ಶತ್ರುವಿನ ಎದುರು ರಾಜಿಯಿಲ್ಲದೆ, ರಾಷ್ಟ್ರದ ಘನತೆ ಎತ್ತಿಹಿಡಿಯುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯವನ್ನು ಜನತೆ ಈಗ ಬಯಸುತ್ತಿದೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾರತವು ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಹೋಗಬಾರದು ಎಂದಿಲ್ಲ. ಬದಲಿಗೆ, ಭಾರತವು ತನ್ನ ಭದ್ರತಾ ವ್ಯವಸ್ಥೆಯನ್ನು ಗಟ್ಟಿಗೊಳಿಸಿ, ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು, ಭಾರತೀಯರ ಸುರಕ್ಷತೆಯನ್ನು ಖಾತರಿಪಡಿಸಿದ ನಂತರವೇ ಯುದ್ಧದ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಂತೆ, ಶತ್ರುವಿನ ಎದುರು ರಾಜಿಯಿಲ್ಲದೆ, ರಾಷ್ಟ್ರದ ಘನತೆಯನ್ನು ಎತ್ತಿಹಿಡಿಯುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯವನ್ನು ಜನತೆ ಈಗ ಬಯಸುತ್ತಿದೆ. 1971ರಲ್ಲಿ ಪಾಕಿಸ್ತಾನದ ಸೇನೆಯ ಶರಣಾಗತಿಯು ಕೇವಲ ಯುದ್ಧದ ಗೆಲುವಾಗಿರಲಿಲ್ಲ; ಅದು ಭಾರತದ ಇಚ್ಛಾಶಕ್ತಿಯ ಸಂಕೇತವಾಗಿತ್ತು. ಇಂತಹ ಕ್ಷಣಗಳು ರಾಷ್ಟ್ರದ ಆತ್ಮಗೌರವವನ್ನು ಹೆಚ್ಚಿಸುತ್ತವೆ ಮತ್ತು ಶತ್ರುಗಳಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತವೆ.
1999ರಲ್ಲಿ ಕಾಂದಹಾರ್‌ನಲ್ಲಿ ಭಯೋತ್ಪಾದಕರ ಬೇಡಿಕೆಯಂತೆ ಭಾರತವು ಮಸೂದ್ ಅಜರ್ ಸೇರಿದಂತೆ ಅನೇಕ ಉಗ್ರರನ್ನು ಬಿಡುಗಡೆಗೊಳಿಸಿತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರದಲ್ಲಿ ವಿದೇಶಾಂಗ ಸಚಿವರಾದ ಜಸ್ವಂತ್ ಸಿಂಗ್ ಅವರು ವಿಶೇಷ ವಿಮಾನದಲ್ಲಿ ಉಗ್ರರನ್ನು ಕರೆದ್ದೋಯುವ ವ್ಯವಸ್ಥೆ ಮಾಡಿ, ಒತ್ತೆಯಾಳುಗಳನ್ನು ಕರೆತಂದರು.
ಬಿಜೆಪಿ ಆಡಳಿತಾವಧಿಯಲ್ಲಿ ಹಿಂದೆ ನಡೆದ
- (2001) ಭಾರತೀಯ ಸಂಸತ್ ಭವನದ ಮೇಲೆ ದಾಳಿ ನಡೆದು ಆರು ಪೊಲೀಸ್ ಸಿಬ್ಬಂದಿ, ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಒಬ್ಬ ಕಾರ್ಮಿಕ ಸೇರಿದಂತೆ 9 ಜನರು ಕೊಲ್ಲಲ್ಪಟ್ಟರು.
- (2002) ಅಕ್ಷರಧಾಮ ದೇವಸ್ಥಾನದ ಮೇಲೆ ಇಬ್ಬರು ಭಯೋತ್ಪಾದಕರು ದಾಳಿ ನಡೆಸಿದರು, 30ಕ್ಕೂ ಹೆಚ್ಚು ಜನರನ್ನು ಕೊಂದರು ಮತ್ತು 80ಕ್ಕೂ ಹೆಚ್ಚು ಜನರಿಗೆ ಗಾಯಗೊಳಿಸಿದರು.
- (2002) ಜಮ್ಮುವಿನ ರಘುನಾಥ ದೇವಸ್ಥಾನದ ಮೇಲೆ ಎರಡು ಪ್ರತ್ಯೇಕ ದಾಳಿಗಳು ನಡೆದವು, ಒಟ್ಟು 20ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು.
- (2016) ಪಠಾಣ್‌ಕೋಟ್ ವಾಯುನೆಲೆಯ ಮೇಲೆ ನಡೆದ ದಾಳಿಯಲ್ಲಿ 7 ಯೋಧರು ಮೃತಪಟ್ಟರು.
- (2016) ಉರಿಯ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ 18 ಯೋಧರು ಹತ್ಯೆಯಾದರು.
- (2017) ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಅಮರನಾಥ ಯಾತ್ರಿಕರ ಬಸ್ ಮೇಲೆ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕರು ದಾಳಿ ನಡೆಸಿದರು, ಏಳು ಯಾತ್ರಿಕರು ಕೊಲ್ಲಲ್ಪಟ್ಟರು.
- (2019) ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ 40 CRPF ಯೋಧರನ್ನು ಕೊಂದ ಆತ್ಮಾಹುತಿ ದಾಳಿಯನ್ನು ತಡೆಯಲು ಗುಪ್ತಚರ ವಿಭಾಗ ವಿಫಲವಾಯಿತು.
ಇಂತಹ ಘಟನೆಗಳು ಮರುಕಳಿಸಿದರೆ, ಅದು ಜಾಗತಿಕ ವೇದಿಕೆಯಲ್ಲಿ ಭಾರತದ ಘನತೆಗೆ ಧಕ್ಕೆ ತರುತ್ತದೆ.
ಬಿಜೆಪಿ ಆಡಳಿತದ ಸಮಯದಲ್ಲಿ ಪಾಕಿಸ್ತಾನದಿಂದ ಉಗ್ರಗಾಮಿಗಳ ಒಳನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಯಲಾಗಿಲ್ಲ, ಇದು ಗುಪ್ತಚರ ಮತ್ತು ಭದ್ರತಾ ವೈಫಲ್ಯವನ್ನು ಸೂಚಿಸುತ್ತದೆ. ಇತ್ತೀಚೆಗೆ ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಗೆ ಭಾರತವು ತೀವ್ರವಾದ ಪ್ರತ್ಯುತ್ತರವನ್ನು ನೀಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಪಾಕಿಸ್ತಾನವು ಈಗಾಗಲೇ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಬಲೂಚಿಸ್ತಾನದಂತಹ ಆಂತರಿಕ ಘರ್ಷಣೆಗಳಿಂದ ಬಳಲುತ್ತಿದೆ. ಭಾರತವು ಇಂಡಸ್ ವಾಟರ್ ಒಪ್ಪಂದವನ್ನು ಸ್ಥಗಿತಗೊಳಿಸುವಂತಹ ರಾಜತಾಂತ್ರಿಕ ಕ್ರಮಗಳನ್ನು ಮುಂದುವರಿಸಿದರೆ, ಇದು ಪಾಕಿಸ್ತಾನದ ಮೇಲೆ ಒತ್ತಡವನ್ನು ಹೆಚ್ಚಿಸಬಹುದು. ಭಾರತವು ತನ್ನ ರಾಜತಾಂತ್ರಿಕ ಕಾರ್ಯತಂತ್ರವನ್ನು ಬಳಸಿಕೊಂಡು, ಪಾಕಿಸ್ತಾನದ ಭಯೋತ್ಪಾದನೆಗೆ ಬೆಂಬಲವನ್ನು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಎತ್ತಿ ತೋರಿಸಬೇಕು. ಇದು ಪಾಕಿಸ್ತಾನವನ್ನು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಒಡ್ಡಬಹುದು.
ಇದ್ಯಾವುದೂ ಉತ್ತಮ ಫಲಿತಾಂಶ ನೀಡದಿದ್ದರೆ ದೇಶದ ಹೆಮ್ಮೆಯನ್ನು ಎತ್ತಿಹಿಡಿಯಲು, ಭಾರತವು ಸಿದ್ಧತೆಯೊಂದಿಗೆ, ಎಚ್ಚರಿಕೆಯಿಂದ ಮತ್ತು ದೃಢವಾಗಿ ಯುದ್ಧ ಮಾಡುವತ್ತ ಮುನ್ನಡೆಯಬೇಕು. ಇಂದಿರಾ ಗಾಂಧಿಯವರ ಧೈರ್ಯವು ನಮಗೆ ಸ್ಫೂರ್ತಿಯಾಗಲಿ, ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈ ಸ್ಫೂರ್ತಿಯನ್ನು ಕಾರ್ಯರೂಪಕ್ಕೆ ತರಲಿ ಎಂದಿದ್ದಾರೆ.