್ಕಪಕ್ಕದಲ್ಲಿಯೇ ಮದ್ಯದ ಅಂಗಡಿಗಳು ವಹಿವಾಟು ನಡೆಸುತ್ತಿವೆ. ಕೆಲವು ಪ್ರದೇಶಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಬರುವ ರೀತಿಯಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿಗಳೂ ಇವೆ. ಸಮಾಜ ಘಾತುಕ ಶಕ್ತಿಗಳು ರಾಜಾರೋಷವಾಗಿ ತಮ್ಮ ಚಟುವಟಿಕೆ ನಡೆಸುತ್ತಿದ್ದಾರೆ. ಸಂಚಾರ ಪೊಲೀಸ್ ಠಾಣೆಗಳ ಎದುರೇ ಸಂಚಾರ ಅಸ್ತ್ಯವ್ಯಸ್ತವಾಗಿದ್ದರೂ ನಿಯಂತ್ರಣಕ್ಕೆ ಪ್ರಯತ್ನ ನಡೆಯುತ್ತಿಲ್ಲ. ಇವೆಲ್ಲವೂ ಪೊಲೀಸರಿಗೆ ತಿಳಿಯದ ಸಂಗತಿಗಳಲ್ಲ. ಆದರೆ `ನಿಮ್ಮ ಪಾಡಿಗೆ ನೀವಿದ್ದುಬಿಡಿ’ ಎಂಬ ರಾಜಕಾರಣಿಗಳ ಒತ್ತಡದಿಂದಾಗಿ ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ.
ಖಾಸಗಿ ಹಣಕಾಸು ಲೇವಾದೇವಿದಾರರು ಮತ್ತು ಪಾನ್‌ಬ್ರೋರ‍್ಸ್ ತೆರೆಮರೆಯಲ್ಲಿ ಅನಧಿಕೃತವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದಾರೆ. ಜ್ಯೂವೆಲರಿ ಅಂಗಡಿಯವರು ಪಾನ್ ಬ್ರೋರ‍್ಸ್, ಬಂಗಾರದ ಅಡಮಾನ ಸಾಲ ನೀಡಿ ದುಬಾರಿ ಬಡ್ಡಿ ಪಡೆಯುವ ಮೂಲಕ ಗ್ರಾಹಕರನ್ನು ವಂಚಿಸಿ ಪರಾರಿಯಾದ ಪ್ರಸಂಗಗಳೂ ನಡೆದಿವೆ. ಮೀಟರ್ ಬಡ್ಡಿ ದಂಧೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಯ ಆದೇಶವಿದ್ದರೂ ಪೊಲೀಸರು ಕೈಕಟ್ಟಿ ಕುಳಿತಿದ್ದಾರೆ. ಬಂಗಾರ ಅಡವಿಟ್ಟು ಸಾಲ ಪಡೆಯುವವರು ದುಬಾರಿ ಬಡ್ಡಿಯಿಂದ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಆರಂಭದಲ್ಲಿ ಕಡಿಮೆ ಬಡ್ಡಿಯ ಆಮಿಷ ಒಡ್ಡಿ ಬಂಗಾರ ಅಡವಿಟ್ಟು ಸಾಲ ನೀಡಿದ ನಂತರ ಹಲವು ಶುಲ್ಕಗಳ ಹೆಸರಿನಲ್ಲಿ ಅಸಲು-ಬಡ್ಡಿ ನೀಡಲಾಗದಂತಹ ಸ್ಥಿತಿ ತಂದಿಡುತ್ತಾರೆ. ಇದರಿಂದ ಬಂಗಾರವನ್ನೂ ಕಳೆದುಕೊಂಡು ಬರಿಗೈ ಆಗುವ ಜನ ಹಿಡಿಶಾಪ ಹಾಕುತ್ತಿದ್ದಾರೆ. ಇಂತಹ ಅನೇಕ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಜನಸಾಮಾನ್ಯರಿಗೆ ನ್ಯಾಯ ಸಿಕ್ಕಿರುವುದು ಅಪರೂಪ. ಮೀಟರ್ ಬಡ್ಡಿ ದಂಧೆಕೋರರಿಗೆ ಕಾನೂನಿನ ಯಾವುದೇ ಭಯವಿಲ್ಲ. ಕೆಲವು ಅನಧಿಕೃತ ಖಾಸಗಿ ಫೈನಾನ್ಸ್ಗಳು ನೋಟ್‌ಬುಕ್ ಮೂಲಕ ಲೇವಾದೇವಿ ವ್ಯವಹಾರ ನಡೆಸುತ್ತಿವೆ. ಆನ್‌ಲೈನ್ ವಂಚನೆಗಳಂತೂ ಮಿತಿಮೀರಿವೆ.
ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಈಚೆಗೆ ಗಾಂಜಾ ಘಾಟು ಎಲ್ಲೆಂದರಲ್ಲಿ ಮೂಗಿಗೆ ತಾಗುತ್ತಿದೆ. ಯುವಪೀಳಿಗೆ ಗುಟ್ಕಾ, ಧೂಮಪಾನ, ಮದ್ಯಪಾನದ ಜತೆಗೆ ಗಾಂಜಾಕ್ಕೆ ಮಾರುಹೋಗುತ್ತಿದ್ದಾರೆ. ಅಂಗಡಿಗಳಲ್ಲಿ ರಾಜಾರೋಷವಾಗಿ ಅಮಲು ಪದಾರ್ಥ ಮಾರಾಟ ಆಗುತ್ತಿರುವುದೇ ಇದಕ್ಕೆ ಕಾರಣ. ವಿಶೇಷವಾಗಿ ೧೬ರಿಂದ ೨೫ ವರ್ಷದೊಳಗಿನ ವಿದ್ಯಾರ್ಥಿಗಳೇ ಈ ಘಾಟು ಪಸರಿಸುವ ದಂಧೆಗೆ ಟಾರ್ಗೆಟ್ ಆಗಿದ್ದಾರೆ. ವಿವಿಧ ಅಕಾಡೆಮಿ ಹೆಸರಿನಲ್ಲಿ ಪಿಯುಸಿ ಕಾಲೇಜುಗಳನ್ನು ತೆರೆದು ವಿದ್ಯಾರ್ಥಿಗಳಿಂದ ಲಕ್ಷಾಂತರ ಶುಲ್ಕ ವಸೂಲಿ ಮಾಡುವ ಶಿಕ್ಷಣದಂಗಡಿಗಳು ತಮ್ಮ ಕಾಲೇಜು ಸುತ್ತಮುತ್ತ ಇಂತಹ ಅಮಲು ದಂಧೆ ನಡೆಯುತ್ತಿದ್ದರೂ ಮೌನವಾಗಿರುತ್ತವೆ. ಇನ್ನು ಇಂಜಿನಿಯರಿಂಗ್ ಕಾಲೇಜು, ವೈದ್ಯಕೀಯ ಕಾಲೇಜುಗಳ ಸುತ್ತಮುತ್ತ ಅತಿಹೆಚ್ಚು ಅಮಲು ಪದಾರ್ಥಗಳ ಮಾರಾಟವಾಗುತ್ತಿದೆ. ಇದು ಬಹುದೊಡ್ಡ ದಂಧೆಯಾಗಿ, ಅಪರಾಧ ಪ್ರಕರಣ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಎಲ್ಲೆಂದರಲ್ಲಿ ನೂರಾರು ಮಧ್ಯವರ್ತಿಗಳು ಹುಟ್ಟಿಕೊಂಡಿದ್ದು, ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಹೊರ ರಾಜ್ಯ, ಜಿಲ್ಲೆಗಳಿಂದ ಗಾಂಜಾ ಸೊಪ್ಪು ಖಾಕಿ ಪಡೆ ಕಣ್ತಪ್ಪಿಸಿ ಪೂರೈಕೆ ಆಗುತ್ತಿರುವುದು ಸುಳ್ಳಲ್ಲ.
ಹುಬ್ಬಳ್ಳಿ, ಬೆಂಗಳೂರು ಹಾಗೂ ನೆರೆ ರಾಜ್ಯಗಳಿಂದ ರೈಲು, ಬಸ್ಸು, ಕಾರು, ಬೈಕ್‌ಗಳಲ್ಲಿ ಮಧ್ಯ ಕರ್ನಾಟಕದ ಜಿಲ್ಲೆಗಳನ್ನು ಪ್ರವೇಶಿಸುತ್ತಿರುವ ಗಾಂಜಾ, ವಿದ್ಯಾರ್ಥಿಗಳ ಕೈಗೆ ಸಲೀಸಾಗಿ ಸಿಗುತ್ತಿದೆ. ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾರ್ಥಿಗಳ ವಲಯಕ್ಕೆ ಸೀಮಿತವಾಗಿದ್ದ ಗಾಂಜಾ ವ್ಯಸನ ಈಚೆಗೆ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳನ್ನೂ ಆವರಿಸಿಕೊಂಡಿದೆ. ಗಾಂಜಾ ವ್ಯಸನಿಗಳಾಗುತ್ತಿರುವ ಯುವಪಡೆಯ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ಆರಂಭದಲ್ಲಿ ಗಾಂಜಾ ಸೇವನೆ ಮೂಲಕ ಡ್ರಗ್ಸ್ ಲೋಕ ಪ್ರವೇಶಿಸುವ ವಿದ್ಯಾರ್ಥಿಗಳು, ಬಳಿಕ ಹಣದ ಕೊರತೆ ಕಾರಣಕ್ಕೆ ಇಂಜೆಕ್ಷನ್, ಸೆಲ್ಯೂಷನ್ ಹೀಗೆ ಕಡಿಮೆ ವೆಚ್ಚದಲ್ಲಿ ದೊರೆಯುವ ಡ್ರಗ್ಸ್‌ಗಳ ವ್ಯಸನಿಗಳಾಗಿ ಸ್ವಯಂ ಬದುಕು ಜತೆಗೆ ಮತ್ತೊಬ್ಬರ ಜೀವಕ್ಕೆ ಕುತ್ತು ತರುತ್ತಿದ್ದಾರೆ. ಕೆಲವರು ಕಳ್ಳತನದ ಹಾದಿ ಹಿಡಿಯುತ್ತಿದ್ದಾರೆ. ಬಹುತೇಕ ಜಿಲ್ಲಾ ಮಟ್ಟದ ಪೊಲೀಸ್ ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸಿ, ಸರಣಿ ದಾಳಿ ನಡೆಸುತ್ತಿದ್ದರೂ, ಕೆಳಹಂತದ ಪೊಲೀಸರ ಅಸಹಕಾರ ಗಾಂಜಾ ದಂಧೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂಬುದು ಕಟುಸತ್ಯ.
ಕೆಲವು ಯುವಕರು ವ್ಹೀಲಿಂಗ್, ವೇಗದ ಚಾಲನೆ, ಬೈಕ್‌ಗಳ ಸೈಲನ್ಸರ್ ತೆಗೆದು ಕರ್ಕಶ ಶಬ್ಧ ಮಾಡುತ್ತ ಬೈಕ್ ಓಡಿಸುವ ಬಹುತೇಕರು ಗಾಂಜಾ ಗಮ್ಮತ್ತಿನಲ್ಲಿ ತೇಲುತ್ತಾರೆಂಬುದು ಸಾರ್ವಕಾಲಿಕ ಸತ್ಯ. ಅದರಲ್ಲೂ ಮೈ-ಕೈ ತುಂಬ ಹಚ್ಚೆ, ಬ್ಲೇಡ್‌ಗಳ ಗುರುತು ಮೂಲಕ ವಿಕೃತ ರೀತಿ ವರ್ತಿಸುವ ಕೆಲ ಯುವಕರು, ಬಹಳಷ್ಟು ಯುವತಿಯರ ಬದುಕಿಗೆ ಕಂಟಕವಾಗುತ್ತಿದ್ದಾರೆ. ಜತೆಗೆ ಕಾಲೇಜ್ ಹೊರಾಂಗಣಗಳು ಗಲಾಟೆಯ ಕೇಂದ್ರಗಳಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ.
ಇತ್ತೀಚೆಗೆ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿಗಳು ಆಟೋ ಚಾಲಕರು, ಶಾಲಾ-ಕಾಲೇಜು ಬಸ್ ಚಾಲಕರು ಮತ್ತು ಖಾಸಗಿ ಬಸ್ ಚಾಲಕರ ಸಭೆ ಕರೆದು ಸಂಚಾರ ನಿಯಮಗಳ ಪಾಠ ಮಾಡಿದ್ದರು. ಖಾಸಗಿ ಬಸ್ಸುಗಳ ಕರ್ಕಷ ಹಾರ್ನ್, ಆಟೋ ಚಾಲಕರಿಂದ ಹೆಚ್ಚುವರಿ ಹಣ ವಸೂಲಿ, ಲೈಸನ್ಸ್ ಮತ್ತು ದಾಖಲೆಗಳಿಲ್ಲದೆ ಆಟೋ ಓಡಿಸುವುದು, ಅನುಮತಿ ಇಲ್ಲದೆ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಸಾಗಿಸುವುದನ್ನು ನಿಲ್ಲಿಸಬೇಕು, ಸಂಚಾರ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದ್ದರು.
ಆದರೆ ಅವರ ಎಚ್ಚರಿಕೆಗೆ ಕ್ಯಾರೆ ಎನ್ನದೆ ತಮ್ಮ ವರಸೆ ಮುಂದುವರೆಸಿದ್ದಾರೆ. ಮಧ್ಯ ಕರ್ನಾಟಕದಲ್ಲಿ ತುಂಗಾ ಮತ್ತು ಭದ್ರಾ ನದಿಗಳ ಇಕ್ಕೆಲಗಳಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಅಕ್ರಮ ಜೆಂಬಿಟ್ಟಿಗೆ, ಮಣ್ಣಿನ ಗಣಿಗಾರಿಕೆ ಪೊಲೀಸರ ಕಣ್ಗಾವಲಿನಲ್ಲಿಯೇ ನಡೆಯುತ್ತಿದೆ ಎಂಬುದು ವ್ಯಾಪಕ ಆರೋಪ. ಸ್ಥಳೀಯ ಜನಪ್ರತಿನಿಧಿಗಳ ಅಣತಿಯಂತೆ ಇಂತಹ ಅಕ್ರಮ ದಂಧೆಗಳು ನಡೆಯುತ್ತಿದ್ದು, ಪೊಲೀಸ್ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಸೂಕ್ಷö್ಮ ಪ್ರದೇಶವಾಗಿರುವ ಮಲೆನಾಡಿನ ತುಂಗಾ ನದಿ ತೀರದಲ್ಲಿ ಎಗ್ಗಿಲ್ಲದೆ ಅನಧಿಕೃತ ಮರಳು ಗಣಿಗಾರಿಕೆ ನಡೆಯುತ್ತಲೇ ಇದೆ. ಇಲ್ಲಿನ ಪ್ರಾಕೃತಿಕ ನೈಸರ್ಗಿಕ ಸಂಪನ್ಮೂಲಗಳ ಲೂಟಿಗೆ ಕಡಿವಾಣ ಬೀಳುತ್ತಿಲ್ಲ. ಅಧಿಕ ಭಾರದ ಮರಳಿನ ವಾಹನಗಳ ಓಡಾಟದಿಂದ ರಸ್ತೆಗಳು ಹಾಳಾಗಿವೆ. ಒಂದೇ ಪರ್ಮಿಟ್ಟಿನಲ್ಲಿ ನಾಲ್ಕಾರು ಲೋಡು ಮರಳು ಸಾಗಿಸಿ ಸರ್ಕಾರಕ್ಕೆ ನಷ್ಟ ಮಾಡುವುದು, ಅಪಾರ ಪ್ರಮಾಣದಲ್ಲಿ ಮರಳು ಸಂಗ್ರಹ ಮಾಡುವುದು ನಡೆದೇ ಇದೆ.
ಸಮಾಜದಲ್ಲಿ ನಡೆಯುವ ಕ್ರಿಮಿನಲ್ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಕಾನೂನು ರಕ್ಷಕರೇ ಕೈಕಟ್ಟಿ ಕುಳಿತರೆ ಜನಸಾಮಾನ್ಯರ ರಕ್ಷಣೆ ಹೇಗೆ ಸಾಧ್ಯ. ಇದರಿಂದ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣವಾದೀತೆ? ದೇಶದ ಗಡಿ ಕಾಯುವ ಸೈನಿಕರಂತೆ ದೇಶದ ಒಳಗಡೆ ಜನರ ಮಾನ-ಪ್ರಾಣ ರಕ್ಷಣೆ ಮಾಡುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿದೆ. ಯಾವುದೇ ಪಕ್ಷದ ಸರ್ಕಾರವಿರಲಿ, ಸರ್ಕಾರದ ಅಧಿಕಾರಿಗಳು ಮಾತ್ರ ಕಾನೂನು ಪ್ರಕಾರವೇ ಕೆಲಸ ಮಾಡಿದರೆ ಮಾತ್ರ ಇಂತಹ ಘಟನಾವಳಿಗಳು ನಡೆಯುವುದಿಲ್ಲ. ಆದರೆ ಇಂದು ನಮ್ಮ ಅಧಿಕಾರಿಗಳು ಅಧಿಕಾರದಲ್ಲಿರುವ ರಾಜಕಾರಣಿಗಳ ಕೈಗೊಂಬೆಯಂತೆ, ರಾಜಕೀಯ ಪಕ್ಷಗಳ ಹಿಂಬಾಲಕರಂತೆ ವರ್ತಿಸುವ ಮೂಲಕ ಕಾನೂನುಗಳನ್ನು ಗಾಳಿಗೆ ತೂರುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಎಲ್ಲ ರೀತಿಯ ಕಾನೂನು ವಿರೋಧಿ ಚಟುವಟಿಕೆಗಳು ಹೆಚ್ಚಾಗಲು ಇಂಬು ಕೊಟ್ಟಂತಾಗಿದೆ. ಯಾವ ರಾಜಕಾರಣಿಗಳ ಒತ್ತಡಕ್ಕೂ ಮಣಿಯದೆ ಬಿಗಿಯಾದ ಮತ್ತು ಕಾನೂನುಬದ್ಧ ಆಡಳಿತ, ದಕ್ಷ ಪೊಲೀಸ್ ವ್ಯವಸ್ಥೆ, ಸಂವಿಧಾನಬದ್ಧ ಕಾನೂನುಗಳನ್ನು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕಿಳಿಸುವ ಮೂಲಕ ಇಂತಹ ಎಲ್ಲ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯ ಸರ್ಕಾರ ದಕ್ಷ ಪೊಲೀಸ್ ಅಧಿಕಾರಿಗಳ ಕಟ್ಟಿರುವ ಕೈಗಳನ್ನು ಬಿಚ್ಚಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು.

Exit mobile version