ಬೆಂಗಳೂರು: ಕೋವಿಡ್ ಕಾಲದಲ್ಲಿ ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ. ಅಕ್ರಮ ಆರೋಪವನ್ನು ರಾಜಕೀಯ ಮತ್ತು ಕಾನೂನಾತ್ಮಕವಾಗಿ ಎದುರಿಸುತ್ತೇನೆ ಎಂದು ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್ ಹಗರಣಗಳ ಆರೋಪ ಸಂಬಂಧ ನಿವೃತ್ತ ನ್ಯಾ.ಜಾನ್ ಮೈಕೆಲ್ ಡಿ ಕುನ್ಹಾ ನೇತೃತ್ವದ ಆಯೋಗದಿಂದ ಮಧ್ಯಂತರ ವರದಿಯನ್ನು ಸರ್ಕಾರ ಪಡೆದಿದೆ. ಎಲ್ಲ ಸೇರಿ ಗುಣಾಕಾರ, ಭಾಗಾಕಾರ ಎಲ್ಲ ಮಾಡಿದ್ದಾರೆ. ನಾನು ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ರಚನೆ ಮಾಡಲಾಗಿತ್ತು. ಯಾವುದೇ ತೀರ್ಮಾನವಿದ್ದರೂ ಅದರ ಮೂಲಕವೇ ತೆಗೆದುಕೊಳ್ಳುತ್ತಿದ್ದೆವು ಎಂದರು.
ಟಾಸ್ಕ್ಫೋರ್ಸ್ನಲ್ಲಿ ಹಿರಿಯ ಅಧಿಕಾರಿಗಳು, ತಜ್ಞರು ಇದ್ದರು. ಆಗ ವೈದ್ಯಕೀಯ ತುರ್ತು ಪರಿಸ್ಥಿತಿ ಇತ್ತು. ಈಗ ಇವರು ಇವತ್ತಿನ ದರ ಆಧರಿಸಿ ಲೆಕ್ಕ ಹಾಕಿದ್ದಾರಂತೆ. ವರದಿ ಬಗ್ಗೆ ಸರ್ಕಾರದ ಹೇಳಿಕೆ ಬರಲಿ, ಊಹಾಪೋಹಗಳಿಗೆ ನಾನು ಉತ್ತರ ಕೊಡಲ್ಲ. ಈಗ ವರದಿಯಲ್ಲಿ ಅಕ್ರಮ ನಡೆದಿರುವ ಮಾಹಿತಿ ಇದೆ ಅಂತಿದ್ದಾರೆ. ವರದಿಯನ್ನು ಬಹಿರಂಗಪಡಿಸಿದ್ದಾರೆಯೇ, ವರದಿ ಯಾರು ಓದಿದ್ದಾರೆ, ನಾನು ಅಧಿಕೃತ ವರದಿ ನೋಡುವವರೆಗೂ ಮಾತಾಡಲ್ಲ ಎಂದರು.