Home ತಾಜಾ ಸುದ್ದಿ ದೇವಾಲಯಗಳ ಆಸ್ತಿ ದೇವರ ಹೆಸರಿಗೆ ನೋಂದಣಿ ಮಾಡಿ

ದೇವಾಲಯಗಳ ಆಸ್ತಿ ದೇವರ ಹೆಸರಿಗೆ ನೋಂದಣಿ ಮಾಡಿ

0

ದಾವಣಗೆರೆ: ದೇವಾಲಯಗಳ ಆಸ್ತಿಯನ್ನು ದೇವರ ಹೆಸರಿನಲ್ಲಿ ನೋಂದಣಿ ಮಾಡಿಸುವ ಮೇಲ್ಪಂಕ್ತಿಯನ್ನು ಹಾಸನ ಜಿಲ್ಲೆಯ ಅಧಿಕಾರಿಗಳು ಹಾಕಿಕೊಟ್ಟಿದ್ದು, ಅದೇ ಮಾದರಿಯಲ್ಲಿ ಧಾರ್ಮಿಕ, ದತ್ತಿ ಇಲಾಖೆ ಅಧೀನದ ಹಿಂದು ದೇವಾಲಯಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದ ಎಂಸಿಸಿ ಎ ಬ್ಲಾಕ್‌ನ ಶ್ರೀ ಸುಕೃತೀಂದ್ರ ಕಲಾ ಮಂದಿರಕ್ಕೆ ಮಂಗಳವಾರ ಆಕಸ್ಮಿಕ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಧಾರ್ಮಿಕ ದತ್ತಿ ಇಲಾಖೆ ಇದ್ದು, ಅದೇ ಇಲಾಖೆಯಡಿ ಇರುವ ದೇವಾಲಯಗಳು, ದೇವಾಲಯಗಳ ಆಸ್ತಿಗಳ ರಕ್ಷಣೆಗೆ ಸರ್ಕಾರ ಮೊದಲು ಮುಂದಾಗಬೇಕು. ದೇವರ ಹೆಸರಿನಲ್ಲಿ ಆಸ್ತಿಗಳನ್ನು ನೋಂದಣಿ ಮಾಡಿಸಬೇಕು ಎಂದರು.
ಹಾಸನಕ್ಕೆ ಮೊನ್ನೆ ತಾವು ಭೇಟಿ ನೀಡಿದ್ದ ವೇಳೆ, ಅಲ್ಲಿನ ಅಧಿಕಾರಿಗಳೆಲ್ಲರೂ ದೇವಸ್ಥಾನ, ದೇವಸ್ಥಾನಗಳ ಆಸ್ತಿಯನ್ನು ದೇವರ ಹೆಸರಿಗೆ ನೋಂದಣಿ ಮಾಡುವ ಕೆಲಸ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿತು. ಅಂತಹದ್ದೊಂದು ಮೇಲ್ಪಂಕ್ತಿಯನ್ನು ಹಾಸನ ಜಿಲ್ಲೆಯ ಅಧಿಕಾರಿಗಳು ಹಾಕಿಕೊಟ್ಟಿದ್ದು, ಅದೇ ಮಾದರಿ ಕೆಲಸ ಎಲ್ಲಾ ಕಡೆ ಆಗಬೇಕು. ಹಿಂದೆಯೂ ಈ ಮಾತನ್ನು ನಾವು ಹೇಳಿದ್ದೆವು. ದೇವಸ್ಥಾನ, ದೇವಳ ಆಸ್ತಿಗಳು ದೇವರ ಹೆಸರಿಗೆ ಅಗತ್ಯವಾಗಿ ನೋಂದಣಿ ಆಗಲೇಬೇಕಿದೆ ಎಂದು ತಿಳಿಸಿದರು.
ರೈತರ ಜಮೀನು ವಕ್ಫ್ ಆಸ್ತಿ ಅಂತಾ ಮಾಡಿದ್ದು ಇದರ ಹಿಂದೆ ಯಾರು ಕೆಲಸ ಮಾಡಿದ್ದಾರೆಂಬ ಬಗ್ಗೆ ತೀರ್ಮಾನ ಆಗಬೇಕು. ಯಾರ ಆಸ್ತಿ ಯಾರದ್ದೋ ಅಂತಹವರಿಗೆ ಅದು ಸೇರಬೇಕು. ಇದ್ದಕ್ಕಿದ್ದಂತೆ ಒಂದು ದಿವಸ ಯಾಕೆ ಹೀಗಾಯಿತು? ಹಾಗೆ ಆಗಬಾರದಿತ್ತು. ನಮ್ಮ ಆಸ್ತಿ ಬೇರೆಯವರ ಆಸ್ತಿ ಅಂದರೆ ಹೇಗೆ? ಹಾಗಾಗಬಾರದಿತ್ತು ಎಂಬ ಪ್ರಶ್ನೆ ಸಹಜ. ಈಗ ಎಲ್ಲರೂ ಸಹ ಎಚ್ಚರವಾಗಿದ್ದಾರೆ. ಇಂತಹದ್ದೊಂದು ಕಾನೂನು ಎಲ್ಲಿಂದ ಬಂದಿತು, ಯಾಕೆ ಬಂದಿತು, ಹೇಗೆ ಬಂದಿತು ಎಂಬ ಬಗ್ಗೆಯೂ ಸಮಗ್ರ ವಿಚಾರಣೆ ಆಗಬೇಕು ಎಂದು ಅವರು ಹೇಳಿದರು.

Exit mobile version