ಚಿತ್ರದುರ್ಗ: ಅಡಿಕೆ ತೋಟದಲ್ಲಿ ನೀರು ಕಟ್ಟುವಾಗ ಕರಡಿ ದಾಳಿ ನಡೆಸಿ ರೈತನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ರಂಗಸ್ವಾಮಿ (೩೦) ಗಂಭೀರವಾಗಿ ಗಾಯಗೊಂಡ ರೈತ. ರಾತ್ರಿ ವೇಳ ಕರೆಂಟ್ ಕೊಟ್ಟಿದ್ದರಿಂದ ಎಂದಿನಂತೆ ಅಡಿಕೆ ತೋಟದಲ್ಲಿ ಶುಕ್ರವಾರ ರಾತ್ರಿ 11.45ರ ಸುಮಾರಿನಲ್ಲಿ ನೀರು ಬಿಡುವಾಗ ಏಕಾಏಕಿ ದಾಳಿ ನಡೆಸಿದ ಕರಡಿ, ಮೈ ಮೇಲೆ ಪರಚಿ, ತಲೆ ಚಿಪ್ಪು ಕಿತ್ತಿದೆ. ಕರಡಿಯೊಂದಿಗೆ ಕಾದಾಡಿದ ರೈತ ರಂಗಸ್ವಾಮಿ, ತಪ್ಪಿಸಿಕೊಂಡು ಬಂದಿದ್ದಾನೆ.
ಕೂಡಲೇ ಭರಮಸಾಗರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಕರಡಿ ಕಿತ್ತಿದ್ದ ತಲೆ ಚಿಪ್ಪುಹೊಲೆದಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕಾಡು ಪ್ರಾಣಿಗಳ ಉಪಟಳ ನಿಯಂತ್ರಿಸಿ:
ರಾತ್ರಿ ವೇಳೆಯಲ್ಲಿ ಕಾಡಂಚಿನ ಜಮೀನುಗಳಿಗೆ ಹೋಗಿ ಕೃಷಿ ಚಟುವಟಿಕೆಗಳನ್ನು ನಡೆಸಲು ಕಾಡು ಪ್ರಾಣಿಗಳಿಂದ ಬಹಳ ಸಮಸ್ಯೆಗಳು ಆಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡು ಪ್ರಾಣಿಗಳ ಉಪಟಳ ನಿಯಂತ್ರಣ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಹಗಲು ವೇಳೆ ವಿದ್ಯುತ್ ಸರಬರಾಜಿಗೆ ಒತ್ತಾಯ:
ಹಗಲು ವೇಳೆ ರೈತರಿಗೆ ವಿದ್ಯುತ್ ಸರಬರಾಜು ಮಾಡಿದರೆ ಕಾಡು ಪ್ರಾಣಿಗಳಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ರಾತ್ರಿ ವೇಳೆಯಲ್ಲಿ ವಿದ್ಯುತ್ ಸರಬರಾಜು ಮಾಡಿದರೆ ಕಾಡು ಪ್ರಾಣಿಗಳ ಉಪಟಳದಿಂದ ಕೃಷಿ ಚಟುವಟಿಕೆಗಳನ್ನು ನಡೆಸಲು ರೈತರಿಗೆ ಜೀವ ಭಯ ಕಾಡುತ್ತಿದೆ. ಬೆಸ್ಕಾಂ ಅಧಿಕಾರಿಗಳು ಹಗಲು ವೇಳೆ ವಿದ್ಯುತ್ ಸರಬರಾಜು ರೈತರು ಆಗ್ರಹಿಸಿದ್ದಾರೆ.