Home ಅಪರಾಧ ದಲಿತ ಮಹಿಳೆ ಹತ್ಯೆ ಪ್ರಕರಣ: 17 ಜನರಿಗೆ ಜೀವಾವಧಿ, ನಾಲ್ವರಿಗೆ ಎರಡು ವರ್ಷ ಜೈಲು

ದಲಿತ ಮಹಿಳೆ ಹತ್ಯೆ ಪ್ರಕರಣ: 17 ಜನರಿಗೆ ಜೀವಾವಧಿ, ನಾಲ್ವರಿಗೆ ಎರಡು ವರ್ಷ ಜೈಲು

0

ತುಮಕೂರು: ದಲಿತ ಮಹಿಳೆಯೊಬ್ಬರ ಹತ್ಯೆ ಪ್ರಕರಣದಲ್ಲಿ 17 ಮಂದಿಗೆ ಜೀವಾವಧಿ, ನಾಲ್ವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ತಲಾ 13 ಸಾವಿರ ದಂಡವನ್ನು ಐಪಿಸಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಜಿಲ್ಲಾ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ನಾಗೀರೆಡ್ಡಿ ಅವರು ಗುರುವಾರ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ 2010ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜೆಡಿಎಸ್ ಪಕ್ಷದ ಕಾರ್ಯಕರ್ತರಾಗಿದ್ದ ಹೊನ್ನಮ್ಮ(45) ಅವರನ್ನು ಕೊಲೆ ಮಾಡಲಾಗಿತ್ತು. ಸುದೀರ್ಘ 14 ವರ್ಷಗಳ ಕಾಲ ವಿಚಾರಣೆ ನಡೆದು, ಗುರುವಾರ ಶಿಕ್ಷೆ ಪ್ರಕಟವಾಗಿದೆ.
ಒಟ್ಟು 27 ಆರೋಪಿಗಳಲ್ಲಿ ಹನುಮಂತಯ್ಯ, ವೆಂಕಟೇಶ್, ರಾಮಯ್ಯ, ದಾಸಪ್ಪ, ಬುಳ್ಳೆ ಹನುಮಂತಯ್ಯ ಸೇರಿ 6 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದಂತೆ ಇಬ್ಬರು ಮಹಿಳೆಯರು ಸೇರಿ 21 ಮಂದಿ ಅಪರಾಧಿಗಳ ಪೈಕಿ 5, 6, 7, 8 ಅಪರಾಧಿಗಳಿಗೆ ಎರಡು ವರ್ಷ ಹಾಗೂ ಉಳಿದ 17 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ 13 ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ವಿಶೇಷ ಸರಕಾರಿ ಅಭಿಯೋಜಕಿ ಬಿ.ಎಸ್. ಜ್ಯೋತಿ ವಾದ ಮಂಡಿಸಿದ್ದರು.

ಶಿಕ್ಷೆಗೊಳಗಾದ ಅಪರಾಧಿಗಳು
ರಂಗನಾಥ, ಮಂಜುಳ, ತಿಮ್ಮರಾಜು, ರಾಜು(ದೇವರಾಜು), ಶ್ರೀನಿವಾಸ್, ಆನಂದ(ಆನಂದಸ್ವಾಮಿ), ವೆಂಕಟಸ್ವಾಮಿ, ವೆಂಕಟೇಶ್, ನಾಗರಾಜು, ರಾಜಪ್ಪ, ಮೀಸೆ ಹನುಮಂತಯ್ಯ, ಗಂಗಾಧರ(ಗಂಗಣ್ಣ), ನಂಜುಂಡಯ್ಯ, ಸತ್ಯಪ್ಪ, ಸತೀಶ, ಚಂದ್ರಶೇಖರ(ಚಂದ್ರಯ್ಯ), ರಂಗಯ್ಯ(ರಾಮಯ್ಯ), ಉಮೇಶ್, ಚನ್ನಮ್ಮ, ಮಂಜಣ್ಣ, ಮಂಜು, ಸ್ವಾಮಿ(ಮೋಹನ್ ಕುಮಾರ್)

ಏನಿದು ಪ್ರಕರಣ?
ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲಪುರದ ಹೊನ್ನಮ್ಮ ಡಾಬಾ ನಡೆಸುತ್ತಿದ್ದು, ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಲು ಮರದ ತುಂಡು ಸಂಗ್ರಹಿಸಿ ಇಟ್ಟಿದ್ದರು. ಮರದ ತುಂಡುಗಳನ್ನು ಗ್ರಾಮದ ಕೆಲವರು ಕಳವು ಮಾಡಿದ್ದರು. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದಾಗಿ ಗ್ರಾಮದ ಜನರು ಹಾಗೂ ಹೊನ್ನಮ್ಮನ ಮಧ್ಯೆ ದ್ವೇಷ ಉಂಟಾಗಿತ್ತು. ಸದಾ ಒಂದಲ್ಲೊಂದು ರೀತಿಯಲ್ಲಿ ಜಗಳ ನಡೆಯುತಿತ್ತು. ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮುಂದುವರಿದಿತ್ತು. ಕೊನೆಗೆ ಹೊನ್ನಮ್ಮ ಅವರನ್ನು 2010 ಜುಲೈ 3ರಂದು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.
ಘಟನೆ ನಡೆದ ಸ್ಥಳಕ್ಕೆ ಆಗಿನ ಜಿಲ್ಲಾಧಿಕಾರಿ ಸೋಮಶೇಖರ್, ಪೊಲೀಸ್ ವರಿಷ್ಠಾಧಿಕಾರಿ ಹರ್ಷ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡಿದ್ದರು.

Exit mobile version