Home ತಾಜಾ ಸುದ್ದಿ ಡಿಕೆಶಿ ಕ್ಷಮೆ ಕೇಳಲು 24ರವರೆಗೆ ಗಡುವು

ಡಿಕೆಶಿ ಕ್ಷಮೆ ಕೇಳಲು 24ರವರೆಗೆ ಗಡುವು

0

ಮಂಡ್ಯ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಜಿಲ್ಲೆಯ ಜನರನ್ನು ಛತ್ರಿಗಳು ಎಂದು ಸಂಬೋಧಿಸಿದ್ದು, ಜಿಲ್ಲೆಯ ಜನತೆಗೆ ನೋವುಂಟು ಮಾಡಿದೆ. ಡಿ.ಕೆ. ಶಿವಕುಮಾರ್ ಅವರು ಮಾರ್ಚ್ ೨೪ರ ಸೋಮವಾರ ಸಂಜೆಯೊಳಗೆ ಜಿಲ್ಲೆಯ ಜನತೆಯ ಕ್ಷಮೆ ಕೇಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಏಕೀಕರಣ ಸಮಿತಿಯ ಸದಸ್ಯ ಇಂಡುವಾಳು ಚಂದ್ರಶೇಖರ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾತಂತ್ರ‍್ಯ ಪೂರ್ವದಿಂದಲೂ ಜಿಲ್ಲೆಯ ಜನರು ಸ್ವಾತಂತ್ರ‍್ಯ ಚಳುವಳಿಯಲ್ಲಿ ಭಾಗವಹಿಸುವುದರ ಜೊತೆಗೆ ಪ್ರಮುಖ ನೀರಾವರಿ ಚಳುವಳಿಗಳಲ್ಲಿ ಹಾಗೆಯೇ ರಾಷ್ಟ್ರ ರಾಜಕಾರಣದಲ್ಲೂ ಭಾಗವಹಿಸಿ ಹೆಸರು ಮಾಡಿದ್ದಾರೆ. ಜಿಲ್ಲೆಯ ಜನತೆಯ ಬಗ್ಗೆ ಬೇರೆ ಜಿಲ್ಲೆಯ ಜನಕ್ಕೂ ಗೌರವ ಇದೆ. ಇಂತಹ ಜಿಲ್ಲೆಯ ಜನಗಳನ್ನು ಛತ್ರಿಗಳು ಎಂದಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಜಿಲ್ಲೆಯನ್ನು ಪ್ರತಿನಿಧಿಸುವ ಕಾಂಗ್ರೆಸ್ ಎಂಎಲ್‌ಎ ಮತ್ತು ಎಂಎಲ್‌ಸಿಗಳು ಈ ಬಗ್ಗೆ ಒಂದು ಮಾತನ್ನು ಆಡದಿರುವುದು ವಿಪರ್ಯಾಸ. ಶಿವಕುಮಾರ ಅವರಿಗೆ ಈ ಬಗ್ಗೆ ತಿಳಿಸಿ ಸ್ಪಷ್ಟನೆ ನೀಡುವ ಕೆಲಸವನ್ನು ಸಹ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರದೇ ಛತ್ರಿ ಬುದ್ಧಿ ಎಂಬುದು ಸಾಬೀತಾಗಿದೆ. ಸೋಮವಾರದೊಳಗೆ ಕ್ಷಮೆ ಕೇಳದಿದ್ದರೆ ಜಿಲ್ಲೆಗೆ ಬಂದರೆ ಕಪ್ಪು ಬಾವುಟ ಪ್ರದರ್ಶಿಸಿ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಸಿದರು.
25ರಂದು ಛತ್ರಿ ಮೆರವಣಿಗೆ:
24ರ ಸೋಮವಾರ ಸಂಜೆಯೊಳಗೆ ಕ್ಷಮಾಪಣೆ ಕೇಳದಿದ್ದರೆ ಮಾರ್ಚ್ 25ರ ಮಂಗಳವಾರ ಬೆಳಿಗ್ಗೆ 10ಗಂಟೆಗೆ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಸಂಜಯ ಸರ್ಕಲ್‌ವರೆಗೆ ಛತ್ರಿಗಳನ್ನು ಹಿಡಿದು ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು, ರೈತರು, ಸಂಘ-ಸಂಸ್ಥೆಗಳ ಮುಖಂಡರು ಛತ್ರಿಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಮತ್ತೋರ್ವ ಸದಸ್ಯ ಶಂಭೂನಹಳ್ಳಿ ಸುರೇಶ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಪೆನ್ನು ಪೇಪರ್ ಕೊಡಿ ಎಂದು ಕೇಳಿದ್ದಕ್ಕೆ ಜಿಲ್ಲೆಯ ಜನ ಆರು ಜನ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಅದಕ್ಕೋಸ್ಕರ ಈಗ ಈ ರೀತಿಯ ಗೇಲಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಇವರ ಚರಿತ್ರೆ ಏನು ಎಂಬುದು ರಾಜ್ಯದ ಜನಕ್ಕೆ ಗೊತ್ತಿದೆ. ಇವರಿಗೆ ಬುದ್ಧಿ ಕಲಿಸುವ ಕಾಲ ಬರುತ್ತದೆ ಎಂದರು.

Exit mobile version