ಹುಬ್ಬಳ್ಳಿ: ಸಂಪುಟ ಪುನರ್ ರಚನೆಯ ವಿಚಾರವಾಗಿ ಯಾರೋ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ. ಅದು ಸತ್ಯಕ್ಕೆ ದೂರವಾದುದು. ಆದರೆ, ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳು ಖಾಲಿ ಇವೆ. ಅವುಗಳ ನಾಮನಿರ್ದೇಶನ ಕುರಿತು ಹೈ ಕಮಾಂಡ್ ಜೊತೆ ಚರ್ಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವೇಚನೆಗೆ ಬಿಟ್ಟಿದ್ದು, ಅದಕ್ಕೂ ಹೈ ಕಮಾಂಡ್ ಸೂಚನೆ ನೀಡಬೇಕು ಎಂದು ಸ್ಪಷ್ಟಪಡಿಸಿದರು.
ಶಾಸಕ ಬಸನಗೌಡ ಯತ್ನಾಳ ಕಾಂಗ್ರೆಸ್ ಸೇರ್ಪಡೆಯ ವಿಚಾರವಾಗಿ ಮಾತನಾಡಿದ ಅವರು, ಅದು ಕೇವಲ ವದಂತಿ. ಬೇರೆ ಪಕ್ಷದವರ ವಿಚಾರ ನಮಗ್ಯಾಕೆ. ಅವರುಂಟು ಅವರ ಪಕ್ಷ ಉಂಟು ಎಂದು ಪ್ರತಿಕ್ರಿಯಿಸಿದರು. ವಕ್ಫ್ ಬೋರ್ಡ್ ಮಸೂದೆ ತಿದ್ದುಪಡಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸದೇ ಡಿಕೆಶಿ ತೆರಳಿದರು.