Home ತಾಜಾ ಸುದ್ದಿ ಕಾರುಗಳ ಓವರ್ ಟೇಕ್ ಭರಾಟೆಗೆ ಮಹಿಳೆ ಬಲಿ

ಕಾರುಗಳ ಓವರ್ ಟೇಕ್ ಭರಾಟೆಗೆ ಮಹಿಳೆ ಬಲಿ

0
accident

ಉಳ್ಳಾಲ: ಕಾರುಗಳ ನಡುವಿನ ಓವರ್ ಟೇಕ್ ರಭಸಕ್ಕೆ ವೃದ್ಧೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾ.ಹೆ. 66ರ ಅಡಂಕುದ್ರುವಿನಲ್ಲಿ ಸೋಮವಾರ ಸಂಜೆ ನಡೆದಿದ್ದು, ಮಹಿಳೆಗೆ ಡಿಕ್ಕಿ ಹೊಡೆದ ಕಾರು ಮತ್ತು ಅದನ್ನ ಓವರ್ ಟೇಕ್ ಮಾಡುತ್ತಿದ್ದ ಕಾರುಗಳೆರಡು ಕಮರಿಗೆ ಉರುಳಿ ಬಿದ್ದಿವೆ.
ಸೇವಂತಿಗುಡ್ಡೆಯ ನಿವಾಸಿ ಕೃಷ್ಣಪ್ಪ ಅವರ ಪತ್ನಿ ಬೇಬಿ(65) ಮೃತ ವೃದ್ಧೆ. ಬೇಬಿ ಅವರು ಅಡಂ ಕುದ್ರುವಿನಲ್ಲಿ ಅಂಗಡಿ ಹೊಂದಿದ್ದು, ಪಂಪ್ವೆಲ್ ಅಪಾರ್ಟ್‌ಮೆಂಟ್ ಒಂದರಲ್ಲಿ ರಾತ್ರಿ ಪಾಳಿ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರ ಸಂಜೆ ವೇಳೆ ಅವರು ರಾತ್ರಿ ಪಾಳಿ ಕೆಲಸಕ್ಕೆ ಹೊರಟಿದ್ದರು. ಆಡಂ ಕುದ್ರುವಿನಲ್ಲಿ ಬಸ್ಸು ಹತ್ತಲು ಹೆದ್ದಾರಿ ದಾಟುತ್ತಿದ್ದ ವೇಳೆ ತೊಕ್ಕೊಟ್ಟಿನಿಂದ ಮಂಗಳೂರಿನ ಕಡೆಗೆ ವೇಗವಾಗಿ ಧಾವಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವೃದ್ಧೆಯ ಕಾಲು ತುಂಡಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿಯಂತ್ರಣ ತಪ್ಪಿದ ಪೋಲೊ ಕಾರು ಹೆದ್ದಾರಿ ಅಂಚಿನ ಆಳವಾದ ಕಮರಿಗೆ ಉರುಳಿ ಬಿದ್ದಿದೆ. ಪೋಲೋ ಕಾರನ್ನು ಓವರ್ ಟೇಕ್ ಮಾಡುತ್ತಿದ್ದ ಕಿಯಾ ಕಾರು ಕೂಡ ರಸ್ತೆ ಬದಿಯ ಪೊದೆಗೆ ನುಗ್ಗಿದೆ.
ಘಟನೆಯಲ್ಲಿ ಕಾರು ಚಾಲಕರಿಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

Exit mobile version