Home ತಾಜಾ ಸುದ್ದಿ ನಿವೃತ್ತ ಸಿಜೆ ಚಂದ್ರಚೂಡ್ ಸೇರಿ ಮೂವರಿಗೆ ಗೌಡಾ

ನಿವೃತ್ತ ಸಿಜೆ ಚಂದ್ರಚೂಡ್ ಸೇರಿ ಮೂವರಿಗೆ ಗೌಡಾ

0

ಧಾರವಾಡ: ರಾಜ್ಯ ಕಾನೂನು ವಿಶ್ವವಿದ್ಯಾಲಯದ ೬ನೇ ಘಟಿಕೋತ್ಸವ ದಿ. ೨೯ರ ಮುಂಜಾನೆ ೧೧ಕ್ಕೆ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ. ಸಿ. ಬಸವರಾಜು ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದು, ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕಾನೂನು ಸಚಿವ ಹೆಚ್.ಕೆ. ಪಾಟೀಲ ಉಪಸ್ಥಿತರಿರುವರು ಎಂದು ತಿಳಿಸಿದರು.
ಮೂವರಿಗೆ ಗೌಡಾ…
ಪ್ರಸಕ್ತ ಘಟಿಕೋತ್ಸವದಲ್ಲಿ ಕಾನೂನು ಕ್ಷೇತ್ರದಲ್ಲಿ ಗುರುತಿಸಿಕೊಂಡ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದ್ದು, ಈ ವರ್ಷ ನಿವೃತ್ತ ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ನ್ಯಾಯಮೂರ್ತಿ ಅಶೋಕ ಹಿಂಚಿಗೇರಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ ಎಂದರು.
ಘಟಿಕೋತ್ಸವದಲ್ಲಿ ೨,೯೯೧ ವಿದ್ಯಾರ್ಥಿಗಳು ಮತ್ತು ೨,೨೪೩ ವಿದ್ಯಾರ್ಥಿನಿಯರು ಸೇರಿ ಒಟ್ಟು ೫,೨೩೪ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ವಿವಿಧ ಕಾನೂನು ಕೋರ್ಸ್‌ಗಳಲ್ಲಿ ಹೆಚ್ಚಿನ ಅಂಕ ಪಡೆದ ೧೦ ವಿದ್ಯಾರ್ಥಿಗಳಿಗೆ ಸುವರ್ಣ ಪದಕ ಪ್ರದಾನ ಮಾಡಲಾಗುತ್ತಿದ್ದು, ಅದೇ ರೀತಿ ಕನ್ನಡ ಮಾಧ್ಯಮದಲ್ಲಿ ೩ ವರ್ಷದ ಹಾಗೂ ಐದು ವರ್ಷದ ಕಾನೂನು ಪದವಿಯಲ್ಲಿ ಹೆಚ್ಚಿನ ಅಂಕ ಪಡೆದ ಮತ್ತು ಆಂಗ್ಲ ಮಾಧ್ಯಮದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ರ‍್ಯಾಂಕ್ ಪ್ರಮಾಣಪತ್ರ ವಿತರಿಸಲಾಗುತ್ತಿದೆ ಎಂದರು.
ಅಲ್ಲದೇ ಈ ಬಾರಿಯ ಘಟಿಕೋತ್ಸವದಲ್ಲಿ ಆರು ಪುರುಷ ಮತ್ತು ಒಂಭತ್ತು ಮಹಿಳಾ ಅಭ್ಯರ್ಥಿಗಳು ಸೇರಿ ೧೫ ಅಭ್ಯರ್ಥಿಗಳಿಗೆ ಪಿಎಚ್‌ಡಿ ಪ್ರದಾನ ಮಾಡಲಾಗುತ್ತಿದೆ ಎಂದರು.

Exit mobile version