ಕಾರವಾರ: ಧಾರ್ಮಿಕ ಮಠಗಳು ದೇಶದ ಪರಂಪರೆ ಮತ್ತು ಆಧುನಿಕತೆಯ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಶಿಸಿದರು.
ಪರ್ತಗಾಳಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷಾಚರಣೆ ನಿಮಿತ್ತ ಶುಕ್ರವಾರ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ 77 ಅಡಿ ಎತ್ತರದ ರಾಮನ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಿದರು. ಅಲ್ಲದೆ, ಮಠದ 550ನೇ ವರ್ಷದ ಅಂಗವಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ನಾಣ್ಯ ಮತ್ತು ಅಂಚೆ ಚೀಟಿಯನ್ನು ಲೋಕಾರ್ಪಣೆ ಮಾಡಿದರು.
ಜ್ಞಾನ, ಪ್ರೇರಣೆ, ಸಾಧನೆಯ ಕೇಂದ್ರವಾಗಿ ಮಠ: “ಪರ್ತಗಾಳಿ ಮಠದ ಇತಿಹಾಸವು ಅತ್ಯಂತ ಕಠಿಣ ಸಂದರ್ಭಗಳಲ್ಲೂ ಸಮಾಜವನ್ನು ಮುನ್ನಡೆಸಿಕೊಂಡು ಬಂದಿದೆ. ಇಲ್ಲಿ ಉದ್ಘಾಟನೆಯಾದ ರಾಮನ ಪ್ರತಿಮೆ, ಥೀಮ್ ಪಾರ್ಕ್ ಮತ್ತು ತ್ರಿಡಿ ಚಿತ್ರವು ಮಠಕ್ಕೆ ಹೊಸ ಆಯಾಮ ನೀಡಿದೆ. ಇದು ಬರುವ ಪೀಳಿಗೆಗೆ ಜ್ಞಾನ, ಪ್ರೇರಣೆ ಮತ್ತು ಸಾಧನೆಗೆ ಸ್ಥಾಯಿ ಕೇಂದ್ರವಾಗಿ ಬೆಳೆಯಲಿ” ಎಂದು ಮೋದಿ ಹಾರೈಸಿದರು.
ಸವಾಲುಗಳ ನಡುವೆಯೂ ಮಠವು ತನ್ನ ದಿಕ್ಕು ಮತ್ತು ಉದ್ದೇಶವನ್ನು ಬಿಡಲಿಲ್ಲ, ಬದಲಾಗಿ ಜನರಿಗೆ ದಾರಿದೀಪವಾಯಿತು ಎಂದು ಪ್ರಧಾನಿ ಶ್ಲಾಘಿಸಿದರು. ಮಠದ ಉದ್ದೇಶವು ಸೇವೆಯೊಂದಿಗೆ ಸಾಧನೆಯನ್ನು ಮತ್ತು ಲೋಕ ಕಲ್ಯಾಣದೊಂದಿಗೆ ಪರಂಪರೆಯನ್ನು ಜೋಡಿಸುವುದಾಗಿದೆ ಎಂದರು.
ವಿಕಸಿತ ಭಾರತಕ್ಕೆ ಪ್ರಧಾನಿ ನೀಡಿದ 9 ಸಂಕಲ್ಪಗಳು: ಪ್ರಧಾನಿ ಮೋದಿ ಅವರು 2047ರ ‘ವಿಕಸಿತ ಭಾರತ’ದ ಸಂಕಲ್ಪ ಯಶಸ್ವಿಗೊಳಿಸಲು ದೇಶದ ಜನತೆಗೆ ಜಲ ಸಂರಕ್ಷಣೆ, ಗಿಡಗಳನ್ನು ಬೆಳೆಸುವುದು, ಸ್ವಚ್ಛತೆ, ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡುವುದು, ದೇಶದ ವಿವಿಧೆಡೆ ಪ್ರವಾಸ ಮಾಡಿ, ಅದರ ಮಹತ್ವ ಅರಿಯುವುದು, ಪ್ರಾಕೃತಿಕ ಕೃಷಿಗೆ ಉತ್ತೇಜನ, ಶ್ರೀ ಅನ್ನ (ಮಿಲೆಟ್) ಬಳಸುವುದು ಮತ್ತು ಎಣ್ಣೆ ಬಳಕೆಯನ್ನು ಶೇ. 10ರಷ್ಟು ಕಡಿಮೆ ಮಾಡುವುದು, ಆರೋಗ್ಯಕರ ಜೀವನಶೈಲಿಗೆ ಒತ್ತು ಹಾಗೂ ಒಂದು ಬಡ ಕುಟುಂಬವನ್ನು ದತ್ತು ತೆಗೆದುಕೊಂಡು ಸಹಾಯ ಮಾಡುವುದು ಹೀಗೆ ಒಂಬತ್ತು ಸಂಕಲ್ಪಗಳನ್ನು ಕೈಗೊಳ್ಳಲು ಕರೆ ನೀಡಿದರು.
ಪರಂಪರೆಯ ಪುನರುಜ್ಜೀವನ ಮತ್ತು ಮಠದ ಕೊಡುಗೆ: “ಇಂದು ನಮ್ಮ ದೇಶ ಹೊಸ ಸಾಂಸ್ಕೃತಿಕ ಮತ್ತು ಪಾರಂಪರಿಕ ಕಾರ್ಯಗಳ ಪುನರುಜ್ಜೀವನದ ಮೂಲಕ ಮುನ್ನಡೆಯುತ್ತಿದೆ. ಕಾಶಿ ವಿಶ್ವನಾಥ, ಉಜ್ಜಯನಿಯಲ್ಲಿ ಮಹಾಕಾಲ್ ಮಂದಿರ ಅಭಿವೃದ್ಧಿಯಾಗುತ್ತಿವೆ. ರಾಮಾಯಣ ಮತ್ತು ಮಹಾಭಾರತ ಸರ್ಕೀಟ್‌ಗಳ ನಿರ್ಮಾಣ ಕಾರ್ಯ ಸಾಗುತ್ತಿದೆ” ಎಂದು ಮೋದಿ ಹೇಳಿದರು.
ಪರ್ತಗಾಳಿ ಮಠದ ಸೇವೆಯನ್ನು ಸ್ಮರಿಸಿದ ಅವರು, ಕಷ್ಟದ ಪರಿಸ್ಥಿತಿಗಳಲ್ಲಿ ಗೋವಾ ಜನರು ಬೇರೆಡೆ ಹೋಗಬೇಕಾದಾಗ ಮಠವು ಸಮುದಾಯಕ್ಕೆ ಬೆಂಬಲ ನೀಡಿತ್ತು. ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ ಸೌಲಭ್ಯ ಒದಗಿಸುವ ಮೂಲಕ ಮಾನವತೆ ಮತ್ತು ಸಂಸ್ಕೃತಿಯ ರಕ್ಷಣೆಯನ್ನು ಮಠ ಮಾಡಿದೆ ಎಂದು ಶ್ಲಾಘಿಸಿದರು.
ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಮಾತನಾಡಿ, “ಮೋದಿ ಅವರ ಸಾಧನೆಯ ಹಿಂದೆ ಅವರ ತಾಯಿ ಹೀರಾಬೆನ್ ಮೋದಿಜಿ ಅವರಿದ್ದಾರೆ. ಅವರು ಧರ್ಮಪುತ್ರನನ್ನು ನೀಡಿದ್ದಾರೆ. ವಿಕಸಿತ ಭಾರತಕ್ಕಾಗಿ 2047ರ ವರೆಗೆ ದೇಶದ ಜನರೆಲ್ಲ ಏಕಾದಶಿ ಉಪವಾಸ ಮಾಡಬೇಕು” ಎಂದರು.
ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಮಾತನಾಡಿ, “ಪರ್ತಗಾಳಿ ಮಠವು ದೇಶದ ಪ್ರಮುಖ ಪ್ರವಾಸೋದ್ಯಮ ತಾಣವಾಗಲಿದೆ. ಇದು ಗೋವಾ ಸರ್ಕಾರದ ‘ಆಧ್ಯಾತ್ಮಿಕ ಪ್ರವಾಸೋದ್ಯಮ’ಕ್ಕೆ ನಾಂದಿ ಹಾಡಿದೆ. ಗೋವಾ ಸನಾತನ ಸಂಸ್ಕೃತಿಯನ್ನು ಉಳಿಸುವಲ್ಲಿ ಮಠದ ಕೊಡುಗೆ ದೊಡ್ಡದು.” ಎಂದರು.
