ಬೆಂಗಳೂರು: ರಾಜ್ಯ ಸರ್ಕಾರದ ಅಕ್ಷರ ದಾಸೋಹ – ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಅಜೀಂ ಪ್ರೇಮ್ ಜೀ ಫೌಂಡೇಶನ್ ಅನುದಾನದ ಸಹಭಾಗಿತ್ವದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆ ವಿದ್ಯಾರ್ಥಿಗಳಿಗೆ ವಾರದ ಎಲ್ಲಾ ಆರು ದಿನಗಳಲ್ಲಿ ಪೌಷ್ಠಿಕ ಆಹಾರವನ್ನು ವಿತರಿಸುವ ಕಾರ್ಯಕ್ರಮಕ್ಕೆ ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಲೆಗಳಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ರಾಜ್ಯದಲ್ಲಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಇನ್ಮುಂದೆ ವಾರದ 6 ದಿನವೂ ಮೊಟ್ಟೆ / ಬಾಳೆಹಣ್ಣು / ಚಿಕ್ಕಿ ನೀಡಲಾಗುತ್ತದೆ. ಸರ್ಕಾರ ಈಗಾಗಲೇ ವಾರದಲ್ಲಿ 2 ದಿನ ಮೊಟ್ಟೆ / ಬಾಳೆಹಣ್ಣು / ಚಿಕ್ಕಿ ನೀಡುತ್ತಿತ್ತು. ಇದರ ಜತೆಗೆ ಉಳಿದ 4 ದಿನ ಇವುಗಳನ್ನು ನೀಡಲು ಅಜೀಂ ಪ್ರೇಮ್‌ಜೀ ಫೌಂಡೇಷನ್ ಮುಂದೆ ಬಂದಿದ್ದು, ಇದಕ್ಕಾಗಿ ಸುಮಾರು ₹1,500 ಕೋಟಿ ರೂಪಾಯಿ ನೆರವು ನೀಡಿದೆ ಎಂದಿದ್ದಾರೆ
