Home ತಾಜಾ ಸುದ್ದಿ ಚುನಾವಣಾ ಬಾಂಡ್ ರದ್ದು

ಚುನಾವಣಾ ಬಾಂಡ್ ರದ್ದು

0

ನವದೆಹಲಿ: ರಾಜಕೀಯ ಪಕ್ಷಗಳಿಗೆ ನಿಧಿ ನೀಡುವ ಚುನಾವಣಾ ಬಾಂಡ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸುಪ್ರೀಂ ಕೋರ್ಟ್ ನಿಷೇಧಿಸಿ, ಗುರುವಾರ ಮಹತ್ವದ ತೀರ್ಪು ನೀಡಿದೆ.
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಮುಂಚಿತವಾಗಿ ಬಹು ನಿರೀಕ್ಷಿತ ತೀರ್ಪು ಹೊರಬಿದ್ದಿದ್ದು, ಅನಾಮಧೇಯ ಚುನಾವಣಾ ಬಾಂಡ್‌ಗಳ ಯೋಜನೆ ಅಸಂವಿಧಾನಿಕ ಎಂದು ಸಾರಿದೆ. ಕಪ್ಪು ಹಣ ನಿಯಂತ್ರಣಕ್ಕೆ ಚುನಾವಣಾ ಬಾಂಡ್ ಯೋಜನೆ ಅತ್ಯುತ್ತಮ ಎಂದು ಸರ್ಕಾರ ಹೇಳಿಕೊಂಡಿತ್ತು. ಆದರೆ ಅದಕ್ಕೆ ಬೇರೆ ವಿಧಾನಗಳಿವೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ಈ ಕುರಿತ ಮಾಹಿತಿಯನ್ನು ಮಾಹಿತಿ ಹಕ್ಕಿನ ಕಾಯ್ದೆಯಿಂದ ಹೊರಗೆ ಇಟ್ಟಿರುವುದು ಅಸಮರ್ಥನೀಯ ಎಂದು ಅಭಿಪ್ರಾಯಪಟ್ಟಿದೆ.
ಚುನಾವಣಾ ಬಾಂಡ್‌ಗಳ ಯೋಜನೆಯ ಕಾನೂನು ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆ.ಬಿ.ಪರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಪೀಠ ಸಂವಿಧಾನಪೀಠ ಈ ತೀರ್ಪು ನೀಡಿದೆ. ೨೦೧೭ರಿಂದ ೨೨ರವರೆಗೆ ಜನರು ೧೬,೪೩೭.೬೩ ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದು, ಈ ಪೈಕಿ ಶೇ.೬೦ರಷ್ಟು ಬಿಜೆಪಿ ಖಾತೆಗೆ ಜಮಾ ಆಗಿದೆ.

ಆರ್ಡರ್… ಆರ್ಡರ್… ಕೋರ್ಟ್ ಹೇಳಿದ್ದು
೧ ಚುನಾವಣಾ ಬಾಂಡ್ ವಿತರಿಸುವುದನ್ನು ಬ್ಯಾಂಕ್‌ಗಳು ಈ ಕೂಡಲೇ ನಿಲ್ಲಿಸಬೇಕು.
೨ಚುನಾವಣಾ ಬಾಂಡ್ ಖರೀದಿ ಕುರಿತ ಮಧ್ಯಂತರ ತೀರ್ಪು ಹೊರಬಿದ್ದ ನಂತರ(ಏಪ್ರಿಲ್ ೧೨, ೨೦೦೯ರಿಂದ) ಇಲ್ಲಿಯವರೆಗೆ ಬಾಂಡ್‌ಗಳ ಕುರಿತು ವಿವರವನ್ನು ಚುನಾವಣಾ ಆಯೋಗಕ್ಕೆ ಎಸ್‌ಬಿಐ ನೀಡಬೇಕು.
೩ ಯಾವ ಪಕ್ಷ ಎಷ್ಟು ನಿಧಿ ಪಡೆದುಕೊಂಡಿದೆ ಎನ್ನುವ ಮಾಹಿತಿ ಒದಗಿಸಬೇಕು.
೪ ಮೂರು ವಾರಗಳೊಳಗೆ, ಅಂದರೆ ಮಾರ್ಚ್ ೬ರ ಒಳಗೆ ಆಯೋಗಕ್ಕೆ ಎಸ್‌ಬಿಐ ಮಾಹಿತಿ ಒದಗಿಸಬೇಕು.
೫ ಅನಾಮಧೇಯ ಚುನಾವಣಾ ಬಾಂಡ್‌ಗಳು ಮಾಹಿತಿ ಹಕ್ಕಿನ ೧೯(೧)ನೇ ಪರಿಚ್ಛೇದದ ಉಲ್ಲಂಘನೆಯಾಗುತ್ತದೆ.
೬ ಐಟಿ ಕಾಯ್ದೆ ಮತ್ತು ಜನಪ್ರತಿನಿಧಿಗಳ ಕಾಯ್ದೆಗೆ ತಂದಿರುವ ತಿದ್ದುಪಡಿ ಅಸಾಂವಿಧಾನಿಕ.
೭ ರಾಜಕೀಯ ಪಕ್ಷಗಳಿಗೆ ಹಣಕಾಸು ನೆರವು ನೀಡುವುದು, ಪರಸ್ಪರ ಪ್ರತಿಫಲಾಪೇಕ್ಷೆಯ ವ್ಯವಸ್ಥೆಗೆ ದಾರಿ ಮಾಡಿಕೊಡುತ್ತದೆ.

Exit mobile version