Home ತಾಜಾ ಸುದ್ದಿ “ಪುಟ್ಟಣ್ಣನ ಕತ್ತೆ” ಮೊದಲನೋಟ ಬಿಡುಗಡೆ

“ಪುಟ್ಟಣ್ಣನ ಕತ್ತೆ” ಮೊದಲನೋಟ ಬಿಡುಗಡೆ

0

“ದಾರಿ ಯಾವುದಯ್ಯ ವೈಕುಂಠಕೆ” ಎಂಬ ಉತ್ತಮ ಚಿತ್ರವನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ “ಸಿದ್ದು ಪೂರ್ಣಚಂದ್ರ” ರವರು ಸದಾ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಹಲವು ವಿಭಿನ್ನ ಚಿತ್ರಗಳನ್ನು ಈಗಾಗಲೇ ನಿರ್ದೇಶನ ಮಾಡಿದ್ದಾರೆ. ಬ್ರಹ್ಮಕಮಲ, ತಾರಿಣಿ, ಈ ಪಾದ ಪುಣ್ಯ ಪಾದ, ಇವುಗಳ ಸಾಲಿಗೆ ಮತ್ತೊಂದು ಹೊಸ ಚಿತ್ರ “ಪುಟ್ಟಣ್ಣನ ಕತ್ತೆ” ಎಂಬ ಚಿತ್ರವೂ ಸೇರಿಕೊಳ್ಳುತ್ತದೆ.

ನಿರ್ದೇಶಕರ ಜನುಮದಿನದಂದು ಚಿತ್ರ ತಂಡ “ಪುಟ್ಟಣ್ಣನ ಕತ್ತೆ” ಪೋಸ್ಟರ್ ಬಿಡುಗಡೆ ಮಾಡಿದೆ. ಮೊದಲ ಪೋಸ್ಟರ್ನಲ್ಲಿ ಕತ್ತೆಯನ್ನು ತೋರಿಸಿರುವುದು ಚಿತ್ರದ ಶುಭ ಸೂಚನೆ ಎಂದು ಚಿತ್ರ ತಂಡ ಹೇಳಿಕೊಂಡಿದೆ. ಮುಂದಿನ ಪೋಸ್ಟರ್ನಲ್ಲಿ ಕಲಾವಿದರನ್ನು ತೋರಿಸಲಾಗುತ್ತದೆ ಎಂದು ನಿರ್ದೇಶಕರು ತಿಳಿಸಿದರು.

ಎಲ್ಲರು ನಾಯಿ ಮೇಲೆ ಚಿತ್ರ ಮಾಡಿದರೆ ನಾನ್ಯಾಕೆ ಕತ್ತೆ ಮೇಲೆ ಕತೆ ಬರೆದು ಚಿತ್ರ ಮಾಡಬಾರದು ಅಂತ ಐಡಿಯಾ ಬಂದಾಗ ಈ ಕಥೆ ಹೊಳೆಯಿತು. ಈ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಮನುಷ್ಯರ ಜೊತೆ ಕತ್ತೆಯನ್ನು ಬಳಸಲಾಗಿದೆ. ಮೊದಲಿಗೆ ಇದು ಸಾವಾಲಾಗಿ ಪರಿಣಮಿಸಿದರೂ ನಂತರ ಅದರೊಂದಿಗೆ ನಟರನ್ನು ಬಿಟ್ಟು ಅಭ್ಯಾಸ ಮಾಡಿಸಿದೆವು, ನಟನೆ ಜೊತೆಗೆ ಅದರೊಂದಿಗೆ ಬಾಂದವ್ಯ ಬೆಳೆಸಿಕೊಂಡ ನಂತರ ಚಿತ್ರೀಕರಿಸಲಾಯಿತು. ನಮ್ಮೆಲ್ಲರಿಗೂ ಕತ್ತೆಯ ಜೊತೆಗಿನ ಒಡನಾಟ ಹೊಸದು, ಅದರ ಮನಸ್ಥಿತಿ ನೋಡಿಕೊಂಡು ಚಿತ್ರೀಕರಣ ಮಾಡಿದೆವು. ಮುಂದಿನ ಇನ್ನೊಂದು ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಪ್ರಾರಂಭದಲ್ಲಿ ಕಷ್ಟವೆಸಿದರೂ ಒಂದೆರಡು ದಿನಗಳಲ್ಲಿ ಕತ್ತೆಯೂ ನಮ್ಮೊಂದಿಗೆ ಸಹಕರಿಸಿದ್ಧು ವಿಶೇಷ. ಇದಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತಿದ್ದೇನೆಂದು “ಸಿದ್ದು ಪೂರ್ಣಚಂದ್ರ” ರವರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

‘ಪೂರ್ಣಚಂದ್ರ ಫಿಲಂಸ್’ಲಾಂಛನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಇದೇ ಮೊದಲ ಬಾರಿಗೆ “ತನ್ಮಯ್ ಎಸ್ ಗೌಡ” ರವರು ಬಂಡವಾಳ ಹೂಡಿದ್ದಾರೆ. ಮುಖ್ಯ ಪಾತ್ರದಲ್ಲಿ ಅನಿಶ್ ಆರ್ಯನ್, ಭೀಮೇಶ್ ಅಭಿನಯಿಸಿದ್ದಾರೆ. ಉಳಿದಂತೆ ಕಲಾರತಿ ಮಹದೇವ್, ಸಿದ್ದು ಮಂಡ್ಯ, ರಶ್ಮಿ ಮೈಸೂರ್, ಬಾಬು, ರೋಹಿಣಿ, ಎನ್ ಟಿ ರಾಮಸ್ವಾಮಿ, ಲಕ್ಕಿ ಶಂಕರ್, ಶೃತಿ ಗಗನ, ಸೌಮ್ಯ, ಕವಿತಾ ಕಂಬಾರ್, ಲಿಯೋ ಶರ್ಮ, ವಿಭಾ ವಂದನ್ ಇನ್ನೂ ಮುಂತಾದವರು ಅಭಿನಯಿಸುತ್ತಿದ್ದಾರೆ.

ಛಾಯಾಗ್ರಾಹಕರಾಗಿ ರಾಜು ಹೆಮ್ಮಿಗೇಪುರ, ಸಂಕಲನಕಾರರಾಗಿ ದೀಪು, ಸಂಗೀತ ಅನಂತ್ ಆರ್ಯನ್, ಸಿಂಕ್ ಸೌಂಡ್ ಕೃಷ್ಣಮೂರ್ತಿ ರವರು ನಿರ್ವಹಿಸಿದ್ದಾರೆ.

Exit mobile version