ಶಿವಮೊಗ್ಗ: ಇತ್ತೀಚೆಗೆ ರಾಜ್ಯದ ವಿವಿಧ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿರುವ ಪ್ರಕರಣಗಳನ್ನು ಶ್ರೀ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳು ಖಂಡಿಸಿದ್ದು, ಈ ಘಟನೆಗಳು ತಮಗೆ ತೀವ್ರ ಆಘಾತವನ್ನುಂಟು ಮಾಡಿವೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸೋಮವಾರ ಹೇಳಿಕೆ ನೀಡಿರುವ ಅವರು, ಭಾರತ ಹಲವು ಭಿನ್ನ ಭಿನ್ನ ಸಂಸ್ಕೃತಿಗಳನ್ನು ಭಾವೈಕ್ಯದಿಂದ ಒಗ್ಗೂಡಿಸಿಕೊಂಡು ಬಂದಿರುವ ರಾಷ್ಟ್ರ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜಕೀಯ ಲಾಭಕ್ಕಾಗಿ ಜಾತಿ ಮತ್ತು ಕೋಮು ಪ್ರಚೋದನೆ ಮಾಡುತ್ತಾ ವಿದ್ಯಾರ್ಥಿಗಳ ಬದುಕನ್ನು ಹಾಳು ಮಾಡುವ ಕೃತ್ಯಗಳು ನಡೆಯುತ್ತಿವೆ. ಇಲ್ಲಿ ಎಲ್ಲ ಜಾತಿಗೂ ಅದರದೇ ಆದ ವೈಶಿಷ್ಟ್ಯ-ಸಂಸ್ಕೃತಿ, ಸಂಸ್ಕಾರ ಇರುತ್ತದೆ. ಜನಿವಾರ-ಶಿವದಾರಗಳು ಕೇವಲ ಜಾತಿಯ ಸಂಕೇತಗಳಲ್ಲ. ಅವರ ಇಡೀ ಬದುಕು. ಜಾತ್ಯತೀತತೆಯ ಹೆಸರಿನಲ್ಲಿ ಯಾವುದೇ ಜಾತಿ-ಧರ್ಮದ ಅವಹೇಳನ, ತಿರಸ್ಕಾರ ಸರಿಯಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ.
ಇಂತಹ ಕೃತ್ಯಗಳು ಮುಂದೆ ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಶ್ರೀಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.