ಕೇಂದ್ರ ಸರ್ಕಾರ ರಾಜ್ಯಗಳಿಗೆ ತೆರಿಗೆ ಪಾಲು ಹಂಚುವುದರಲ್ಲಿ ಕರ್ನಾಟಕಕ್ಕೆ ನ್ಯಾಯವಾದ ಪಾಲು ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದರಲ್ಲಿ ನಿಜಾಂಶವಿದೆ. ರಾಜಕೀಯ ಕಾರಣಗಳಿಗಾಗಿ ಅನುದಾನವನ್ನು ಕಡಿತಗೊಳಿಸುವುದು ಸರಿಯಲ್ಲ. ಕೇಂದ್ರ ಹಣಕಾಸು ಆಯೋಗ ಸ್ವಾಯತ್ತ ಸಂಸ್ಥೆ ಎಲ್ಲ ರಾಜ್ಯಗಳಿಗೆ ನ್ಯಾಯಯುತ ಪಾಲು ಸಿಗುವಂತೆ ನೋಡಿಕೊಳ್ಳಬೇಕು. ಅದಕ್ಕೆ ರಾಜಕೀಯ ಸೋಂಕು ಇರಬಾರದು. ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಮೊದಲನಿಂದಲೂ ಹಣಕಾಸು ವಿಚಾರಕ್ಕೆ ರಾಜಕೀಯ ಬೆರೆಸುವ ಕೆಲಸಮಾಡುತ್ತ ಬಂದಿಲ್ಲ. ಜಿಎಸ್‌ಟಿ ಬಂದಾಗ ಅವರು ಅದನ್ನು ಸ್ವಾಗತಿಸಿದ್ದರು ಎಂಬುದನ್ನು ಮರೆಯಬಾರದು. ಅವರ ಲೆಕ್ಕಾಚಾರ ಇದುವರೆಗೆ ತಪ್ಪಾಗಿಲ್ಲ. ಅಭಿಪ್ರಾಯ ಬೇಧ ಇರಬಹುದು. ಅಂಕಿ ಅಂಶಗಳು ಸುಳ್ಳು ಹೇಳುವುದಿಲ್ಲ. ಇಡೀ ದೇಶವನ್ನು ತೆಗೆದುಕೊಂಡಾಗ ಕರ್ನಾಟಕದಲ್ಲಿ ಶೇ.೫ ರಷ್ಟು ಜನಸಂಖ್ಯೆ ಇದೆ. ಜಿಡಿಪಿಗೆ ಶೇ. ೮.೪ ಕರ್ನಾಟಕದ ಕೊಡುಗೆ. ಜಿಎಸ್‌ಟಿ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ಒಟ್ಟು ಜಿಎಸ್‌ಟಿ ಸಂಗ್ರಹ ಶೇ. ೧೭ರಷ್ಟು ಅಧಿಕಗೊಂಡಿದೆ. ೨೦೧೮-೧೯ ರಲ್ಲಿ ಕೇಂದ್ರದ ಆದಾಯ ೨೪.೪೨ ಲಕ್ಷ ಕೋಟಿ ರೂ. ಆಗಿತ್ತು. ೨೦೨೪-೨೫ಕ್ಕೆ ೪೮.೨೦ ಕೋಟಿ ರೂ. ಆದಾಯವಾಗಿದೆ. ಅಂದರೆ ಕೇಂದ್ರದ ಆದಾಯ ದ್ವಿಗುಣಗೊಂಡಿದೆ. ಕರ್ನಾಟಕಕ್ಕೆ ನೀಡುವ ಅನುದಾನ ಮಾತ್ರ ಅಷ್ಟೇಇದೆ. ೨೦೧೮-೧೦ರಲ್ಲಿ ಕರ್ನಾಟಕಕ್ಕೆ ೪೬,೨೮೮ ಕೋಟಿ ರೂ. ನೀಡಲಾಗುತ್ತಿತ್ತು. ಈಗ ೪೪, ೪೮೫ ಕೋಟಿ ರೂ. ಮತ್ತು ಹೆಚ್ಚುವರಿಯಾಗಿ ೧೫,೨೯೯ ಕೋಟಿ ರೂ. ಅನುದಾನ ನೀಡಲಾಗಿದೆ. ಇದು ೧ ಲಕ್ಷ ಕೋಟಿ ರೂ. ಆಗಬೇಕಿತ್ತು. ಕರ್ನಾಟಕ ಪ್ರತಿ ವರ್ಷ ತೆರಿಗೆ ರೂಪದಲ್ಲಿ ೪.೫ ಲಕ್ಷ ಕೋಟಿ ರೂ. ನೀಡುತ್ತಿದೆ. ಅದಕ್ಕೆ ಪ್ರತಿಯಾಗಿ ಬರುತ್ತಿರುವುದು ೪೫ ಸಾವಿರ ಕೋಟಿ ರೂ. ಮತ್ತು ೧೫ ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ. ನಮ್ಮ ರಾಜ್ಯದಲ್ಲಿ ಕೇಂದ್ರಕ್ಕೆ ೧ ರೂ. ಹೋದರೆ ಕೇವಲ ೧೩ ಪೈಸೆ ಅನುದಾನವಾಗಿದೆ. ಇದಕ್ಕೆ ಪ್ರತಿಯಾಗಿ ಉತ್ತರಪ್ರದೇಶ ೩೧,೦೩೯ ಕೋಟಿ ರೂ. ಬಿಹಾರ ೧೭,೪೦೩ ಕೋಟಿ ರೂ. ಮಧ್ಯಪ್ರದೇಶ ೧೩,೫೮೨ ಕೋಟಿ ರೂ. ರಾಜಾಸ್ತಾನ ೧೦,೪೨೬ ಕೋಟಿ ರೂ. ಅನುದಾನ ಪಡೆಯುತ್ತಿವೆ. ೧೫ನೇ ಹಣಕಾಸು ಆಯೋಗ ಕರ್ನಾಟಕದ ಪಾಲನ್ನು ಶೇ. ೪.೭ ರಿಂದ ಶೇ. ೩.೬ಕ್ಕೆ ಇಳಿಸಿದೆ. ಇದರಿಂದ ರಾಜ್ಯಕ್ಕೆ ೭೯೭೭೦ ಕೋಟಿ ರೂ. ಕಡಿಮೆ ಬಂದಿದೆ. ವಿಶೇಷ ಅನುದಾನವಾಗಿ ೫೪೯೫ ಕೋಟಿ ರೂ. ಬರಬೇಕಿತ್ತು. ಅದೂ ಬಂದಿಲ್ಲ. ಈ ಅಂಕಿಅಂಶಗಳು ತಪ್ಪಿದ್ದರೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕಿತ್ತು. ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದಲ್ಲಿ ರಾಜ್ಯದ ನಿಲುವನ್ನು ಒಪ್ಪಿಕೊಳ್ಳುವುದು ಅನಿವಾರ್ಯ. ಕರ್ನಾಟಕವನ್ನು ಪ್ರತಿನಿಧಿಸುವ ಸಂಸದರಿಗೆ ಉತ್ತರದಾಯಿತ್ವ ಇಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅನುದಾನ ನೀಡಿಕೆಯಲ್ಲಿ ದೋಷವಿದ್ದರೆ ಅದನ್ನು ಕೇಂದ್ರದ ಗಮನಕ್ಕೆ ತಂದು ಸರಿಪಡಿಸುವಂತೆ ಒತ್ತಾಯಿಸುವುದು ಸಂಸದರ ಕರ್ತವ್ಯ. ಜನರಲ್ಲಿ ದೇಶಾಭಿಮಾನ ಮೂಡಬೇಕು ಎಂದರೆ ಆರ್ಥಿಕ ಸಂಪನ್ಮೂಲದ ಹಂಚಿಕೆ ಸಮಾನವಾಗಿರಬೇಕು. ಅದಕ್ಕೂ ರಾಜಕೀಯ ಹಿತಾಸಕ್ತಿಗಳನ್ನು ಬೆರೆಸಬಾರದು. ಹಣಕಾಸು ಆಯೋಗ ಸಂವಿಧಾನದ ವಿಧಿ ೨೮೦ ರಂತೆ ರಾಜ್ಯಗಳಿಗೆ ಅನುದಾನ ಹಂಚಿಕೆ ಮಾಡುವ ಅಧಿಕಾರ ಪಡೆದುಕೊಂಡಿದೆ. ಇದನ್ನು ಮೂರು ರೀತಿಯಲ್ಲಿ ರಾಜ್ಯಗಳಿಗೆ ನೀಡಲಾಗುವುದು. ಕೇಂದ್ರೀಯ ಯೋಜನೆಗಳಿಗೆ ನೇರ ನೆರವು ಬರುತ್ತದೆ. ಕೇಂದ್ರವೇ ಕೈಗೊಳ್ಳುವ ಯೋಜನೆಗಳಿಗೆ ಹಣ ನೀಡುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕ ನಿಯಮಗಳೂ ಪಾಲನೆಯಾಗಬೇಕು. ಆದರೆ ಆಯಾ ರಾಜ್ಯದ ಆರ್ಥಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬರಬಾರದು. ಚುನಾವಣೆಯಲ್ಲಿ ಯಾವ ಪಕ್ಷ ಆಡಳಿತಕ್ಕೆ ಬರಬೇಕೆಂಬುದನ್ನು ಆಯಾ ರಾಜ್ಯದ ಜನಸಾಮಾನ್ಯರು ತೀರ್ಮಾನಿಸುತ್ತಾರೆ. ಅದರಲ್ಲಿ ವಿವೇಚನಾ ಅಧಿಕಾರ ಇಲ್ಲ. ಒಂದು ವೇಳೆ ಬದಲಿಸಬೇಕು ಎಂದರೆ ಆಯಾ ರಾಜ್ಯಗಳ ಅಭಿಪ್ರಾಯ ಪಡೆಯಬೇಕು. ಜಿಎಸ್‌ಟಿ ಪದ್ಧತಿ ಜಾರಿಗೆ ಬಂದ ಮೇಲೆ ಎಲ್ಲ ರಾಜ್ಯಗಳಿಂದ ಕೇಂದ್ರಕ್ಕೆ ಬರುವ ಅಧಿಕಗೊಂಡಿದೆ. ಅದಕ್ಕೆ ತಕ್ಕಂತೆ ರಾಜ್ಯದ ಪಾಲು ಅಧಿಕಗೊಳ್ಳಬೇಕು. ಈ ವಿಷಯದಲ್ಲಿ ಕೇಂದ್ರ ಮೀನಮೇಷ ಎಣಿಸುವುದು ಸರಿಯಲ್ಲ.