Home News ಆಟೋ ಚಾಲಕ ನಿಗೂಢ ಸಾವು ಪ್ರಕರಣ – ಕೊಲೆ ಕೃತ್ಯ

ಆಟೋ ಚಾಲಕ ನಿಗೂಢ ಸಾವು ಪ್ರಕರಣ – ಕೊಲೆ ಕೃತ್ಯ

ಮಂಗಳೂರು: ಕಾಸರಗೋಡು ಮಂಜೇಶ್ವರದ ಕುಂಜತ್ತೂರು ಪದವು ಎಂಬಲ್ಲಿ ಮುಲ್ಕಿ ಕೊಲ್ನಾಡು ನಿವಾಸಿ ಆಟೋ ಚಾಲಕ ಮುಹಮ್ಮದ್ ಶರೀಫ್ (೫೨) ಅವರ ನಿಗೂಡ ಸಾವು ಕೊಲೆ ಕೃತ್ಯ ಎಂದು ಪ್ರಾಥಮಿಕ ಹಂತದ ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ.
ಶರೀಫ್ ಅವರ ಕೈ, ತಲೆ ಹಾಗೂ ಕುತ್ತಿಗೆಯಲ್ಲಿ ಮಾರಕಾಸ್ತ್ರ ಗಳಿಂದ ಕಡಿದ ಗಾಯಗಳಾಗಿವೆ ಎಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕುತ್ತಿಗೆಗೆ ಆಗಿರುವ ಬಲವಾದ ಗಾಯ ಸಾವಿಗೆ ಪ್ರಮುಖ ಕಾರಣ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೃತದೇಹ ಗಂಟೆಗಳ ಕಾಲ ನೀರಿನಲ್ಲಿದ್ದರೂ ಶ್ವಾಸಕೋಶದೊಳಗೆ ನೀರು ನುಗ್ಗಿಲ್ಲ. ಇದರಿಂದ ಶರೀಫ್‌ರನ್ನು ಕೊಲೆಗೈದು ಬಳಿಕ ಬಾವಿಗೆ ಎಸೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಬುಧವಾರದಿಂದ ನಾಪತ್ತೆಯಾಗಿದ್ದ ಮುಹಮ್ಮದ್ ಶರೀಫ್ ಅವರ ಮೃತದೇಹವು ಗುರುವಾರ ರಾತ್ರಿ ಮಂಜೇಶ್ವರ ಸಮೀಪದ ಕುಂಜತ್ತೂರು ಪದವು ಎಂಬಲ್ಲಿ ನ ನಿರ್ಜನ ಪ್ರದೇಶದ ಪಾಳು ಬಾವಿಯಲ್ಲಿ ಪತ್ತೆಯಾಗಿತ್ತು.
ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಂಜೇಶ್ವರ ಠಾಣಾ ಸರ್ಕಲ್ ಇನ್ ಸ್ಪೆಕ್ಟರ್ ಅನೂಪ್ ಕುಮಾರ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.
ಬುಧವಾರ ನಾಪತ್ತೆಯಾಗಿದ್ದ ಮುಹಮ್ಮದ್ ಶರೀಫ್ ಅವರ ಮೃತದೇಹ ಗುರುವಾರ ರಾತ್ರಿ ಕುಂಜತ್ತೂರು ಪದವಿನ ನಿರ್ಜನ ಪ್ರದೇಶದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಶುಕ್ರವಾರ ಬೆಳಗ್ಗೆ ಬಾವಿಯಿಂದ ಮೃತದೇಹವನ್ನು ಮೇಲಕ್ಕೆತ್ತಿ ಮಹಜರು ನಡೆಸಲಾಯಿತು.
ಬುಧವಾರ ರಾತ್ರಿ ಹತ್ತು ಗಂಟೆ ಸುಮಾರಿಗೆಮುಹಮ್ಮದ್ ಶರೀಫ್ ಅವರ ಆಟೋ ರಿಕ್ಷಾ ವನ್ನು ಬಾಡಿಗೆಗೆಂದು ಮೂವರು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಅಂದು ರಾತ್ರಿಯಿಂದ ಮುಹಮ್ಮದ್ ಶರೀಫ್ ನಾಪತ್ತೆಯಾಗಿದ್ದರು. ಅವರ ರಿಕ್ಷಾದಲ್ಲಿ ತೆರಳಿರುವ ಆ ಮೂವರನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒತ್ತಾಯ: ಮುಲ್ಕಿ ಕೊಳ್ನಾಡು ನಿವಾಸಿ, ಆಟೊ ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ ರನ್ನು ಬಾಡಿಗೆ ನೆಪದಲ್ಲಿ ಕರೆದೊಯ್ದು ಮಂಜೇಶ್ವರದ ಕುಂಜತ್ತೂರಿನಲ್ಲಿ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಹತ್ಯೆಗೈದು ಬಾವಿಗೆ ಎಸೆದಿರುತ್ತಾರೆ. ಈ ಪ್ರಕರಣದ ಸುದ್ದಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಓಡಿಸಿ ದುಡಿಯುವಂತಹ ಚಾಲಕರನ್ನು ಬೆಚ್ಚಿ ಬೀಳಿಸಿದೆ. ಕೊಲೆ ಆರೋಪಿಗಳನ್ನು ಪೊಲೀಸ್ ಇಲಾಖೆ ಶೀಘ್ರ ಬಂಧಿಸಿ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಬೇಕು ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ.

Exit mobile version