Home ಅಂಕಣ ಗ್ಯಾರಂಟಿ ಯೋಜನೆ-ಪರಿಷ್ಕರಣೆಗೆ ಇದು ಸಕಾಲ

ಗ್ಯಾರಂಟಿ ಯೋಜನೆ-ಪರಿಷ್ಕರಣೆಗೆ ಇದು ಸಕಾಲ

0

ನನಗೂ ಫ್ರೀ... ನಿನಗೂ ಫ್ರೀ... ಮಹದೇವಪ್ಪ ನಿನಗೂ ಫ್ರೀ... ಕಾಕಾ ಪಾಟೀಲ ನಿಮ್ಮ ಕುಟುಂಬಕ್ಕೂ ಫ್ರೀ...' ಸಿಎಂ ಸಿದ್ದರಾಮಯ್ಯ ಎರಡು ವರ್ಷಗಳ ಹಿಂದೆ ಚುನಾವಣಾ ಬಹಿರಂಗ ಪ್ರಚಾರದಲ್ಲಿ ಈ ಮಾತನ್ನು ಘಂಟಾಘೋಷವಾಗಿ ಹೇಳಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಭರವಸೆ ಕೊಟ್ಟಂತೆ ಸರ್ಕಾರ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿತು. ಚುನಾವಣೆಯಲ್ಲಿ ಮತದಾರರ ಆಕರ್ಷಣೆಗೆ ಗ್ಯಾರಂಟಿ ಘೋಷಣೆ ಮಾಡಿದ್ದು ಕಾಂಗ್ರೆಸ್‌ಗೆ ಲಾಭವಾದೀತು ಎಂಬುದು ಲೆಕ್ಕಾಚಾರವಾಗಿತ್ತು. ಅದರ ಲಾಭವೂ ಆಗಿ ೧೩೫ ಸೀಟುಗಳು ಭರ್ಜರಿ ಜಯ ಲಭಿಸಿತು. ಅಲ್ಲಿಂದ ಇಲ್ಲಿಯವರೆಗೆ ರಾಜ್ಯದ ಕೋಟ್ಯಂತರ ಮಹಿಳೆಯರು ಬಸ್‌ನಲ್ಲಿ ಫ್ರೀಯಾಗಿ ಅಡ್ಡಾಡ್ಡಿದ್ದಾರೆ. ಒಂದೂವರೆ ಕೋಟಿ ಮನೆಗಳ ವಿದ್ಯುತ್ ಬಿಲ್‌ಅನ್ನು ಸರ್ಕಾರ ಭರಿಸಿದೆ. ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ಮಾಸಿಕ ಹಣ (ಗೃಹಲಕ್ಷ್ಮೀ) ಜಮೆಯಾಗುತ್ತಿದೆ. ಹಾಗೇ ಅಕ್ಕಿ, ಪಡಿತರ ಉಚಿತವಾಗಿ ಪೂರೈಕೆಯಾಗುತ್ತಿದೆ ಅಥವಾ ನಗದು ಹಣವನ್ನು ಜಮಾ ಮಾಡಲಾಗಿದೆ. ವ್ಯತ್ಯಾಸ ಸಹಜ. ಇಷ್ಟೊಂದು ಪ್ರಮಾಣದಲ್ಲಿ ಇಷ್ಟು ಫ್ರೀ ಬಟವಡೆ, ಸರ್ಕಾರವೇ ಘೋಷಿಸಿದಂತೆ ಸುಮಾರು ೫೫ ಸಾವಿರ ಕೋಟಿ ರೂಪಾಯಿ ವಾರ್ಷಿಕ ಹಣ ವ್ಯಯವಾಗುತ್ತಿದೆ. ಪ್ರಸ್ತುತ ಬಜೆಟ್‌ನಲ್ಲಿ ೫೩,೫೦೦ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಸ್ಕೀಂಗಳ ಅನುಷ್ಠಾನಕ್ಕೆ ತೆಗೆದಿರಿಸಿದೆ. ಈ ಗ್ಯಾರಂಟಿ ಯೋಜನೆ ಆರಂಭವಾಗಿನಿಂದ ಒಂದಿಲ್ಲೊಂದು ತೊಡಕು ಎದುರಾಗುತ್ತಲೇ ಇದ್ದು, ಸರ್ಕಾರವೂ ಕಾರಣವನ್ನು ನೀಡುತ್ತ ಬಂದಿದೆ. ಸರ್ಕಾರಿ ಸಂಸ್ಥೆಗಳಾದ ಸಾರಿಗೆ ನಿಗಮ, ವಿದ್ಯುತ್ ನಿಗಮಗಳು ಬಡವಾಗಿವೆ. ಗೃಹಲಕ್ಷ್ಮೀ ಅನುಷ್ಠಾನದಿಂದ ಸಚಿವೆ ಲಕ್ಷ್ಮೀ ಹೈರಾಣಾಗಿದ್ದಾರೆ.ಎಲ್ಲಮ್ಮ ಎರಡು ಸಾವಿರ ರೂಪಾಯಿ’ಎಂದು ಮಹಿಳೆಯರು ಕೇಳುವಂತಾಗಿದೆ.
ಒಂದು ಯೋಜನೆ ಅನುಷ್ಠಾನಗೊಂಡು ಎರಡು ವರ್ಷ ಆದಾಗ ಅದರ ಮೌಲ್ಯಮಾಪನ ಅಗತ್ಯ. ಈಗ ಗ್ಯಾರಂಟಿ ಯೋಜನೆಗಳಿಗೆ ಎರಡು ವರ್ಷ. ಇದು ಪರಿಷ್ಕರಣೆಯ, ಪರಾಂಬರ್ಶೆಯ ಕಾಲ ಅನಿಸುತ್ತಿದೆ.
ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡಾಗ ಕೆಲವರು ಪ್ರಶ್ನಿಸಿದ್ದರು. ಆರ್ಥಿಕವಾಗಿ ಸಬಲರಾದವರಿಗೂ ಈ ಫ್ರೀ ಯೋಜನೆಗಳು ಅಗತ್ಯವೇ ಎಂದು? ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ಭವ್ಯ ಬಂಗಲೆಗೂ, ಆರ್ಥಿಕವಾಗಿ ಬಲಾಢ್ಯರಿಗೂ ೨೦೦ ಯೂನಿಟ್ ವಿದ್ಯುತ್ ಫ್ರೀ, ಮಿತಿಯೊಳಗೆ ಬಳಕೆ ಮಾಡುತ್ತಿದ್ದರೆ ಅವರೂ ಬಿಲ್ ಕಟ್ಟಬೇಕಾಗಿಲ್ಲ ಎಂಬುದು ಸರ್ಕಾರದ ನಿಲುವಾಗಿತ್ತು. ಈಗ ಷರತ್ತುಗಳ ಮಾತು ಕೇಳಿ ಬರುತ್ತಿದೆ. ಹೀಗಾಗಿ, ಮೊದಲು ಕೊಟ್ಟಿದ್ದೀರಿ. ಈಗೇಕೆ ಷರತ್ತುಗಳನ್ನು ವಿಧಿಸಬೇಕು ಎಂಬುದು ವಿಪಕ್ಷದವರ ವಾದ. ಫ್ರೀ ಗ್ಯಾರಂಟಿ ಘೋಷಿಸುವಾಗ ಷರತ್ತುಗಳು ನೆನಪಾಗಲಿಲ್ಲ. ಅಧಿಕಾರಕ್ಕೆ ಬಂದರೆ ತಾನೇ ಎನ್ನುವುದಿತ್ತು. ಈಗ ಗ್ಯಾರಂಟಿಗಳೇ ಅಧಿಕಾರಕ್ಕೆ ತಂದಿವೆ ಎಂದು ಹೇಳಿ ಅನುಷ್ಠಾನ ಮಾಡಬೇಕಾಯಿತು. ಈಗ ಷರತ್ತುಗಳು ನೆನಪಾಗುತ್ತಿವೆ. ಇದು ಪ್ರತಿಪಕ್ಷದ ಟೀಕೆ.
ಎರಡು ವರ್ಷ ರಾಜ್ಯದಲ್ಲಿ ಗ್ಯಾರಂಟಿಗಳೇ ಆಳಿದವು. ಸುದ್ದಿಯಾಯಿತು. ಬೇಕು ಬೇಡಗಳ ಚರ್ಚೆಗಳು ನಡೆದವು. ಟೀಕಿಸುವವರು ಸವಾಲು ಎದುರಿಸಿದರು. ಸವಾಲು ಹಾಕಿದವರು ವಿಲವಿಲ ನಲುಗಿದರು.
ಗ್ಯಾರಂಟಿ ನಿಲ್ಲಿಸಿ ಎಂದು ಯಾವೊಬ್ಬರೂ ಹೇಳಲಿಲ್ಲ. ಯಾರೂ ಬೆಂಬಲಿಸಲೂ ಇಲ್ಲ. ಹಾಗಂತ ಈ ಗ್ಯಾರಂಟಿ ಯೋಜನೆ ಇಡೀ ರಾಜ್ಯದ ಆರ್ಥಿಕ ಸ್ಥಿತಿಯನ್ನೇ ಹದಗೆಡಿಸಿಬಿಟ್ಟಿದೆ ಎಂದು ಸಿದ್ದರಾಮಯ್ಯನವರ ಆಪ್ತರಾದಿಯಾಗಿ ಎಲ್ಲರೂ ಹೇಳುತ್ತಲೇ ಇದ್ದಾರೆ. ಖಾಸಗಿಯಾಗಿ! ಇತ್ತೀಚೆಗೆ ಉಡುಪಿಗೆ ಹೋಗಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕೂಡ, ಗ್ಯಾರಂಟಿ ಯೋಜನೆಯನ್ನು ಟೀಕಿಸುತ್ತೀರಲ್ಲ, ದಕ್ಷಿಣ ಕನ್ನಡ ಉಡುಪಿಯಲ್ಲಿ ಗ್ಯಾರಂಟಿ ನೋಡಿ ಕಾಂಗ್ರೆಸ್‌ಅನ್ನು ಆಯ್ಕೆ ಮಾಡಿಲ್ಲ. ಬಿಜೆಪಿ ಶಾಸಕರು ಹೇಳಲಿ, ಗ್ಯಾರಂಟಿ ಬೇಡ ಎಂದು' ಎಂಬುದಾಗಿ ಪ್ರತಿಸವಾಲು ಹಾಕಿದರು. ಇದು ಹಲವು ವಿಧದಲ್ಲಿ ಅರ್ಥಪೂರ್ಣ ಮಾತಾಗಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ಹಿಂದಿನ ಭಾವವೂ ಅರ್ಥವಾಗುವಂತಿತ್ತು. ಏನೇ ಇರಲಿ. ಗ್ಯಾರಂಟಿ ಯೋಜನೆ ಜನರ ಕೈಯಲ್ಲಿ ಹಣ ಓಡಾಡುವಂತೆ ಮಾಡಿದೆ. ಖರೀದಿ ಸಾಮರ್ಥ್ಯ ಹೆಚ್ಚಿಸಿದೆ. ಬಡ ಜನರಲ್ಲಿ ಉಳಿತಾಯ ಪ್ರವೃತ್ತಿ ಬೆಳೆಸಿದೆ. ಹಾಗೆಯೇ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ಯಾವುದೇ ಭ್ರಷ್ಟಾಚಾರ ಇಲ್ಲದೇ, ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮೀ ಯೋಜನೆಗಳ ಮೂಲಕ ನೇರವಾಗಿ ಫಲಾನುಭವಿಗಳ ಕೈ ತಲುಪುತ್ತಿವೆ ಈ ಯೋಜನೆಗಳು. ಇದಕ್ಕಾಗಿಯೇ ಅಲ್ಲವೇ ಕರ್ನಾಟಕದ ಗ್ಯಾರಂಟಿ ಟೀಕಿಸಿದ್ದ ಬಿಜೆಪಿ ನಾಯಕರು, ಘಟಾನುಘಟಿಗಳೆಲ್ಲ ಇವೇ ಫ್ರೀಬಿಯನ್ನು ಇಂಡಿಯಾ ಒಕ್ಕೂಟಕ್ಕಿಂತ ಮೊದಲೇ ಬೇರೆ ರಾಜ್ಯಗಳಲ್ಲಿ ಘೋಷಿಸಿಕೊಂಡರಲ್ಲ. ಅಲ್ಲೂ ಯಾವುದೇ ಷರತ್ತುಗಳಿಲ್ಲ. ಈಗಂತೂ ಬಹುತೇಕ ಇಡೀ ದೇಶವೇ ಪ್ರೀಬಿಯಲ್ಲಿದೆ ! ಫ್ರೀಬಿ ವಿರೋಧಿಸಿ ಹಲವು ಆರ್ಥಿಕ ತಜ್ಞರು, ಉದ್ಯಮಿಗಳು, ಸಾಮಾಜಿಕ ಚಿಂತಕರೂ ಕೂಡ ವಿಶ್ಲೇಷಿಸಿದ್ದರು. ಜನರ ಕೈಗೆ ದುಡಿಮೆ ನೀಡಿ, ಹೆಚ್ಚು ಉತ್ಪಾದನೆಯಾಗಲೀ ಎಂಬುದು ಅವರ ಆಶಯ. ಆದರೆ ಆ ರೀತಿಯ ಯೋಜನೆಗಳು ಬೇಕಲ್ಲ? ಫ್ರೀಬಿ ಬಂದ ನಂತರ ಗ್ರಾಮಾಂತರ ಪ್ರದೇಶಗಳಲ್ಲಿ ಕೆಲಸಕ್ಕೆ ಜನ ಬರುತ್ತಿಲ್ಲ. ಉತ್ಪಾದನಾ ಚಟುವಟಿಕೆ, ಯೋಜನೆಗಳಿಲ್ಲ ಎಂಬುದು ಒಂದಾದರೆ, ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡವು. ಅನುದಾನವೇ ಇಲ್ಲದಾಗಿದೆ. ಎರಡು ವರ್ಷಗಳ ಗ್ಯಾರಂಟಿ ಸ್ಕೀಂಗೆ ಸರ್ಕಾರ ಈಗ ಪರಿಷ್ಕರಣೆಯ ಚಿಂತನೆ ನಡೆಸಿದೆ. ಎಲ್ಲ ಕುಟುಂಬದ ಎಲ್ಲ ಮಹಿಳೆಯರಿಗೆ ಗೃಹಲಕ್ಷ್ಮೀ ಬೇಕಾಗಿಲ್ಲ. ೬೦ ದಾಟಿದ ಹಿರಿಯ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಮಾತ್ರ ಬಸ್ ಪ್ರಯಾಣ ಫ್ರೀ. ಬಿಪಿಎಲ್ ಕಾರ್ಡ್ದಾರರಿಗೆ ಮಾತ್ರ ಉಚಿತ ಆಹಾರ ಪಡಿತರ. ಇದೇ ರೀತಿ ಗೃಹಜ್ಯೋತಿ ಕೂಡ. ಹೀಗೆ ಪರಿಷ್ಕರಿಸುವುದು ಅಭಿವೃದ್ಧಿ ಮತ್ತು ಪ್ರಗತಿಶೀಲ ದೃಷ್ಟಿಯಿಂದ ಉತ್ತಮವೇನೋ. ಸಮ್ಮತವೂ ಹೌದೇನೋ... ಏಕೆಂದರೆ ಮೂಲಭೂತ ಸೌಕರ್ಯಗಳು, ಕಾಮಗಾರಿಗಳು, ವಿಶೇಷವಾಗಿ ರಸ್ತೆ, ನೀರು, ಉದ್ಯಮ, ಮನೆ ಇತ್ಯಾದಿ ಕೆಲಸಗಳ ನಿರ್ವಹಣೆಯೇ ನಡೆಯುತ್ತಿಲ್ಲ. ಇಡೀ ರಾಜ್ಯದಲ್ಲಿ ಹೊಂಡ ತಗ್ಗುಗಳ, ಅರ್ಧಂಬರ್ಧ ನಿಂತಿರುವ ಕಾಮಗಾರಿಗಳ ದೃಶ್ಯ ಕಾಣುತ್ತದೆ. ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳದ ಅಪೂರ್ಣ ಸ್ಥಿತಿಯಲ್ಲಿದ್ದರೆ, ಯೋಜನೆಗಾಗಿ ಮನೆ ತೆರವು ಮಾಡಿದವರು ಈಗ ಪರಿಹಾರಕ್ಕಾಗಿ ಗೋಳಾಡುತ್ತಿದ್ದಾರೆ. ಈ ಮಧ್ಯೆ ಕೇಂದ್ರ-ರಾಜ್ಯ ಸರ್ಕಾರಗಳ ನಡುವಿನ ತೆರಿಗೆ ಸಂಘರ್ಷ. ಇನ್ನೊಂದು ಸಲಹೆ ಬಂತು.ಯರ‍್ಯಾರು ಅನುಕೂಲಸ್ಥರಿದ್ದೀರೋ ಅವರು ಈ ಫ್ರೀಬಿಗಳನ್ನು ಬಿಟ್ಟುಕೊಡಿ’ ಎಂದು. ಬಹುಶಃ ಕೆಲವು ಸಾವಿರ ಸಂಖ್ಯೆಯಲ್ಲಿ, ಅದೂ ತಾಂತ್ರಿಕ ಕಾರಣದಿಂದಾಗಿ ಕೆಲ ಜನ ಫ್ರೀಬಿಯಿಂದ ಹೊರ ಬಂದರಾದರೂ, ಅವರಾಗಿಯೇ ಖುಷಿಯಿಂದ ಇವನ್ನು ಬಿಟ್ಟುಕೊಡಲಿಲ್ಲ. ಸರ್ಕಾರಿ, ಬ್ಯಾಂಕು ನೌಕರರು, ಉದ್ಯಮ ಕ್ಷೇತ್ರದವರು, ಆದಾಯ ತೆರಿಗೆ ಪಾವತಿದಾರರು, ಕೋಟ್ಯಧೀಶರು ಎಲ್ಲರೂ ಒಂದಿಲ್ಲೊಂದು ಕಾರಣದಿಂದ ಫ್ರೀಬಿ ಪಡೆಯುವುದು, ಕೊಡುವುದು ಅಗತ್ಯವಿದೆಯೇ?
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್. ವಿ. ದೇಶಪಾಂಡೆ, ಈ ಉಚಿತ ಕೊಡುಗೆ, ಗ್ಯಾರಂಟಿ ಒಳಿತಲ್ಲ.. ಅನುತ್ಪಾದಕ ವೆಚ್ಚ ಹೆಚ್ಚಾಯಿತು. ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ’ ಎಂದು ಆಡಳಿತ ಪಕ್ಷದ ಹಿರಿಯ ನಾಯಕರೇ ಅಸಮಾಧಾನ ತೋಡಿಕೊಂಡರು. ಇದು ಅವರದೊಬ್ಬರದ್ದಷ್ಟೇ ಅಲ್ಲ.. ಸಾಮಾಜಿಕ ಸ್ವಾಸ್ಥ್ಯ, ಅಭಿವೃದ್ಧಿಯ ಚಿಂತಕರು, ಯೋಜಕರು ಮನದಿಂಗಿತ ಕೂಡ.
ಎರಡು ವರ್ಷದ ಗ್ಯಾರಂಟಿಗೆ ಈಗ ಪರಾಮರ್ಶೆಯ ಕಾಲ ಎನಿಸುತ್ತದೆ. ಪಡೆಯುವುದು ಸುಲಭ. ಬಿಟ್ಟುಕೊಡುವುದು ಕಷ್ಟ. ಕೊಡುವುದು ದಾನ ಎಂದು ಸರ್ಕಾರ ತಿಳಿದು ಘೋಷಿಸಿದ್ದೇ ತಪ್ಪು. ಜನ ಕೂಡ ತಮ್ಮ ಅಗತ್ಯತೆ ಯೋಗ್ಯತೆಯನ್ನು ಪರಾಮರ್ಶಿಸಿಕೊಳ್ಳುವ ವ್ಯವಧಾನಕ್ಕೆ ಇಳಿಯುತ್ತಿಲ್ಲ. ಅಂತಹ ದೊಡ್ಡತನ ಕಾಣುತ್ತಿಲ್ಲ. ಯಾವುದೇ ಸರ್ಕಾರಿ ಕಚೇರಿ, ಪಂಚಾಯತ್‌ಗಳು, ಸರ್ಕಾರಿ ಸಂಸ್ಥೆಗಳು ಹಣ ಇಲ್ಲದೇ ಬಿಕೋ ಎನ್ನುತ್ತಿವೆ. ಬಹುತೇಕ ಗ್ರಾಮ ಪಂಚಾಯ್ತಿಗಳು ವಿದ್ಯುತ್ ಬಿಲ್ ತುಂಬಲು ಹಣ
ಇಲ್ಲದೇ ಪರದಾಡುತ್ತಿವೆ. ಒಂದು ವರ್ಷದಲ್ಲಿ ೫೫ ಸಾವಿರ ಕೋಟಿ ಈ ಕಾರ್ಯಕ್ರಮಕ್ಕೆ ವಿನಿಯೋಗ ಆದರೆ ಆರ್ಥಿಕ ಶಿಸ್ತು ಹಳಿ ತಪ್ಪದೇ ಇದ್ದೀತೆ? ಸಿದ್ದರಾಮಯ್ಯ ಈ ರಾಜ್ಯದ ಅತ್ಯಂತ ಚಾಣಾಕ್ಷ ಹಣಕಾಸು ಮಂತ್ರಿ ಎಂದು ಪ್ರಸಿದ್ಧಿ ಪಡೆದವರು. ಅವರಿಗೂ ಅನುಷ್ಠಾನಗೊಳಿಸುವುದು ಸವಾಲೇ ಸರಿ. ಆದರೆ ಕೊಟ್ಟಿದ್ದನ್ನು ಹಿಂಪಡೆಯಲು ಕಷ್ಟಪಡಬೇಕಲ್ಲ!?
ಏನೇ ಇರಲಿ. ದಾನ, ತ್ಯಾಗ ಎಲ್ಲವೂ ಅತ್ಯಂತ ದೊಡ್ಡ ಪದಗಳು. ಆದರೆ ಇವುಗಳ ಉಳಿಕೆ ಹಾಗೂ ಪಡೆದವರ ಘನತೆ, ಯೋಗ್ಯತೆ ಫ್ರೀಬಿಗಳಿಗೆ ಮಾನದಂಡವಾಗಬೇಕು. ಹಾಗಾಗಿ ಗ್ಯಾರಂಟಿ ಪರಿಷ್ಕರಣೆಗೆ ಇದು ಸಕಾಲವೇನೋ? ಅಲ್ಲವೇ?

Exit mobile version