Home News ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರ ಇನ್ನೂ ಕಾಣದ ಪರಿಹಾರ

ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರ ಇನ್ನೂ ಕಾಣದ ಪರಿಹಾರ

ಕರ್ನಾಟಕ ಲೋಕಸೇವಾ ಆಯೋಗ ಎಂದ ಕೂಡಲೇ ನೆನಪಿಗೆ ಬರುವುದು ಭ್ರಷ್ಟಾಚಾರ. ಅಡಿಯಿಂದ ಮುಡಿಯವರೆಗೆ ಲಂಚಾವತಾರ ತುಂಬಿ ಹೋಗಿದೆ. ಇದು ಶಾಸನಬದ್ಧವಾಗಿ ರಚನೆಗೊಂಡಿರುವ ಸಂಸ್ಥೆ. ಎಲ್ಲ ರಾಜ್ಯಗಳಲ್ಲೂ ಈ ಸಂಸ್ಥೆ ಇದೆ. ಕೇಂದ್ರದಲ್ಲಿ ಯುಪಿಎಸ್‌ಸಿ ಇದೆ. ಯಾವುದೇ ಸರ್ಕಾರ ಬರಲಿ ಈ ಆಯೋಗಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಹೊಂದಿದೆ. ಸರ್ಕಾರ ನೀಡಿದ ಪಟ್ಟಿಯನ್ನು ಅನುಸರಿಸಿ ರಾಜ್ಯಪಾಲರು ಅವರಿಗೆ ಪ್ರಮಾಣವಚನ ಬೋಧಿಸುತ್ತಾರೆ. ಜನಪ್ರತಿನಿಧಿಗಳೇ ನೇಮಿಸಿದ ಅಧ್ಯಕ್ಷರು ಮತ್ತು ಸದಸ್ಯರು ಭ್ರಷ್ಟಾಚಾರದಲ್ಲಿ ಮುಳುಗಿ ತೇಲುತ್ತಿದ್ದಾರೆ. ಪ್ರತಿ ನೇಮಕಾತಿಗೂ ನಡೆಸುವ ಲಿಖಿತ ಪರೀಕ್ಷೆಗಳು ಹಗರಣಗಳಿಗೆ ಕಾರಣವಾಗಿವೆ. ಈ ಸಂಸ್ಥೆಯ ಅಧ್ಯಕ್ಷರು ಮತ್ತು ಸದಸ್ಯರು ಜೈಲಿಗೂ ಹೋಗಿದ್ದಾರೆ. ಇಲ್ಲಿ ನಡೆದಿರುವಷ್ಟು ಭ್ರಷ್ಟಾಚಾರದ ಹಗರಣಗಳು ಬೇರೆ ಯಾವ ಸಂಸ್ಥೆಯಲ್ಲೂ ಸಿಗುವುದಿಲ್ಲ. ಇತ್ತೀಚೆಗೆ ವಿಧಾನಮಂಡಲದಲ್ಲಿ ಚರ್ಚೆ ಏನೋ ನಡೆಯಿತು. ಆಡಳಿತ ಮತ್ತು ಪ್ರತಿಪಕ್ಷದವರು ಕೆಪಿಎಸ್‌ಸಿ ಎಲ್ಲವೂ ಸರಿಯಿಲ್ಲ ಎಂದು ಹೇಳಿದರೆ ಹೊರತು ಇದಕ್ಕೆ ಪರಿಹಾರ ಏನು ಎಂಬುದನ್ನು ಸೂಚಿಸಿಲ್ಲ. ತಾವೇ ಸೃಷ್ಟಿಸಿದ ಸಂಸ್ಥೆ ತಮ್ಮ ಕೈಮೀರಿ ಹೋಗುತ್ತಿದೆ ಎಂಬ ಜನಪ್ರತಿನಿಧಿಗಳಲ್ಲಿ ಮೂಡಿದ್ದರೆ ಆಶ್ಚರ್ಯವೇನೂ ಇಲ್ಲ. ಕನ್ನಡಿಗರು, ಬಡವರು ಇಲ್ಲಿಂದ ಉದ್ಯೋಗ ಪಡೆಯುವುದು ಅಸಾಧ್ಯ ಎಂಬ ಹಂತ ತಲುಪಿದೆ. ಪ್ರತಿಭೆ ಎಂದರೆ ಇಲ್ಲಿ ಕಾಲಿಗೆ ಸಿಗುವ ಕಸ. ೧೯೯೮ ರಿಂದ ಹಿಡಿದು ೨೦೨೨ರವರೆಗೆ ಹಲವು ಅಕ್ರಮಗಳ ಸರಮಾಲೆಯೇ ನಡೆದಿದೆ. ಸಿಐಡಿ ಪೊಲೀಸರಿಗಂತೂ ತನಿಖೆ ನಡೆಸುವುದೇ ದೊಡ್ಡ ಕೆಲಸ. ಐಎಎಸ್ ಅಧಿಕಾರಿಯಿಂದ ಹಿಡಿದು ಡಿ ದರ್ಜೆ ನೌಕರರವರೆಗೆ ಎಲ್ಲರ ಮೇಲೂ ಆರೋಪ ಕೇಳಿ ಬಂದಿರುವುದು ಇಲ್ಲಿ ಮಾತ್ರ ಎಂದು ಹೇಳಬಹುದು. ಈ ಸಂಸ್ಥೆ ಇರುವ ಉದ್ಯೋಗಸೌಧದ ಕಂಬಕಂಬಗಳು ಲಂಚವನ್ನು ಬೇಡುತ್ತವೆ. ಇಂಥ ಸಂಸ್ಥೆಯನ್ನು ಇಟ್ಟುಕೊಳ್ಳಬೇಕೆ? ಇದನ್ನು ಮುಚ್ಚಲು ಬರುವುದಿಲ್ಲವೆ? ಇದಕ್ಕೆ ಪರ್ಯಾಯವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ತಹಸೀಲ್ದಾರ್‌ನಿಂದ ಹಿಡಿದು ಉಪವಿಭಾಗಾಧಿಕಾರಿವರೆಗೆ ಎಲ್ಲ ಹುದ್ದೆಗಳೂ ಹರಾಜಿನಲ್ಲಿ ಲಭ್ಯ. ಯಾರು ಎಷ್ಟು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಈ ಹುದ್ದೆಗಳು ಲಭ್ಯ. ಈ ರೀತಿ ೭೫ ಲಕ್ಷದಿಂದ ಕೋಟಿ ರೂ.ವರೆಗೆ ಲಂಚ ಕೊಟ್ಟು ಹುದ್ದೆಗೆ ಬಂದವರು ಮೊದಲ ದಿನದಿಂದಲೇ ಲಂಚ ಹೊಡೆಯಬೇಕು. ಈ ರೀತಿ ಲಂಚ ಹೊಡೆಯಲು ಹೋಗಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದವರೂ ಇದ್ದಾರೆ. ಕೆಪಿಎಸ್‌ಸಿ ಪರಿಸ್ಥಿತಿ ನೋಡಿದರೆ ಕರ್ನಾಟಕದಲ್ಲಿ ಪ್ರಾಮಾಣಿಕರು ಇಲ್ಲವೇನೋ ಎಂಬ ಅನುಮಾನ ಬರುವುದು ಸಹಜ. ಪ್ರತಿ ಪತ್ರಿಕೆ ಸೋರಿಕೆಯಲ್ಲಿ ಕೋಟ್ಯಂತರ ಅವ್ಯವಹಾರ. ಎಲ್ಲ ಹಗರಣದಲ್ಲಿ ಕಾಣದ ಕೈಗಳು ರಾಜಕಾರಣಿಗಳದು ಎಂಬುದರಲ್ಲಿ ಸಂದೇಹವಿಲ್ಲ. ಇದಕ್ಕೆ ಅಧಿಕಾರಿಗಳು ಕೈಜೋಡಿಸಿರುವುದು ಸ್ಪಷ್ಟ. ಸಿಐಡಿ ತನಿಖೆ ವರದಿಗಳು ಈ ಹಗರಣಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿವೆ. ಆದರೂ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ. ಇದಕ್ಕೆ ಪ್ರಮುಖ ಕಾರಣ ಭ್ರಷ್ಟಾಚಾರದ ಬೇರುಗಳು ಕೆಪಿಎಸ್‌ಸಿಯಿಂದ ವಿಧಾನಸೌಧದವರೆಗೆ ಬಂದಿರುವುದು ನಿಜ. ಹೀಗಾಗಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪರಿಸ್ಥಿತಿ. ಅಭ್ಯರ್ಥಿಗಳು ಬರೆಯುವ ಲಿಖಿತ ಪರೀಕ್ಷೆಯ ಒಎಂಆರ್ ಶೀಟ್‌ಗಳಲ್ಲಿ ಭ್ರಷ್ಟಾಚಾರದ ವಾಸನೆ ಕಂಡುಬರುತ್ತದೆ. ಇದೆಲ್ಲವನ್ನೂ ನಿಲ್ಲಿಸಬೇಕು ಎಂದು ಮನಸ್ಸು ಮಾಡಿದರೆ ತಡೆಯುವುದು ಕಷ್ಟವೇನಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಇದಕ್ಕಿಂತ ಬೃಹತ್ ಪ್ರಮಾಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತವೆ. ಈಗಲೂ ಐಎಎಸ್, ಐಪಿಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಸುಲಭವಲ್ಲ. ಕೆಎಎಸ್ ಮಾತ್ರ ಅಂಥ ಘನತೆ ಗೌರವ ಪಡೆದುಕೊಂಡಿಲ್ಲ. ಇತ್ತೀಚಿನ ತನಿಖಾ ವರದಿಗಳ ಪ್ರಕಾರ ಶೇ. ೧೫ರಷ್ಟು ಅಭ್ಯರ್ಥಿಗಳು ಲಂಚ ಕೊಟ್ಟಿದ್ದಾರೆ ಎಂದ ಮೇಲೆ ಈ ಪರೀಕ್ಷೆಗೆ ಬೆಲೆ ಎಲ್ಲಿದೆ? ಇಂಥ ಅಪಖ್ಯಾತಿಗೆ ಒಳಗಾಗಿರುವ ಸಂಸ್ಥೆಯಿಂದ ಆಯ್ಕೆಗೊಂಡ ಅಭ್ಯರ್ಥಿಗಳು ಯಾವ ನೈತಿಕ ಬಲದ ಮೇಲೆ ಸರ್ಕಾರಿ ಕೆಲಸ ಮಾಡಲು ಸಾಧ್ಯ? ಅವರು ಎಷ್ಟೇ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೂ ಜನ ಅವರನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಹೋಗುತ್ತದೆ. ಕೆಪಿಎಸ್‌ಸಿಗೆ ಅಂಟಿಕೊಂಡಿರುವುದು ಭ್ರಷ್ಟಾಚಾರದ ಕ್ಯಾನ್ಸರ್. ಅದಕ್ಕೆ ಸರ್ಜರಿ ಬೇಕೊ, ಕೆಮೊಥೆರಪಿ ಬೇಕೋ ಎಂಬುದನ್ನು ಸರ್ಕಾರ ತೀರ್ಮಾನಿಸಬೇಕು. ಇಷ್ಟಾದರೂ ಈ ಸಂಸ್ಥೆಯ ಆರೋಗ್ಯ ಉಳಿಯುತ್ತದೆಯೇ ಇಲ್ಲವೆ ಇದ್ದೂ ಇಲ್ಲದಂತೆ ಆಗುತ್ತದೆಯೇ ಎಂಬುದನ್ನು ಸರ್ಕಾರವೇ ತೀರ್ಮಾನಿಸಬೇಕು. ಈಗಲೇ ಸರ್ಕಾರಿ ನೌಕರಿಯಿಂದ ಪ್ರತಿಭಾವಂತರು ವಿಮುಖರಾಗುತ್ತಿದ್ದಾರೆ. ದಕ್ಷತೆ ಕುಸಿಯುತ್ತಿದೆ. ನಿರುದ್ಯೋಗ ಅಧಿಕಗೊಂಡಿದೆ. ೨.೭೬ ಲಕ್ಷ ಹುದ್ದೆಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಬಿದ್ದಿವೆ ಎಂಬುದು ಏನನ್ನು ಸೂಚಿಸುತ್ತದೆ ಎಂಬುದನ್ನು ಯಾರು ಹೇಳಬೇಕು? ಸರ್ಕಾರದ ಕಾರ್ಯಕ್ರಮಗಳ ಮೇಲೆ ಬಡವರು ತಮ್ಮ ಜೀವಮಾನವಿಡೀ ಅವಲಂಬಿಸಿರುತ್ತಾರೆ. ಅವರಿಗೆ ಈ ಲಂಚಾವತಾರ ಪೆಡಂಭೂತವಾಗಿ ಕಾಡುವುದರಲ್ಲಿ ಸಂದೇಹವಿಲ್ಲ. ಶ್ರೀಮಂತರಿಗೆ ಭ್ರಷ್ಟಾಚಾರ ಸುಪ್ಪತ್ತಿಗೆ ಇದ್ದಂತೆ. ಅವರ ಕೆಲಸಗಳು ಸುಲಭವಾಗಿ ನಡೆದು ಹೋಗುತ್ತದೆ. ಬಡವರು ತಮ್ಮ ಕೆಲಸಕ್ಕಾಗಿ ಅದೆಷ್ಟು ಚಪ್ಪಲಿಗಳನ್ನು ಸವೆಸಬೇಕೋ ತಿಳಿಯದು. ಕಚೇರಿಯ ಕಂಬದಿಂದ ಕಂಬಕ್ಕೆ ಅಲೆಯುವುದು ಇನ್ನೂ ನಿಂತಿಲ್ಲ.

Exit mobile version