Home ಸಂಸ್ಕೃತಿ ಸಂಪದ ದುರ್ಗುಣಗಳನ್ನು ಸಂಪೂರ್ಣ ತೊಲಗಿಸಿ

ದುರ್ಗುಣಗಳನ್ನು ಸಂಪೂರ್ಣ ತೊಲಗಿಸಿ

0

ಮನಸ್ಸು ಹಾಗೂ ಸಾಕ್ಷಿಯ ಬಗ್ಗೆ ನೀವು ಅನೇಕ ವಿಚಾರಗಳನ್ನು ತಿಳಿದಿರುವಿರಿ. ಸಾಕ್ಷಿಯಲ್ಲಿರುವ ಗುಣಗಳು ಹೆಚ್ಚಾಗಬೇಕು. ಮನಸ್ಸಿನ ದುರ್ಗುಣಗಳು ಸಂಪೂರ್ಣ ಪರಿಹಾರವಾಗಬೇಕು. ಸಾಕ್ಷಿಯು ಜ್ಞಾನ, ಭಕ್ತಿ, ವಿನಯ ಮೊದಲಾದ ರೂಪವನ್ನೇ ತಾಳಿರುತ್ತದೆ. ಹಾಗಾದರೆ ಸಂಸಾರ ದೆಸೆಯಲ್ಲಿ ಸಾಕ್ಷಿಯಲ್ಲಿರುವ ಜ್ಞಾನ, ಭಕ್ತಿ ಮೊದಲಾದವು ನಮಗೆ ಅನುಭವ ಬರುವುದಿಲ್ಲವೇ ಎಂಬ ಪ್ರಶ್ನೆ ಬರುತ್ತದೆ. ಇದರ ಬಗ್ಗೆ ಉತ್ತರ ತಿಳಿಯಲು ಪ್ರಯತ್ನಿಸಬೇಕು.
ಭಕ್ತಿಯಲ್ಲಿ ಎರಡು ವಿಧ ಒಂದು ಮಾನಸಭಕ್ತಿ, ಎರಡನೇಯದು ಸ್ವರೂಪಭಕ್ತಿ, ಸ್ವರೂಪಭಕ್ತಿಯು ಬಾಹ್ಯ ಭಕ್ತಿಯಿಂದ ಅಭಿವೃದ್ಧವಾಗುತ್ತದೆ. ಅದರ ಪ್ರಭಾವಕ್ಕೊಳಗಾಗುತ್ತದೆ. ಅನಾದಿಕಾಲದಿಂದ ನಮ್ಮ ಸ್ವರೂಪದಲ್ಲೇ ಭಕ್ತಿ ಸಹಜವಾಗಿ ಇರುತ್ತದೆ ಹೊರತು, ಅದು ಯಾವುದೇ – ಶಾಸ್ತ್ರಜ್ಞಾನದಿಂದ ಹುಟ್ಟುವಂತಹದ್ದಲ್ಲ.
ಉದಾಹರಣೆಗೆ ಒಬ್ಬನಲ್ಲಿ ನೂರು ಭಕ್ತಿ ಇದೆಯೆಂದು ಇಟ್ಟುಕೊಳ್ಳೋಣ. ಭಗವಂತನ ಪ್ರೇರಣೆಯಿಂದ ಅದರಲ್ಲಿ ಒಂದು ಭಕ್ತಿಯು ವಿಕಸಿತವಾಗುತ್ತದೆ. ಅದರಿಂದ ಮತ್ತೊಂದು ಭಕ್ತಿ ವಿಕಸಿತವಾಗುತ್ತದೆ. ಹೀಗೆ ಸ್ವರೂಪದಲ್ಲಿರುವ ನೂರು ಭಕ್ತಿಗಳೂ ಕೂಡ ಏಕಸಿತವಾದಾಗ ಭಗವಂತನ ಸಾಕ್ಷಾತ್ಕಾರ ಮತ್ತು ಪ್ರಸಾದಗಳು ಉಂಟಾಗುತ್ತವೆಂದು ತಿಳಿಯಬೇಕು.
ಸಂಸಾರ ಕಾಲದಲ್ಲಿಯೂ ಸ್ವರೂಪಭಕ್ತಿಯು ಕೆಲವೊಮ್ಮೆ ಅಭಿವ್ಯಕ್ತವಾಗುತ್ತದೆ. ಕೆಲವೊಮ್ಮೆ ದೇವರ ಪೂಜೆ ಮಾಡುವಾಗ, ಭಾಗವತಾದಿ ಪುರಾಣಗಳನ್ನು ಶ್ರವಣ ಮಾಡುವಾಗ ಕಣ್ಣುಗಳಲ್ಲಿ ನೀರು ಧಾರಾಕಾರವಾಗಿ ಹರಿಯುತ್ತದೆ. ಸಮಸ್ತ ಜಗತ್ತೇ ಬೇಡವೆಂದೆನಿಸುತ್ತದೆ. ಇದೇ ಸ್ವರೂಪ ಭಕ್ತಿ, ಕೇವಲ ನಾಮಸ್ಮರಣೆ ಮಾಡುವಾಗ ಪೂಜೆ, ಪುನಸ್ಕಾರಗಳನ್ನು ಮಾಡುವಾಗ ಮಾನಸಭಕ್ತಿ ಇರುತ್ತದೆ ಹೊರತು, ಸ್ವರೂಪಭಕ್ತಿ ಇರುವುದಿಲ್ಲ. ಸ್ವರೂಪಭಕ್ತಿಯು ಅಭಿವ್ಯಕ್ತವಾಗಬೇಕಾದರೆ ಭಗವಂತನ ಪ್ರೇರಣೆ ಮತ್ತು ಅನುಗ್ರಹ ಅವಶ್ಯಕ.
ಸ್ವರೂಪ ಭಕ್ತಿಯು ಅಭಿವ್ಯಕ್ತವಾಗುವ ಮೊದಲು ಲಿಂಗಶರೀರದ ಮನಸ್ಸಿನಲ್ಲಿರುವ ಭಕ್ತಿಯು ಅಭಿವ್ಯಕ್ತವಾಗಬೇಕು. ಅದಕ್ಕಿಂತ ಮೊದಲು ಸ್ಥೂಲಶರೀರದ ಮನಸ್ಸಿನಲ್ಲಿರುವ ಭಕ್ತಿಯು ಅಭಿವ್ಯಕ್ತವಾಗಬೇಕು. ಅದಕ್ಕೆ ಪೂರಕವಾಗಿ ಶ್ರವಣ,ಮನನ, ನಿಧಿ ಧ್ಯಾಸನಗಳನ್ನು ಆಚರಣೆ ಮಾಡಬೇಕು.

Exit mobile version