ಬೆಂಗಳೂರು: ಬೆಂಗಳೂರು ಜನರ ಜೀವನಾಡಿ ನಮ್ಮ ಮೆಟ್ರೋ ಒಂದು ಮಹತ್ತರ ಕಾರ್ಯಕ್ಕೆ ಕೈ ಜೋಡಿಸಿದೆ. ಇದೇ ಮೊದಲ ಬಾರಿಗೆ ನಗರದ ಮೆಟ್ರೋ ರೈಲಿನಲ್ಲಿ ಅಂಗಾಂಗ ಸಾಗಣೆ ಮಾಡಲಾಗಿದೆ. ಈ ಕುರಿತು ಬಿಎಂಆರ್‌ಸಿಎಲ್ ಮಾಹಿತಿ ಹಂಚಿಕೊಂಡಿದೆ.
ಉದ್ಯಾನ ನಗರಿ ಬೆಂಗಳೂರಿನಲ್ಲಿ ಜೀವಂತ ಹೃದಯ ಸೇರಿದಂತೆ ಹಲವು ಅಂಗಾಂಗ ಸಾಗಣೆಯನ್ನು ರಸ್ತೆ, ವಿಮಾನದ ಮೂಲಕ ಮಾಡಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಆಸ್ಪತ್ರೆಯಿಂದ ಅಂಗಾಂಗಗಳನ್ನು ಮೆಟ್ರೋ ನಿಲ್ದಾಣಕ್ಕೆ ತಂದು ಅಲ್ಲಿಂದ ಬೇರೆ ಆಸ್ಪತ್ರೆಗೆ ಸಾಗಿಸಲಾಗಿದೆ.
ಬಿಎಂಆರ್‌ಸಿಎಲ್ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ಕೊಟ್ಟಿದೆ. ಪ್ರಥಮ ಬಾರಿಗೆ ನಮ್ಮ ಮೆಟ್ರೋ ಮಾನವ ಯಕೃತ್ ಅನ್ನು ಶಸ್ತ್ರಚಿಕಿತ್ಸೆಗಾಗಿ ಸಾಗಿಸಲು ಸಹಕಾರ ನೀಡಿದೆ ಎಂದು ಹೇಳಿದೆ. ಆಗಸ್ಟ್ 1ರ ಶುಕ್ರವಾರ ಈ ಸಾಗಣೆ ಮಾಡಲಾಗಿದೆ.
ಯಾವ ನಿಲ್ದಾಣದಿಂದ ಎಲ್ಲಿಗೆ?; ಆಗಸ್ಟ್ 1ರಂದು ರಾತ್ರಿ 8.38ಕ್ಕೆ ಯಕೃತ್ ಅನ್ನು ವೈದ್ಯರೊಬ್ಬರು ಮತ್ತು7 ಮಂದಿ ವೈದ್ಯಕೀಯ ಸಿಬ್ಬಂದಿಯೊಂದಿಗೆ ವೈದೇಹಿ ಆಸ್ಪತ್ರೆಯಿಂದ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ಆಂಬುಲೆನ್ಸ್ ಮೂಲಕ ತರಲಾಯತು.
ಅಂಬ್ಯುಲೆನ್ಸ್ ಮೆಟ್ರೋ ನಿಲ್ದಾಣ ತಲುಪಿದ ಕೂಡಲೇ ಸಹಾಯಕ ಭದ್ರತಾ ಅಧಿಕಾರಿ ಮತ್ತು ಮೆಟ್ರೋ ಸಿಬ್ಬಂದಿ ತಂಡವನ್ನು ಬರ ಮಾಡಿಕೊಂಡರು. ದಾಖಲೆ ಕಾರ್ಯ ಮತ್ತು ಭದ್ರತಾ ಪರಿಶೀಲನೆಗಳನ್ನು ಪೂರ್ಣಗೊಳಿಸಿದರು.
ಬಳಿಕ ಯಕೃತ್ ಹೊತ್ತ ನಮ್ಮ ಮೆಟ್ರೋ ರೈಲು ರಾತ್ರಿ 8.42ಕ್ಕೆ ವೈಟ್‌ಫೀಲ್ಡ್ ನಿಲ್ದಾಣದಿಂದ ಹೊರಟು, ರಾತ್ರಿ 9.48ಕ್ಕೆ ರಾಜರಾಜೇಶ್ವರಿ ನಗರ ನಿಲ್ದಾಣಕ್ಕೆ ತಲುಪಿತು.
ಅಲ್ಲಿ ಮೆಟ್ರೋ ಸಿಬ್ಬಂದಿ ವೈದ್ಯಕೀಯ ತಂಡವನ್ನು ಸ್ವಾಗತಿಸಿ, ಹೊರಗೆ ಕಾಯುತ್ತಿರುವ ಆಂಬ್ಯುಲೆನ್ಸ್ ಅದನ್ನ ಆಸ್ಪತ್ರೆಗೆ ಸಾಗಿಸಲು ಸಹಕಾರ ನೀಡಿದರು. ಅಂಗಾಂಗಿ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಸಮಯಕ್ಕೆ ಅದನ್ನು ಸ್ಪರ್ಶ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಲಾಯಿತು ಎಂದು ತಿಳಿಸಿದೆ.
ಅಂಗಾಂಗ ಸಾಗಣೆಯಂತಹ ಜೀವ ಉಳಿಸುವ ಕಾರ್ಯಾಚರಣೆಯಲ್ಲಿ ಸಹಕಾರ ಮತ್ತು ಜವಾಬ್ದಾರಿಯನ್ನು ತೋರಿದ ಸಹಾಯಕ ಭದ್ರತಾ ಅಧಿಕಾರಿಗಳು, ಹೋಮ್ ಗಾರ್ಡ್, ಮೆಟ್ರೋ ಸಿಬ್ಬಂದಿಗೆ ವೈದ್ಯಕೀಯ ತಂಡದವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಈ ಕಾರ್ಯಚರಣೆಯನ್ನು ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮದ ಕಾರ್ಯವಿಧಾನ ಆದೇಶದ ಮಾರ್ಗಸೂಚಿಗಳಡಿ ಮಾಡಲಾಗಿದೆ. ಇದು ಮೆಟ್ರೋ ರೈಲು ಮೂಲಕ ಅಂಗಾಂಗ ಸಾಗಣೆ ನಡೆಸಿದ ದೇಶದ 2ನೇ ಪ್ರಕರಣವಾಗಿದೆ.
ಬೆಂಗಳೂರು ನಗರದಲ್ಲಿ ಅಂಗಾಂಗ ಸಾಗಣೆ ಮಾಡುವಾಗ ಬೆಂಗಳೂರು ನಗರ ಸಂಚಾರಿ ಪೊಲೀಸರು ಹಸಿರು ಕಾರಿಡಾರ್ ವ್ಯವಸ್ಥೆಯನ್ನು ಮಾಡುತ್ತಾರೆ. ಅಂಬ್ಯುಲೆನ್ಸ್ ಆಸ್ಪತ್ರೆಯಿಂದ ಹೊರಟ ತಕ್ಷಣ ಮತ್ತೊಂದು ಆಸ್ಪತ್ರೆ ತಲುಪುವ ತನಕ ಸಿಗ್ನಲ್ ಫ್ರೀ ವ್ಯವಸ್ಥೆ ಮಾಡಲಾಗುತ್ತದೆ. ಜೀವಂತ ಹೃದಯ ಸಾಗಣೆ ಮಾಡುವಾಗ ಝಿರೋ ಟ್ರಾಫಿಕ್ ವ್ಯವಸ್ಥೆ ಇರುತ್ತದೆ.
ಹಲವು ಬಾರಿ ನಗರದಲ್ಲಿ ವಿವಿಧ ಆಸ್ಪತ್ರೆಗಳಿಗೆ, ಬೇರೆ ರಾಜ್ಯಗಳಿಗೆ ಸಹ ರಸ್ತೆ, ವಿಮಾನದ ಮೂಲಕ ಅಂಗಾಂಗ ಸಾಗಣೆ ಮಾಡಲಾಗಿದೆ. ಆದರೆ ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋದಲ್ಲಿ ಅಂಗಾಂಗ ಸಾಗಿಸಲಾಗಿದೆ. ಇದಕ್ಕೆ ಮೆಟ್ರೋ ಸಿಬ್ಬಂದಿಗಳು ಸಹಕಾರ ನೀಡಿದ್ದಾರೆ.