ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಮ್ | ಸಂತಃ ಪರಿಕ್ಷ್ಯ ಅನ್ಯತರತ್ ಭಜಯೋ ಮೂಢಃ ಪರಪ್ರತ್ಯಯನೇಯ ಬುದ್ಧಿಃ ||
ಎಂಬುದಾಗಿ ಪ್ರಸಿದ್ಧ ಸುಭಾಷಿತವಿದೆ. ಪುರಾಣ ಮತ್ತು ಕಾವ್ಯಗಳಲ್ಲಿ ಯಾವುದು ಶ್ರೇಷ್ಠ ? ಎಂಬುದು ಇಲ್ಲಿ ಜಿಜ್ಞಾಸೆ. ಪುರಾಣವು ಪ್ರಾಚೀನವಾದದ್ದು, ಕಾವ್ಯವು ಇತ್ತೀಚಿನದ್ದು.(ಅರ್ವಾಚೀನವಾದದ್ದು.) ಹಳೆಯದೇ ಶ್ರೇಷ್ಠವಲ್ಲವೇ ? ಆದ್ದರಿಂದ ಪುರಾಣ ಶ್ರೇಷ್ಠ ಎಂಬುದಾಗಿ ಕೆಲವರು ಹೇಳುತ್ತಾರೆ. ಆದರೆ ಈ ವಾದ ಸರಿಯಲ್ಲ ಎನ್ನುತ್ತಿದೆ ಈ ಸುಭಾಷಿತ. ಪ್ರಾಚೀನವಾದದ್ದು ಎಂಬ ಒಂದೇ ಕಾರಣಕ್ಕೆ ಯಾವುದೂ ಶ್ರೇಷ್ಠವಾಗುವುದಿಲ್ಲ. ಶ್ರೇಷ್ಠತೆಯ ಮಾನದಂಡವೇ ಬೇರೆ. ಅದರಲ್ಲಿರುವ ಗುಣಗಳು ಶ್ರೇಷ್ಠತೆಯ ಮಾನದಂಡ, ವಸ್ತುನಿಷ್ಠವಾದ ನಿರೂಪಣೆ, ಜೀವನಕ್ಕೆ ಬೇಕಾದ ಮೌಲ್ಯಗಳ ಬೋಧನೆ ಮುಂತಾದ ಗುಣಗಳು ಯಾವುದರಲ್ಲಿ ಅಧಿಕವಾಗುವುದಿಯೋ ಅದು ಶ್ರೇಷ್ಠ. ಅಂತಹ ಶ್ರೆಷ್ಠತೆ ಅರ್ವಾಚೀನವಾದ ಕಾವ್ಯಗಳಲ್ಲಿಯೂ ಇರಲು ಸಾಧ್ಯವಿದೆ, ಅನೇಕ ಕಡೆ ಇದೆ. ಪುರಾಣಗಳಿಗೆ ಶ್ರೇಷ್ಠತ್ವ ಬಂದಿದ್ದಾದರೂ ಇಂತಹ ಗುಣಗಳಿಂದಲೇ.
ಜ್ಞಾನಿಗಳು ಗುಣಗಳ ಮೂಲಕವೇ ಶ್ರೇಷ್ಠತೆಯನ್ನು ಕಂಡುಕೊಳ್ಳುತ್ತಾರೆ. ಶ್ರೇಷ್ಠತೆಯನ್ನು ಪರೀಕ್ಷಿಸಿ ತಿಳಿದುಕೊಳ್ಳುವ ಸಾಮರ್ಥ್ಯ ಅವರಿಗಿರುತ್ತದೆ. ಮೂಢರಿಗೆ ಈ ಸಾಮರ್ಥ್ಯವಿರುವುದಿಲ್ಲ. ಅವರು ಇನ್ನೊಬ್ಬರನ್ನು ಹೇಳಿದ್ದನ್ನು ಅವಲಂಬಿಸಿ ಶ್ರೇಷ್ಠತೆಯ ನಿರ್ಣಯ ಮಾಡಿಕೊಳ್ಳಲು ಮುಂದಾಗುತ್ತಾರೆ. ಬಹುತೇಕ ಆ ನಿರ್ಣಯ ತಪ್ಪಾಗಿರುತ್ತದೆ.
ವಸ್ತುತಃ ಪುರಾಣಗಳೂ ಮತ್ತು ಕಾವ್ಯಗಳೂ ಒಂದೇ ವಿಷಯವನ್ನು ಹೇಳುವ ಉದ್ದೇಶದಿಂದ ಬಂದಿವೆ. ಪುರಾಣಗಳು ಮಿತ್ರ ಸಮ್ಮಿತ ಎಂದು ಕರೆದರೆ ಕಾವ್ಯಗಳನ್ನು ಕಾಂತಾ ಸಮ್ಮಿತ ಎಂದು ಕರೆಯುತ್ತಾರೆ. ಪುರಾಣಗಳು ಮಿತ್ರನಂತೆ ಹಿತವನ್ನು ಬೋಧಿಸಿದರೆ ಕಾವ್ಯಗಳು ಕಾಂತೆಯಂತೆ ಹಿತವನ್ನು ತಿಳಿಸಿಕೊಡುತ್ತವೆ. ಬದುಕಿಗೆ ಬೇಕಾಗುವ ಹಿತವನ್ನು ತಿಳಿಸಿಕೊಡುವುದೇ ಈ ಎರಡೂ ಗ್ರಂಥಗಳ ಉದ್ದೇಶವಾಗಿದೆ. ಅರ್ವಾಚೀನ ಕಾಲದಲ್ಲಿ ಉತ್ತಮ ಗುಣಗಳುಳ್ಳ ಗ್ರಂಥಗಳು ಬರಬಹುದು. ಗುಣಗಳೇ ಶ್ರೇಷ್ಠತೆಯ ಮಾನದಂಡ. ಉತ್ತಮ ಗುಣಗಳು ಎಲ್ಲಿಂದ ಬಂದರೂ ಯಾವ ಕಾಲಘಟ್ಟದಲ್ಲಿ ಬಂದರೂ ಗ್ರಾಹ್ಯ.
`ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ’