Home News ನಾಟ್ಯ ನಿಲ್ಲಿಸಿದ ಉಸ್ತಾದರ ಕೈಬೆರಳುಗಳು

ನಾಟ್ಯ ನಿಲ್ಲಿಸಿದ ಉಸ್ತಾದರ ಕೈಬೆರಳುಗಳು

ಉಸ್ತಾದ್ ಜಾಕಿರ್ ಹುಸೇನ್ ಹೆಸರು ಕೇಳಿದರೆ ಸಾಕು ನಮಗರಿಯದೆ “ಧಾ ತರಿಕಿಟ ಗಿನ್ನ ಧಿನ್ನಾ” ಎಂದು ಲಯವಾದ ತಬಲಾ ಸದ್ದು ಕೇಳಿದ ಅನುಭವ ಆಗುತ್ತದೆ, ಅಂದರೆ ಉಸ್ತಾದರ ತಬಲಾ ವಾದನ ನಮ್ಮ ನಿಮ್ಮೆಲ್ಲರ ಮೇಲೆ ಅಷ್ಟೊಂದು ಪ್ರಭಾವ ಮಾಡಿದೆ ಎಂದರ್ಥ. ಏಳನೇ ವರ್ಷಕ್ಕೆ ತಬಲಾ ಅಭ್ಯಾಸ ಪ್ರಾರಂಭಿಸಿದ ಜಾಕಿರ್ ಹುಸೇನ್ ಕೇವಲ ಹನ್ನೆರಡನೇ ವರ್ಷಕ್ಕೆ ಜನ ಮೆಚ್ಚುವ ತಬಲ ಕಾರ್ಯಕ್ರಮವನ್ನು ಸಾದರಪಡಿಸಿದ್ದರು. ಆ ವಯಸ್ಸೇ ಹಾಗೆ ಕ್ರಿಕೆಟ್, ಫುಟ್‌ಬಾಲ್ ಎಂದು ಮನಸ್ಸು ಆಟವಾಡಲು ಹಾತೊರೆಯುವ ವಯಸ್ಸು ಅದು ಜಾಕಿರ್‌ರನ್ನು ಬಿಟ್ಟಿರಲಿಲ್ಲ. ಬಾಲಕ ಜಾಕಿರ್‌ಗೆ ತಬಲಾದೊಂದಿಗೆ ಕ್ರಿಕೆಟ್‌ನಲ್ಲೂ ಅಪಾರ ಆಸಕ್ತಿ, ಆದರದು ಅಲ್ಲಾ ರಾಖರಿಗೆ ಇಷ್ಟವಿರಲಿಲ್ಲ. ಉಸ್ತಾದ್ ಜಾಕಿರ್ ಹುಸೇನ್ ಅವರ ತಂದೆ ಉಸ್ತಾದ್ ಅಲ್ಲಾ ರಾಖರು ಕೂಡ ಒಬ್ಬ ಉತ್ತಮ ತಬಲಾವಾದಕರಾಗಿದ್ದರು ಹಾಗೂ ಮಗನೂ ತನ್ನನ್ನು ಮೀರಿಸುವ ತಬಲಾ ವಾದಕನಾಗಿ ತಬಲಾ ವಾದನದಲ್ಲಿ ಉತ್ತುಂಗಕ್ಕೇರಬೇಕೆಂದು ಬಯಸಿದ್ದರು. ಆದರೆ ಅವರ ತಾಯಿಗೆ ಜಾಕಿರ್ ತಬಲಾ ಬೆನ್ನು ಹತ್ತುವುದು ಅಷ್ಟು ಇಷ್ಟವಿರಲಿಲ್ಲ. ಒಮ್ಮೆ ಜಾಕಿರ್ ಕ್ರಿಕೆಟ್ ಆಡುವಾಗ ಅವರ ಬೆರಳಿಗೆ ಪೆಟ್ಟು ಮಾಡಿಕೊಂಡರಂತೆ ಅಂದಿನಿಂದ ಅಲ್ಲಾ ರಾಖರು ಕ್ರಿಕೆಟ್ ಬಂದ್ ಎಂದರಂತೆ. ಅಲ್ಲಾ ರಾಖರಿಗೆ ಮಗ ತಬಲಾ ವಾದಕನೇ ಆಗಬೇಕೆಂಬ ಸಂಕಲ್ಪ ಎಷ್ಟರಮಟ್ಟಿಗಿತ್ತೆಂದರೆ ಜಾಕಿರ್ ಹುಟ್ಟಿದ ಮೇಲೆ ಅವರ ಮನೆಯ ಸಂಪ್ರದಾಯದಂತೆ ಮಗನನ್ನು ಅವರ ತಂದೆ ಅಲ್ಲಾ ರಾಖರ ಮಡಿಲಲ್ಲಿ ಮಲಗಿಸಿದರು, ಹಾಗೆ ಮಲಗಿಸಿದಾಗ ತಂದೆಯಾದವನು ಒಂದೆರಡು ಒಳ್ಳೆಯ ನುಡಿಗಳನ್ನು ಕಿವಿಯಲ್ಲಿ ಹೇಳಬೇಕೆಂಬುದು ಸಂಪ್ರದಾಯ ಬಹುಶಃ ಅದನ್ನು “ಆಯತ್” ಎಂದು ಕರೆಯುತ್ತಾರೆ. ಆದರೆ ಅಲ್ಲಾ ರಾಖರು ಜಾಕಿರ್ ಕಿವಿಯಲ್ಲಿ ತಬಲಾದ ಬೋಲ್‌ಗಳನ್ನೂ ಹೇಳಿದ್ದರಂತೆ, ಅಂದರೆ ನೀವೇ ಊಹಿಸಿ ಅಲ್ಲಾ ರಾಖ್‌ರಿಗೆ ಮಗ ತಬಲಾವಾದಕನೇ ಆಗಬೇಕೆಂಬ ಸಂಕಲ್ಪ ಯಾವ ಪರಿಯದಾಗಿತ್ತು. ಆ ಎಳೆಯ ವಯಸ್ಸಿನ ತಬಲಾ ಕೇಂದ್ರಿತ ಲಾಲನೆ ಪಾಲನೆಗಳೇ ಜಾಕಿರ್ ಹುಸೇನ್‌ರನ್ನು ಜಗವೇ ಮೆಚ್ಚುವ ಭಾರತದ ತಬಲಾ ಉಸ್ತಾದನನ್ನಾಗಿ ಮಾಡಿ ನಿಲ್ಲಿಸಿರಬೇಕು. ಅವರು ತಬಲಾ ನುಡಿಸುವುದು ನೋಡುವುದೇ ಒಂದು ಚಂದ. ಬೆರಳುಗಳು ತಬಲಾವನ್ನು ಸೋಕಿದರೆ ಸಾಕು ಬೆರಳುಗಳು ಒಂದಕ್ಕೊಂದು ಪೈಪೋಟಿಗೆ ಬಿದ್ದಂತೆ ತಬಲಾ ವಾದನ ಮಾಡುತ್ತ ತಮ್ಮ ತಮ್ಮಲೇ ಸ್ಪರ್ಧೆಗೆ ಬಿದ್ದವರಂತೆ ನಾಟ್ಯವಾಡುತ್ತಿದ್ದವು. ಕ್ಷಣಮಾತ್ರದಲ್ಲಿ ಆ ಬೆರಳುಗಳು ಅದೃಶ್ಯಗೊಂಡು ಮತ್ತೆ ಗೋಚರಿಸುವಂತೆ ಭಾಸವಾಗುವಂತೆ ಚಲಿಸುತ್ತಿದ್ದವು.
ಜಾಕಿರ್ ಅವರ ಸಂಗೀತ ಪಯಣ ತಿಳಿಯದವರಿಲ್ಲ, ಆದರೆ ಜಾಕಿರ್ ಕೆಲವು ಚಲನಚಿತ್ರಗಳಲ್ಲಿ ಅಭಿನಯ ಹಾಗೂ ಸಂಗೀತದ ಮೂಲಕವೂ ತಮ್ಮ ಕೈಚಳಕವನ್ನು ತೋರಿದ್ದರು. ಬಾವರ್ಚಿ, ಸತ್ಯಂ ಶಿವಂ ಸುಂದರಂ, ಹೀರ ರಂಜಾ ಚಿತ್ರಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದರು, ಅಲ್ಲದೆ ಸಾಜ್ ಎಂಬ ಚಿತ್ರದಲ್ಲಿ ಸಂಗೀತ ನೀಡಿದ್ದಲ್ಲದೆ ನಟನೆಯನ್ನು ಮಾಡಿದ್ದರು. ಅಲ್ಲದೆ ಶಶಿ ಕಪೂರ್‌ರೊಂದಿಗೆ ಹೀಟ್ ಅಂಡ್ ಡಸ್ಟ್ ಎಂಬ ಚಿತ್ರದಲ್ಲೂ ತಮ್ಮ ನಟನಾ ಕೌಶಲ್ಯವನ್ನು ತೋರ್ಪಡಿಸಿದ್ದರು. ಯುವಕರಾಗಿದ್ದಾಗಲೇ ಮುಘಲ್ ಏ ಆಜಮ್ ಚಲನ ಚಿತ್ರದಲ್ಲಿ ಯುವ ಪ್ರೇಮಿ ಸಲೀಮ್‌ನ ಪಾತ್ರವು ಒಲಿದು ಬಂದಿತ್ತಂತೆ, ಆದರೆ ಅಲ್ಲಾ ರಾಖರು ನನ್ನ ಮಗ ಬಹು ದೊಡ್ಡ ತಬಲಾ ವಾದಕನಾಗಬೇಕು ಅಂದರಂತೆ ಅದು ಅಲ್ಲಾ ರಾಖರ ಸಂಕಲ್ಪ. ಅವರ ಸಂಕಲ್ಪದ ಫಲವಾಗಿ ಭಾರತಕ್ಕೊಬ್ಬ ಜಾಕಿರ್ ಎಂಬ ತಬಲಾ ಉಸ್ತಾದ ದೊರೆತಂತಾಯಿತು. ತಬಲಾಕ್ಕೊಂದು ತನ್ನದೇ ಆದ ಸ್ಥಾನಮಾನವನ್ನು ಕಲ್ಪಿಸಿಕೊಟ್ಟ ಶ್ರೇಯಸ್ಸು ಜಾಕಿರ್ ಹುಸೇನ್‌ರಿಗೆ ಸಲ್ಲಬೇಕು. ಉಸ್ತಾದರಿಗೆ ಇದು ಶಾಸ್ತ್ರೀಯ ಇದು ಶಾಸ್ತ್ರೀಯವಲ್ಲ ಎಂಬ ಭೇದ ಭಾವ ಇರಲಿಲ್ಲ, ಅವರನ್ನು ಶಾಸ್ತ್ರೀಯ ಸಂಗೀತದ ದಿಗ್ಗಜರೊಂದಿಗೆ, ಘಜಲ್ ಹೇಳುವ ಗುಲಾಮ್ ಅಲಿ, ಜಗಜಿತ್ ಸಿಂಗ, ಹರಿಹರನ್ ಹಾಗೂ ಭಜನ್ ಹೇಳುವ ಅನೂಪ್ ಝಲೋಟರೊಂದಿಗೂ ತಬಲಾ ಸಾಥ್‌ನಲ್ಲಿಯೂ ಕಾಣಬಹುದಾಗಿತ್ತು, ಅಂದರೆ ಅವರು ಸಂಗೀತವನ್ನು ಒಂದು ಸಾಗರ ಎಂಬಂತೆ ಕಂಡಿದ್ದರು. ಈ ಸಾಗರಕ್ಕೆ ನಾನಾ ತೆರದ ಸಂಗೀತ ಪ್ರಕಾರಗಳು ಗಂಗೆಯಂತೆ ಹರಿದುಬರಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಈ ನಿಟ್ಟಿನಲ್ಲಿ “ಶಕ್ತಿ” ಎಂಬ ಸಂಗೀತ ಬ್ಯಾಂಡ್ ಅನ್ನು ಹುಟ್ಟು ಹಾಕಿದ್ದರು. ಈ ಶಕ್ತಿ ಬ್ಯಾಂಡ್ ಇದೇ ವರುಷದಲ್ಲಿ ೫೦ ವಸಂತಗಳನ್ನು ಪೂರೈಸಿ ಸುವರ್ಣ ಸಂಭ್ರಮವನ್ನು ಆಚರಿಸಿದ್ದನ್ನು ನಾವಿಲ್ಲಿ ಕಾಣಬಹುದು. ತಮ್ಮ ಶಕ್ತಿ ಸಂಗೀತ ತಂಡದಲ್ಲಿ ನಾನಾ ಬಗೆಯ ಸಂಗೀತ ಪ್ರಕಾರಗಳನ್ನು ಹಾಗೂ ಸಂಗೀತಕಾರರನ್ನು ಪರಿಚಯಿಸಿದ್ದರು. ಅದು ಗಿಟಾರಿಸ್ಟ್ ಜಾನ್ ಮ್ಯಾಕ್ ಲುಘ್ಲಿನ್ ಇರಬಹುದು, ಘಟಂ ವಾದಕ ವಿಕು ವಿನಾಯಕ್‌ರಂತವರಿರಬಹುದು, ನಂತರದ ದಿನಗಳಲ್ಲಿ ಶಂಕರ್ ಮಹಾದೇವನ್, ಮ್ಯಾಂಡೊಲಿನ್ ಶ್ರೀನಿವಾಸ್ ಹೀಗೆ ಯುವ ಕಲಾವಿದರು ಸೇರಿಕೊಂಡರು. ಹೀಗೆ ಉಸ್ತಾದ್ ಜಾಕಿರ್ ಶಕ್ತಿಯ ಮೂಲಕ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತವನ್ನು ಬೆಸೆಯುವುದರ ಜೊತೆಗೆ ಪಾಶ್ಚಾತ್ಯ ಮತ್ತು ಭಾರತೀಯ ಸಂಗೀತವನ್ನು ಬೆಸೆದು ಜಗತ್ತೇ ತಿರುಗಿ ನೋಡುವಂತೆ ಮಾಡಿತ್ತು.
ಸರಿಸುಮಾರು ೬೦ ದಶಕಗಳ ಕಾಲ ಸಂಗೀತ ಕ್ಷೇತ್ರದಲ್ಲಿ ನಿರಂತರವಾಗಿ ಮಿನುಗಿದ ಜಾಕಿರ್ ಹುಸೇನ್ ತಮ್ಮ ವೃತ್ತಿ ಪ್ರಾರಂಭಿಸಿದಾಗ ತನಗಿಂತ ಎರಡು ತಲೆಮಾರು ದೊಡ್ಡವರೊಂದಿಗೆ ತಬಲಾ ಸಾಥ್ ಕೊಟ್ಟು ಭೇಷ್ ಎನಿಸಿಕೊಂಡಿದ್ದರು. ಅದೇ ರೀತಿ ಮೊನ್ನೆ ಮೊನ್ನೆಯವರೆಗೂ ತನಗಿಂತ ಎರಡು ತಲೆಮಾರು ಚಿಕ್ಕವರೊಂದಿಗೂ ತಬಲಾ ಸಾಥ್ ಕೊಟ್ಟು, ಕಿರಿಯರಿಗೆ ಮಾರ್ಗದರ್ಶಕರಾಗಿ ಬದುಕಿದ್ದಷ್ಟು ದಿನ ತಬಲಾ ಲೋಕದ ಅಪ್ರತಿಮ ಸಂಗೀತ ಸರದಾರನಾಗಿ ಸಂಗೀತ ಶಾರದೆಯನ್ನು ಆರಾಧಿಸಿದರು. ಹಾಗೆಂದು ನಾನೊಬ್ಬ ಮಹಾನ್ ಕಲಾಕಾರ ಎಂದು ಯಾವ ಹಮ್ಮು ಬಿಮ್ಮು ಇರಲಿಲ್ಲ ಬಹುಶಃ ಈ ಒಂದು ಗುಣ ಎತ್ತರಕ್ಕೇರಿದ ಎಲ್ಲರಲ್ಲೂ ಕಾಣಬಹುದು. ಇಂದು ಉಸ್ತಾದ್ ಅವರ ತಬಲಾ ವಾದನದಷ್ಟೇ ಅವರ ಸರಳತೆಯ ಬಗೆಗೆ ಹಾಗೂ ಎಲ್ಲರನ್ನು ಸಮನ್ವಯತೆಯಿಂದ ನೋಡುವ ಬಗೆಗೆ ಹೆಚ್ಚು ಚರ್ಚಿತರಾಗಿದ್ದರೆ. ಇತ್ತೀಚೆಗೆ ಇಹಲೋಕದ ಯಾತ್ರೆ ಮುಗಿಸಿದ ರತನ್ ಟಾಟಾರ ಬಗ್ಗೆಯೂ ಹೆಚ್ಚು ಚರ್ಚೆ ಆಗಿದ್ದು ಅವರ ಸರಳತೆಯ ಕುರಿತೇ. ಉಸ್ತಾದ್ ಅವರ ಸರಳತೆಯ ಬಗ್ಗೆ ಹೇಳಬೇಕೆಂದರೆ ಅವರ ತಬಲಾವನ್ನು ತಯಾರಿಸಿ ಕೊಡುವ ತಬಲಾ ತಯಾರಕರು ಉಸ್ತಾದ್ ಹೇಳಿದ ತಬಲಾ ತಯಾರಿಸಿ ಪುಟ್ಟ ವ್ಯಾಗನಾರ್ ಕಾರ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದರಂತೆ ಇದನ್ನು ಬಹಳ ವರುಷಗಳಿಂದ ಗಮನಿಸಿದ್ದ ಉಸ್ತಾದ್ ಒಂದು ದಿನ ತಮ್ಮ ಸ್ವಂತ ಟೊಯೋಟಾ ಕೊರೋಲಾ ಕಾರನ್ನು ತಬಲಾ ತಯಾರಕರ ಹೆಸರಿಗೆ ಮಾಡಿಕೊಟ್ಟು ಇನ್ನು ನೀವು ದೊಡ್ಡ ಕಾರಿನಲ್ಲಿ ಅಡ್ಡಾಡಬೇಕು ಎಂದಿದ್ದರಂತೆ. ಇದೇ ರೀತಿ ಒಮ್ಮೆ ಅಮ್ಜದ್ ಅಲಿ ಖಾನ್ ಅವರೊಂದಿಗೆ ಸಂಗೀತ ಕಾರ್ಯಕ್ರಮ ಕೊಟ್ಟ ನಂತರ ಅಮ್ಜದ್ ಅಲಿ ಖಾನ್ ಅವರ ಪಾದರಕ್ಷೆಗಳನ್ನು ತೆಗೆದು ತಮ್ಮ ಚರಣಕ್ಕೊತ್ತಿಕೊಂಡಿದ್ದರಂತೆ ಅಂದರೆ ಉಸ್ತಾದ್ ಜಾ
ಕಿರ್ ಹುಸೇನ್‌ರಲ್ಲಿ ಸಂಗೀತದಷ್ಟೇ ವಿನಮ್ರತೆಯು ಮನೆ ಮಾಡಿತ್ತು. ಇನ್ನು ಅವರ ತಬಲಾದಲ್ಲಿ ಜಿಂಕೆ ಓಡುವುದು, ಶಂಖನಾದ, ಕೈಲಾಸದಲ್ಲಿ ನೆಲೆಸಿರುವ ಶಿವನ ಢಮರುಗದ ಸದ್ದನ್ನು ಕೇಳಿಸುವುದು ಇವಕ್ಕೆಲ್ಲ ಉಸ್ತಾದರಿಗೆ ಉಸ್ತಾದರೆ ಸಾಟಿ. ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ, ನಾಲ್ಕು ಬಾರಿ ಗ್ರಾಮಿ ಪ್ರಶಸ್ತಿ ಹೀಗೆ ಅದೆಷ್ಟು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆಯೋ ಅದರ ಲೆಕ್ಕವಿಲ್ಲ. ಅಂತಹ ಮಹಾನ್ ಕಲಾಕಾರ ಒಮ್ಮೆಲೇ ಇನ್ನು ಸಾಕು ಎಂದು ಸಂಗೀತ ಲೋಕದಿಂದ ಎದ್ದು ನಡೆದದ್ದು ಸಂಗೀತ ಲೋಕದಲ್ಲೊಂದು ಶೂನ್ಯ ಭಾವನೆಯನ್ನುಂಟು ಮಾಡಿದೆ. ಸಂಗೀತ ಪ್ರೇಮಿಗಳು ವ್ಹಾ ಉಸ್ತಾದ್ ಎಂದು ಇನ್ನು ಯಾರನ್ನು ಸಂಭೋದಿಸಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ಅದೇನೇ ಇರಲಿ ತಬಲಾ ಇರುವವರೆಗೆ ಉಸ್ತಾದ್ ಅಮರ. ಅವರ ಬೆರಳುಗಳು ನಾಟ್ಯ ನಿಲ್ಲಿಸಿರಬಹುದು. ಆದರೆ ಅವರ ನೆನಪು ಸದಾ ಜಾಗೃತ. ಅವರು ನುಡಿಸಿದ ತಬಲಾ ಸದ್ದು ಕಿವಿಗೆ ಸೋಕಿದಾಗ ನಗುಮೊಗದ ಉಸ್ತಾದರ ಚಿತ್ರ ನಮ್ಮ ಮುಂದೆ ಹಾದು ಹೋಗದಿದ್ದರೆ ಹೇಳಿ.

Exit mobile version