Home ತಾಜಾ ಸುದ್ದಿ ಕಾರ್ಮೋಡ ಸೃಷ್ಟಿಸಿದ ಖಾಲಿ ಸರ್ಕಾರ

ಕಾರ್ಮೋಡ ಸೃಷ್ಟಿಸಿದ ಖಾಲಿ ಸರ್ಕಾರ

0

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮತಬ್ಯಾಂಕ್ ಆಧಾರಿತ ಯೋಜನೆಗಳನ್ನು ಜಾರಿಗೊಳಿಸಲು ತನ್ನ ಬೊಕ್ಕಸ ಬರಿದು ಮಾಡಿಕೊಂಡಿದ್ದು ಅಭಿವೃದ್ಧಿಕಾರ್ಯಗಳನ್ನು ಮೂಲೆಗೆ ಸರಿಸಿದೆ, ಜತೆಗೇ ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣೆ ಎದರಿಸಲು ಅಕ್ರಮ ಮಾರ್ಗದಲ್ಲಿ ಸರ್ಕಾರಿ ನಿಗಮಗಳ ಹಣ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣವೂ ವಾಲ್ಮೀಕಿ ನಿಗಮದ ಮೂಲಕ ಬೆಳಕಿಗೆ ಬಂದಿದ್ದು ಜಗಜ್ಜಾಹೀರಾಗಿತ್ತು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸದ್ಯ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಸಮುದಾಯಗಳ ನಿಯಮಗಳಿಗೆ ಹಂಚಿಕೆ ಮಾಡಲಾಗಿದ್ದ ಅನುದಾನಗಳನ್ನು ಕಡಿತ ಗೊಳಿಸುವ ಮೂಲಕ ಶೋಷಿತ ಸಮುದಾಯಗಳಿಗೆ ದ್ರೋಹ ಬಗೆದಿದೆ. ಡಾ| ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಸೇರಿದಂತೆ ಇತರ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಹಂಚಿಕೆ ಮಾಡಿದ್ದರಲ್ಲಿ ಶೇ.25 ರಷ್ಟನ್ನೂ ಬಿಡುಗಡೆ ಮಾಡಿಲ್ಲ.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸರ್ವವರ್ಗಗಳ ವಿಕಾಸದ ಹಾದಿಯಲ್ಲಿ ಹಿಂದುಳಿದ ಹಾಗೂ ಪರಿಶಿಷ್ಟ ಸಮುದಾಯಗಳು ಆರ್ಥಿಕವಾಗಿ, ಔದ್ಯೋಗಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕೆಂಬ ದೃಷ್ಟಿಯಿಂದ ಸಣ್ಣ ಸಣ್ಣ ಸಮುದಾಯಗಳಿಗೂ ನಿಗಮ ಮಂಡಳಿ ಸ್ಥಾಪಿಸಿ, ಬರಪೂರ ಅನುದಾನ ನೀಡಿತ್ತು.

ಆದರೆ ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ ರಾಜಕಾರಣಕ್ಕೆ ಜೋತುಬಿದ್ದು ಎಸ್.ಸಿ-ಎಸ್.ಟಿ ಸಮುದಾಯಗಳಿಗೆ ಮೀಸಲಾಗಿದ್ದ ಕೋಟ್ಯಂತರ ರೂಗಳನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದಲ್ಲದೇ, ಹಿಂದುಳಿದ ಹಾಗೂ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿ ನಿಗಮಗಳ ಅನುದಾನಗಳಿಗೆ ಕತ್ತರಿಹಾಕಿ ಈ ಸಮುದಾಯಗಳ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ಕಸಿದುಕೊಂಡಿರುವುದು ದುರ್ದೈವದ ಸಂಗತಿ.

ಇದೇ ನಿಗಮಗಳಿಂದ ಸಣ್ಣಹಿಡುವಳಿದಾರ ರೈತರಿಗಾಗಿ ರೂಪಿಸಿಲಾಗಿರುವ ಗಂಗಾ ಕಲ್ಯಾಣ ಯೋಜನೆ, ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುವ ‘ಅರಿವು’ ಯೋಜನೆ, ಪ್ರೇರಣಾ ಕಿರು ಸಾಲ ಯೋಜನೆ, ಸ್ವ ಉದ್ಯೋಗಕ್ಕಾಗಿ ಆರ್ಥಿಕ ನೆರವು ಸೇರಿದಂತೆ ಶೋಷಿತ ವರ್ಗದ ಜನರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಎಲ್ಲ ಯೋಜನೆಗಳಿಗೆ ತುಕ್ಕು ಹಿಡಿಸುವ ಮೂಲಕ ‘ಹಿಂದ’ವರ್ಗದ ಪಾಲಿಗೆ ಕಾರ್ಮೋಡ ಸೃಷ್ಟಿಸಿದ ಖಾಲಿ ಸರ್ಕಾರವಾಗಿದೆ ಎಂದಿದ್ದಾರೆ

Exit mobile version