Home News ಪತ್ನಿಯನ್ನು ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ

ಪತ್ನಿಯನ್ನು ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ

ಬಾಗಲಕೋಟೆ: ಪತ್ನಿಯ ಶೀಲ ಶಂಕಿಸಿ ಕೊಲೆಗೈದಿದ್ದ ಆರೋಪಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ, 10 ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿದೆ.
ಆರೋಪಿ ಯಮನಪ್ಪ ರಾಮಪ್ಪ ಹಳ್ಳದಮನಿ ಎಂಬಾತ ರೂಪಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ, ಇಬ್ಬರೂ ವಾಂಬೆ ಕಾಲೊನಿಯಲ್ಲಿ ವಾಸಿಸುತ್ತಿದ್ದರು. ರೂಪಾ ಗುರುರಾಜ ಎಂಬ ವ್ಯಕ್ತಿ ಜತೆಗೆ ಮೊಬೈಲ್‌ನಲ್ಲಿ ಸಲುಗೆಯಿಂದ ಮಾತನಾಡುತ್ತಿದ್ದ ವಿಷಯ ಪತಿ ಯಮನಪ್ಪನ ಗಮನಕ್ಕೆ ಬಂದು ಆ ವ್ಯಕ್ತಿಗೆ ಹಿರಿಯರ ಮೂಲಕ ತಾಕೀತು ಮಾಡಿಸಿದ್ದ. ಇದಾದ ನಂತರ ಲಕ್ಷ್ಮಣ ಎಂಬ ಮತ್ತೊಬ್ಬ ಮನೆಗೆ ಬಂದು ಹೋಗುತ್ತಿದ್ದ ಈ ವಿಷಯ ತಿಳಿದು ಆರೋಪಿ ಯಮನಪ್ಪ ಪತ್ನಿಗೆ ಬುದ್ಧಿವಾದ ಹೇಳಿದ್ದ.
ಮುಂದೆ ಈ ವಿಷಯವನ್ನು ತನ್ನ ಸ್ನೇಹಿತನೊಂದಿಗೆ ಯಮನಪ್ಪ ಹಂಚಿಕೊಂಡಾಗ ಇಬ್ಬರೂ ಸೇರಿ ರೂಪಾಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದಿದ್ದರು. ಮುಂದೆ ಸಾಕ್ಷಿ ನಾಶಕ್ಕಾಗಿ ಆಕೆಯ ಮೃತದೇಹವನ್ನು ಸುಟ್ಟುಹಾಕಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದರು. 2018ರಲ್ಲಿ ಈ ಘಟನೆ ನಡೆದಿತ್ತು. ಅಂದಿನ ಸಿಪಿಐ ಎಂ.ಎಸ್. ತುಳಸಿಗೇರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ. ವಿಜಯ ಅವರು ಆರೋಪಿ ಯಮನಪ್ಪನಿಗೆ 302 ಐಪಿಸಿ ಕಲಂ ಪ್ರಕಾರ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ.ಗಳ ದಂಡ ವಿಧಿಸಿದ್ದಾರೆ ಎಂದು ಅಭಿಯೋಗದ ಪರವಾಗಿ ವಾದಿಸಿದ ಪ್ರಧಾನ ಸರ್ಕಾರಿ ಅಭಿಯೋಜಕ ವಿ.ಜಿ. ಹೆಬಸೂರ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Exit mobile version