Home ತಾಜಾ ಸುದ್ದಿ ಪೂರ್ವ ಸಿದ್ಧತೆ ಇಲ್ಲದೆ ಇ ಖಾತಾ ಕಡ್ಡಾಯ: ಪರದಾಡುತ್ತಿರುವ ಸಾರ್ವಜನಿಕರು

ಪೂರ್ವ ಸಿದ್ಧತೆ ಇಲ್ಲದೆ ಇ ಖಾತಾ ಕಡ್ಡಾಯ: ಪರದಾಡುತ್ತಿರುವ ಸಾರ್ವಜನಿಕರು

0

ಮಂಗಳೂರು: ರಾಜ್ಯ ಸರ್ಕಾರದ ಕಂದಾಯ ಇಲಾಖೆಯು ಯಾವುದೇ ಪೂರ್ವಸಿದ್ಧತೆ ಇಲ್ಲದೇ ದಿನಬೆಳಗಾಗುವುದರೊಳಗೆ ಆಸ್ತಿ ನೋಂದಣಿಗೆ ಇ ಖಾತಾ ಕಡ್ಡಾಯ ಮಾಡಿದ ನಂತರ ಮಂಗಳೂರು ನಗರ ವ್ಯಾಪ್ತಿಯಲ್ಲಿ ಅವ್ಯವಸ್ಥೆಯ ಆಗರವಾಗಿದೆ. ಇದರಿಂದಾಗಿ ಸಾರ್ವಜನಿಕರು ದಿನನಿತ್ಯ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಈಗಾಗಲೇ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಕಂದಾಯ ಸಚಿವರನ್ನು ಭೇಟಿಯಾದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ನಗರದ ಅಟಲ್ ಸೇವಾ ಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ತೊಂದರೆಯಾಗುವ ಇಂತಹ ನಿಯಮಗಳನ್ನು ಏಕಾಏಕಿ ಇಡೀ ರಾಜ್ಯದಲ್ಲಿ ಜಾರಿಗೊಳಿಸುವ ಮೊದಲು ಯಾವುದಾದರೂ ಒಂದೆರಡು ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿ ಅದರ ಸಾಧಕ-ಭಾದಕಗಳನ್ನು ನೋಡಿಕೊಂಡು ನಂತರವೇ ರಾಜ್ಯಕ್ಕೆ ಅನ್ವಯಿಸಬೇಕಿತ್ತು. ಅದು ಬಿಟ್ಟು ಧಿಡೀರನೆ ಆತುರದಿಂದ ಕೈಗೊಂಡ ನಿರ್ಧಾರದಿಂದ ಎಲ್ಲವೂ ಅಯೋಮಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ೨.೦ ತಂತ್ರಾಂಶ ಜೋಡಣೆಯ ನಂತರವಂತೂ ಸಮಸ್ಯೆ ಉಲ್ಬಣವಾಗಿದ್ದು ಯಾವಾಗ ನೋಡಿದರೂ ಸರ್ವರ್ ಡೌನ್, ದಾಖಲೆಗಳು ಅಪ್ಲೋಡ್ ಆಗುತ್ತಿಲ್ಲ ಎಂಬ ಉತ್ತರ ಸಿಗುತ್ತಿದೆ. ಮದುವೆ, ಸಾಲ ಇತ್ಯಾದಿ ಅಗತ್ಯ ಸಂದರ್ಭದಲ್ಲಿ ತಮ್ಮ ಆಸ್ತಿಪಾಸ್ತಿಗಳ ಮೂಲಕ ಹಣವನ್ನು ಹೊಂದಿಸಿಕೊಳ್ಳಲೂ ಸಾಧ್ಯವಾಗದೇ ಸಾವಿರಾರು ಜನರು ಈ ಅವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಾ ಪರಿತಪಿಸುತ್ತಿದ್ದಾರೆ ಎಂದರು.
ಅವಿಭಜಿತ ಹಕ್ಕಿನ ಕ್ರಯ ಸಾಧನ ಪತ್ರ, ಮೂಲಿ ಹಕ್ಕಿನ ಕ್ರಯ ಸಾಧನ ಪತ್ರ, ವರ್ಗ ರೈಟ್ಸ್, ಹಕ್ಕು ಬಿಡುಗಡೆ ಪತ್ರ, ನಗರ ಪ್ರದೇಶಗಳ ಕೃಷಿ ಭೂಮಿಯ ಕ್ರಯ ಸಾಧನ ಪತ್ರ,ಮೊಬೈಲ್ ಮೂಲಕ ಆಸ್ತಿಯ ಸ್ಥಳಸೂಚಿ ಸೆರೆಹಿಡಿಯುವ ಸಮಯದಲ್ಲಿ ತಾಂತ್ರಿಕ ಸಮಸ್ಯೆ, ಸಾಫ್ಟ್‌ವೇರ್‌ನ ತಂತ್ರಾಂಶದ ದೋಷದಿಂದ ಸ್ಥಳಸೂಚಿ ರಸ್ತೆಯ ನಂಬರ್ ಬದಲಾಗುವುದು ಸೇರಿದಂತೆ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಇ ಖಾತಾ ಸಮಸ್ಯೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದರೂ ಅದನ್ನು ಸರಿಪಡಿಸಲು ಮನಸ್ಸು ಮಾಡದೇ ಇರುವುದು ವಿಪರ್ಯಾಸ ಎಂದರು.
ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆಯು ಉತ್ತಮ ಉದ್ದೇಶದೊಂದಿಗೆ ಜಾರಿಗೆ ತಂದ ಮೋಟಾರು ವಾಹನಗಳ ನಿಯಮ-೨೦೧೮ ಅನ್ನು ರಾಜ್ಯ ಸರ್ಕಾರ ಟ್ಯಾಕ್ಸಿ ಚಾಲಕರನ್ನು ಲೂಟಿ ಮಾಡಲು ಬಳಸಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಅಧಿವೇಶನದಲ್ಲೂ ಸರ್ಕಾರದ ಗಮನ ಸೆಳೆದಿದ್ದೇನೆ. ಕೇಂದ್ರ ಸರ್ಕಾರವೇ ಟ್ರ್ಯಾಕಿಂಗ್ ಸಿಸ್ಟಂ ಹಾಗೂ ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳಲು ಗರಿಷ್ಠ ೭,೫೫೦ ರು. ಬೆಲೆ ನಿಗದಿಪಡಿಸಿದ್ದು, ಪಕ್ಕದ ಕೇರಳದಲ್ಲೂ ೬,೫೦೦ ರು.ಗಳಲ್ಲಿ ಈ ಸಾಧನಗಳನ್ನು ಅಳವಡಿಸಲಾಗುತ್ತಿದೆ. ಆದರೆ ನಮ್ಮ ರಾಜ್ಯದ ಆರ್‌ಟಿಒಗಳಲ್ಲಿ ಮಾತ್ರ ಈ ಸಾಧನದ ಬೆಲೆ ೧೫,೦೦೦ ರು. ಇದೆ. ರಾಜ್ಯ ಸಾರಿಗೆ ಇಲಾಖೆಯು ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್ಜೆನ್ಸಿ ಟ್ರ್ಯಾಕಿಂಗ್ ಬಟನ್ ಪೂರೈಸುವ ಡೀಲರ್ ಪಟ್ಟಿಯಲ್ಲಿನ ಅಧಿಕೃತ ಡೀಲರ್ ಒಬ್ಬರಿಂದಲೇ ಡಿವೈಸ್‌ಗಳನ್ನು ಅಳವಡಿಸಿಕೊಂಡರೂ ಫಿಟ್ನೆಸ್ ಪ್ರಮಾಣಪತ್ರ ನೀಡುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಪ್ರವೇಶ ನಿರ್ಬಂಧ..
ರಾಜ್ಯದಲ್ಲಿ ಯಾವುದೇ ಸಾರ್ವಜನಿಕ ಸರ್ಕಾರಿ ಕಚೇರಿಗಳಲ್ಲಿ ಪ್ರವೇಶ ನಿರ್ಬಂಧಿಸುವ ಕ್ರಮವಿಲ್ಲ. ಆದರೆ ಮಂಗಳೂರಿನ ಮೂಡ ಕಚೇರಿ ಒಳಗೆ ಯಾವ ಸಾರ್ವಜನಿಕರಿಗೂ, ವಕೀಲರುಗಳಿಗೂ ಈಗ ಪ್ರವೇಶ ನಿರ್ಬಂಧಿಸಲಾಗಿದೆ. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗಿದ್ದು ಕೆಟ್ಟ ದಾಖಲೆಯೊಂದು ನಮ್ಮ ಮಂಗಳೂರಿನ ಹೆಸರಿನಲ್ಲಿ ದಾಖಲಾಗಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ಕಳೆದ ಎರಡು ವರ್ಷಗಳಿಂದ ಬ್ರಹ್ಮಾಂಡ ಭ್ರಷ್ಟಾಚಾರದ ಗೂಡಾಗಿರುವ ಮಂಗಳೂರಿನ ಮೂಡಾದ ಅಕ್ರಮಗಳನ್ನು ನಿಯಂತ್ರಿಸುವುದನ್ನು ಬಿಟ್ಟು ನ್ಯಾಯಯುತವಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗಲು ಬರುವ ಸಾರ್ವಜನಿಕರನ್ನು, ವಕೀಲರುಗಳನ್ನು ನಿರ್ಬಂಧಿಸುವುದು ಎಷ್ಟು ಸರಿ? ಮೂಡಾದಲ್ಲಿ ಅಗತ್ಯ ಸಿಬ್ಬಂದಿಗಳೇ ಇಲ್ಲ. ಟೈಪಿಸ್ಟ್, ಸರ್ವೇಯರ್ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಸಿಬ್ಬಂದಿ ಕೊರತೆ ಇದೆ. ಹೀಗಾದರೆ ಸಮಯಕ್ಕೆ ಸರಿಯಾಗಿ ಜನರ ಕೆಲಸಗಳು ನಡೆಯುವುದಾದರೂ ಹೇಗೆ ಎಂದವರು ಪ್ರಶ್ನಿಸಿದರು.
ಮುಖಂಡರಾದ ರಮೇಶ್ ಕಂಡೆಟ್ಟು, ಪೂರ್ಣಿಮಾ, ಪ್ರೇಮಾನಂದ ಶೆಟ್ಟಿ, ಸಂಜಯ್ ಪ್ರಭು, ನಿತಿನ್ ಕುಮಾರ್, ರವಿಶಂಕರ್ ಮಿಜಾರ್, ಲಲ್ಲೇಶ್, ರಮೇಶ್ ಹೆಗ್ಡೆ ಉಪಸ್ಥಿತರಿದ್ದರು.

Exit mobile version