ಬಾಗಲಕೋಟೆ: ಕಾಂಗ್ರೆಸ್ ಪಕ್ಷದಲ್ಲಿ ಜಾತಿ ವಿಷಬೀಜ ಸಿಕ್ಕಾಪಟ್ಟೆಯಿದ್ದು, ಮಹಾತ್ಮಗಾಂಧೀಜಿ ಅವರು ಬದುಕಿದ್ದರೆ ಆ ಪಕ್ಷದ ಸ್ಥಿತಿ ಕಂಡು ನೇಣಿಗೆ ಶರಣಾಗುತ್ತಿದ್ದರು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವ್ಯಾಖ್ಯಾನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮಟ್ಟಿಗಿನ ಜಾತಿವಾದ ಪಕ್ಷಕ್ಕೆ ಒಳ್ಳೆದಲ್ಲ. ಡಿ.ಕೆ.ಶಿವಕುಮಾರ ಅವರು ನಾನು ಒಬ್ಬಂಟಿಯಾಗಿರುತ್ತೇನೆ. ಕಾರ್ಯಕರ್ತರು, ಶಾಸಕರ ಬಳಿ ಹೋಗುವುದಿಲ್ಲ ಎಂದಿದ್ದಾರೆ. ಅದು ಗಂಟಲು ಮೇಲಿನ ಮಾತಾಗಬಾರದು. ಒಕ್ಕಲಿಗ ಶಾಶಕರು ಎಸ್.ಎಂ. ಕೃಷ್ಣ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎನ್ನುತ್ತಿದ್ದಾರೆ. ದಲಿತರು, ಹಿಂದುಳಿದವರು ನಾವೆಲ್ಲ ಒಟ್ಟಿಗೆ ಸೇರಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಜಾತಿಯ ಮುಖಾಂತರ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತೇವೆ ಎನ್ನುವುದೇ ರಾಜ್ಯಕ್ಕೆ ಅನ್ಯಾಯ ಮಾಡಿದಂತೆ ಎಂದು ಅಸಮಾಧಾನ ಹೊರಹಾಕಿದರು.
ಎಂ.ಬಿ. ಪಾಟೀಲ ನಾನು ಸಿಎಂ ಆಗಬೇಕು ಎನ್ನುತ್ತಾರೆ. ಪರಮೇಶ್ವರ ತಾವು ಮುಖ್ಯಮಂತ್ರಿ ಆಗಬೇಕು ಅಂತಿದ್ದಾರೆ. ಸತೀಶ್ ಜಾರಕಿಹೊಳಿ ನಾನು ಸಿಎಂ ಆಗಬೇಕು ಎನ್ನುತ್ತಾರೆ. ಯಾರಾದರೂ ಆಗಲಿ, ೧೪೦ ಜನ ಶಾಸಕರ ಬಹುಮತ ಇದೆ. ನಿಮಗೆ ಬೇಡ ಎಂದವರು ಯಾರು? ಆದರೆ, ಇಷ್ಟೊಂದು ಗುಂಪುಗಾರಿಕೆ ಮಾಡಿ, ಅದು ಜಾತಿವಾದಿ ಮುಖಾಂತರ ಸಿಎಂ ಆಯ್ಕೆ ಅನ್ಯಾಯ ಎಂದು ವಿಶ್ಲೇಷಿಸಿದ ಅವರು, ಇವತ್ತು ಏನಾದರೂ ಮಹಾತ್ಮಾ ಗಾಂಧೀಜಿ ಬದುಕಿದ್ದು, ಕಾಂಗ್ರೆಸ್ ಪಕ್ಷದ ಸ್ಥಿತಿ ನೋಡಿದ್ದರೆ ಅವರೇ ನೇಣು ಹಾಕಿಕೊಳ್ಳುತ್ತಿದ್ದರೇನೋ? ಇಷ್ಟೊಂದು ಜಾತಿವಾದ ಪಕ್ಷಕ್ಕೆ ಒಳ್ಳೆಯದಲ್ಲ ಎಂದರು.