Home ತಾಜಾ ಸುದ್ದಿ ಪರಿಶಿಷ್ಟರ ಹಣ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ

ಪರಿಶಿಷ್ಟರ ಹಣ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ

0

ಹಾವೇರಿ(ಶಿಗ್ಗಾವಿ) :ಕಾಂಗ್ರೆಸ್ ಪಕ್ಷ ಮೀಸಲಾತಿ ವಿರೋಧಿಯಾಗಿದ್ದು, ಹೋದ ವರ್ಷ ಮತ್ತು ಪ್ರಸಕ್ತ ವರ್ಷದಲ್ಲಿ
ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದ 24 ಸಾವಿರ ಕೋಟಿ ರೂ. ಅನ್ನು ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡು ಎಸ್ಸಿ ಎಸ್ಟಿ ಸಮುದಾಯಗಳಿಗೆ ದ್ರೋಹ ಮಾಡಿದೆ ಎಂದು ಮಾಜಿ‌ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಶಿಗ್ಗಾವಿಯಲ್ಲಿ ಇಂದು ಬಿಜೆಪಿ ವತಿಯಿಂದ ಏರ್ಪಸಿದ್ದ ಎಸ್ಸಿ ಮೋರ್ಚಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕೆಂದು ಸಂವಿಧಾನ ಶಿಲ್ಪಿ ದಾದಾಸಾಹೇಬ್ ಅಂಬೇಡ್ಕರ್ ಅವರೇ ಹೇಳಿದ್ದಾರೆ. ಇಡೀ ದೇಶದಲ್ಲಿ ಸಂವಿಧಾನ ತಿದ್ದುಪಡಿ ಮಾಡುವುದಕ್ಕೆ ನಮ್ಮ‌ ನಿರ್ಧಾರಗಳೇ ಕಾರಣವಾಗುತ್ತವೆ, ಬೋವಿ, ಕೊರಚ, ಕೊರಮ, ಲಂಬಾಣಿ ಜನಾಂಗವನ್ನು ಎಸ್‌ಸಿ ಸಮುದಾಯದಿಂದ ತೆಗೆದುಹಾಕಬೇಕೆಂದು ಕಾಂಗ್ರೆಸ್ ನಾಯಕರೊಬ್ಬರು ಸುಪ್ರೀಂಕೋರ್ಟಿಗೆ ಹೋಗಿದ್ದರು. ಕೇಂದ್ರದಲ್ಲಿ ಎಸ್‌ಸಿ ಕಮೀಷನ್ ಇದ್ದು,ಇದಕ್ಕೆ ಸಂಬಂಧಪಟ್ಟ ಫೈಲ್ ನನ್ನ ಕಡೆ ಬಂದಿತ್ತು.1934ರಲ್ಲಿ ಆದಂತಹ ಮೊದಲ ಒರಿಜಿನಲ್ ಎಸ್‌ಸಿ ಪಟ್ಟಿಯಲ್ಲಿ ಈ ಸಮುದಾಯಗಳಿದ್ದು, ಅವನ್ನು ತೆಗೆದುಹಾಕಲು ಸಾಧ್ಯವಿಲ್ಲ‌. ಸೂರ್ಯ ಚಂದ್ರ ಇರುವವರೆಗೆ ಬೋವಿ, ಕೊರಚ, ಕೊರ್ಮಾ, ಲಂಬಾಣಿ, ಛಲವಾದಿ ಸಮುದಾಯಗಳನ್ನು ಪರಿಶಿಷ್ಟ ಪಟ್ಟಿಯಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಎಸ್‌ಸಿ ಎಸ್‌ಟಿ ಜನಾಂಗ ಉದ್ಧಾರ ಆಗಬೇಕು ಎಂದು ಮೀಸಲಾತಿ ಹೆಚ್ಚಿಸುವಂತೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅರ್ಜಿ ಹಾಕಿದ್ದರೂ ಕಾಂಗ್ರೆಸ್‌ನ ಯಾರೊಬ್ಬರೂ ಮೀಸಲಾತಿ ಹೆಚ್ಚಿಸಿಲ್ಲ. ಸಿದ್ದರಾಮಯ್ಯ ಈ ಹಿಂದೆ ಐದುವರ್ಷ ಪರಿಶಿಷ್ಟ ಸಮುದಾಯಗಳತ್ತ ತಿರುಗಿಯೂ ನೋಡಿರಲಿಲ್ಲ. ಆದರೆ ತಾವು ಎಸ್‌ಸಿ, ಎಸ್ಟಿ ಪರ ಎಂದು ನಾಟಕವಾಡುತ್ತಿದ್ದಾರೆ. ಬಾಬಾ ಸಾಹೇಬರಿಗಾಗಲೀ ಅವರ ಶಿಷ್ಯರಿಗಾಗಲೀ ಕಾಂಗ್ರೆಸ್ ಏನನ್ನೂ ಮಾಡಿಲ್ಲ. ಆದರೆ, ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸಿರುವ ಮುಖ್ಯಮಂತ್ರಿ ಯಾರಾದರೂ ಇದ್ದರೆ, ಅದು ನಿಮ್ಮ ಬಸವರಾಜ ಬೊಮ್ಮಾಯಿ ಮಾತ್ರವೇ ಎಂದರು.
ಮೀಸಲಾತಿ ಹೆಚ್ಚಳ ಮಾಡುವ ಪ್ರಸ್ತಾಪ ಬಂದಾಗ ಜೇನುಗೂಡಿಗೆ ಕೈ ಹಾಕಬೇಡಿ ಎಂದು ನನಗೆ
ಕಾಂಗ್ರೆಸ್ ನಾಯಕರು ಹೇಳಿದರು. ಸಿಎಂ ಸ್ಥಾನವನ್ನು ಕಸಿದುಕೊಳ್ಳಯವುದಾಗಿ ಕಾಂಗ್ರೆಸ್ ನಾಯಕರು ಹೆದರಿಸಿದ್ದರು. ಆದರೆ ಕಾಂಗ್ರೆಸ್ ಹೇಳಿದ್ದನ್ನು ಉಲ್ಟಾ ಮಾಡಿಯೇ ತೋರಿಸಲು ಮುಂದಾದೆ. ಜೇನು ಕಡಿದರೂ ಈ ಸಮಾಜಗಳಿಗೆ ನ್ಯಾಯ ಒದಗಿಸಬೇಕೆಂದು ಬದ್ಧನಾಗಿ ನಡೆದು
ನಾನು ಕೇವಲ ಸರ್ಕಾರಿ ಆದೇಶ ಅಷ್ಟೇ ಅಲ್ಲ, ವಿಧಾನಸಭೆಯಲ್ಲಿ ಪಾಸು ಮಾಡಿ ರಾಜ್ಯಪಾಲರಿಂದ ಅಂಕಿತ ಹಾಕಿಸಿ ಗೆಜೆಟ್ ನೊಟೀಫಿಕೇಷನ್ ಹೊರಡಿಸಿ ಬಂದೋಬಸ್ತ್ ಮಾಡಿದ್ದೇನೆ‌. ಇದರ ಪರಿಣಾಮ ಕಳೆದ ಎರಡು ವರ್ಷದಲ್ಲಿ ಈ ಸಮುದಾಯಗಳಿಗೆ ಇಂಜಿನಿಯರಿಂಗ್ ಸೀಟ್ ,ಮೆಡಿಕಲ್ ಸೀಟ್ ಹೆಚ್ಚಳವಾಗಿದೆ. ನಮ್ಮ ಈ ಮಕ್ಕಳು ಮುಂದೆ ಬರಬೇಕು ಎಂದರು.
ಕಾಂಗ್ರೆಸ್ ನವರು ಬೋವಿ, ಬಂಜಾರ ಸಮುದಾಯದವರ ಕಡೆ ಬಂದರೆ ಕಾಂಗ್ರೆಸ್ ಏನೂ ಮಾಡಲ್ಲ, ಅದೇ ಎಡಗೈ ಸಮುದಾಯ ಕಡೆ ಹೋದರೆ ರಿಸರ್ವೇಷನ್ ಮಾಡುತ್ತೇವೆ ಎನ್ನುತ್ತಾರೆ. ಹೌದಪ್ಪ ಹೇಳಿದರೆ ಹೌದಪ್ಪ, ಅಲ್ಲಪ್ಪ ಕೇಳಿದರೆ ಅಲ್ಲಪ್ಪ‌ ಎನ್ನುವ ಜಾಯಮಾನ ಕಾಂಗ್ರೆಸ್‌ನದು ಎಂದು ಲೇವಡಿ ಮಾಡಿದರು.
ಸಮಾವೇಶದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

Exit mobile version