Home ಅಪರಾಧ ಕಲುಷಿತ ರಾಸಾಯನಿಕ ಬಣ್ಣ ವಿದ್ಯಾರ್ಥಿನಿಯರು ಅಸ್ವಸ್ಥ

ಕಲುಷಿತ ರಾಸಾಯನಿಕ ಬಣ್ಣ ವಿದ್ಯಾರ್ಥಿನಿಯರು ಅಸ್ವಸ್ಥ

0

ಲಕ್ಷ್ಮೇಶ್ವರ(ಗದಗ): ತಾಲೂಕಿನ ಸುವರ್ಣಗಿರಿ ತಾಂಡಾದ ವಿದ್ಯಾರ್ಥಿನಿಯರು ಶುಕ್ರವಾರ ಲಕ್ಷ್ಮೇಶ್ವರಕ್ಕೆ ಶಾಲೆಗೆ ಬರುವ ವೇಳೆ ಬಸ್ಸಿನಲ್ಲಿ ಕುಳಿತಿದ್ದಾಗ ಅದೇ ಗ್ರಾಮದ ಕೆಲ ಕಿಡಿಗೇಡಿ ಯುವಕರ ಗುಂಪು ಕಲುಷಿತ (ಮಿಶ್ರಿತ) ಬಣ್ಣ ಎರಚಿದ್ದರಿಂದ ನಾಲ್ಕೈದು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆಸ್ಪತ್ರೆ ಸೇರುವಂತಾದ ಘಟನೆ ನಡೆದಿದೆ.
ಕಿಡಿಗೇಡಿಗಳು ಮಾಡಿದ್ದೇನು….
ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾದಿಂದ ೧೦ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರು ನಿತ್ಯದಂತೆ ಲಕ್ಷ್ಮೇಶ್ವರದ ಉಮಾ ವಿದ್ಯಾಲಯ ಹೈಸ್ಕೂಲ್‌ಗೆ ಬರಲು ಬಸ್ ಹತ್ತಿದ್ದರು. ಈ ಸಂದರ್ಭದಲ್ಲಿ ಅದೇ ಗ್ರಾಮದ ಕೆಲ ವಿದ್ಯಾರ್ಥಿಗಳನ್ನು ಒಳಗೊಂಡ ಕಿಡಿಗೇಡಿ ಯುವಕರ ಗುಂಪು ವಿದ್ಯಾರ್ಥಿನಿಯರ ಮೇಲೆ ಬಣ್ಣ ಎರಚಲು ಬಂದಿದ್ದರಂತೆ. ಈ ವೇಳೆ ವಿದ್ಯಾರ್ಥಿನಿಯರು (೮ ಮತ್ತು ೯ನೇ ತರಗತಿ) ಪರೀಕ್ಷೆ ಬರೆಯಲು ಹೊರಟಿದ್ದೇವೆ, ಬಣ್ಣ ಹಾಕಬೇಡಿ ಎಂದು ವಿನಂತಿಸುತ್ತ ದೌಡಾಯಿಸಿ ಬಸ್ಸಿನೊಳಗೆ ಹತ್ತಿದ್ದಾರೆ. ಬಸ್ಸಿನ ಚಾಲಕ-ನಿರ್ವಾಹಕರು ಸಹ ಯುವಕರಿಗೆ ಮನವಿ ಮಾಡುತ್ತ ಬಣ್ಣ ಎರಚಬೇಡಿ ಎಂದು ತಿಳಿಸಿದರು. ಬಸ್ ಬಿಡುತ್ತಿದ್ದಂತೆಯೇ ಕಿಡಿಗೇಡಿ ಯುವಕರು ಬಸ್ಸಿನೊಳಗಿದ್ದ ವಿದ್ಯಾರ್ಥಿನಿಯರಿಗೆ ಕಲುಷಿತ (ಮೊಟ್ಟೆ, ಗೊಬ್ಬರ, ಕೋಲ್ಡ್ರಿಂಕ್ಸ್ ಮಿಶ್ರಿತ) ಬಣ್ಣ ಎರಚಿದ್ದಾರೆ. ವಿದ್ಯಾರ್ಥಿನಿಯರು ಉಬ್ಬಳಿಸಿಕೊಂಡು ವಾಂತಿ ಮಾಡಿಕೊಂಡಿದ್ದಾರೆ. ಚಾಲಕ ಮಾರ್ಗದಲ್ಲಿಯೇ ಮತ್ತೊಂದು ಬಸ್ಸಿಗೆ ವಿದ್ಯಾರ್ಥಿನಿಯರನ್ನು ಹತ್ತಿಸಿ ಲಕ್ಷ್ಮೇಶ್ವರಕ್ಕೆ ತಲುಪಿಸಿದ್ದಾರೆ.
ಕೂಡಲೇ ಸಾರ್ವಜನಿಕರು, ಶಿಕ್ಷಕರು ವಿದ್ಯಾರ್ಥಿನಿಯರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅದರಲ್ಲಿ ಗೌರಿ ಪೂಜಾರ, ದಿವ್ಯಾ ಲಮಾಣಿ ಇಬ್ಬರು ತೀವ್ರ ಉಸಿರಾಟದ ತೊಂದರೆಯಿಂದ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಂಕಿತಾ ಲಮಾಣಿ, ತನುಷಾ ಲಮಾಣಿ ಎಂಬ ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿಕ್ಷಕರು, ಪೊಲೀಸರು ಆಸ್ಪತ್ರೆಗೆ ದೌಡಾಯಿಸಿದರು. ಸುವರ್ಣಗಿರಿ ತಾಂಡಾದಲ್ಲಿ ತೀವ್ರ ವಾಗ್ವಾದ, ಜಗಳ ನಡೆದಿದೆ. ಪಿಎಸ್‌ಐ ನಾಗರಾಜ ಗಡದ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

Exit mobile version