ಹುಬ್ಬಳ್ಳಿ: ವಿ.ಪ. ಸದಸ್ಯ ಸಿ.ಟಿ.ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಳಸಿದ್ದಾರೆ ಎನ್ನಲಾದ ಅಸಂವಿಧಾನಿಕ ಪದದ ಬಗ್ಗೆ ಯಾವುದೇ ದಾಖಲೆ ಇಲ್ಲ. ಸಿ.ಟಿ.ರವಿ ನಿಂದಿಸಿರುವ ಬಗ್ಗೆ ಯಾವುದೇ ವಿಡಿಯೋ, ಆಡಿಯೋ ಲಭ್ಯವಾಗಿಲ್ಲ ಎಂದು ವಿ.ಪ. ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಸದನದಲ್ಲಿ ಕಾಂಗ್ರೆಸ್ ಸದಸ್ಯರು ಗದ್ದಲ ಆರಂಭಿಸಿದ್ದರು. ಈ ವೇಳೆ ಬಿಜೆಪಿ ಸದಸ್ಯರೂ ಸಹ ಪ್ರತಿಭಟನೆಗಿಳಿದಿದ್ದರು. ಇದರಿಂದ ಕಲಾಪ ನಡೆಸಲು ಆಗದೇ, ಮುಂದೂಡಲಾಗಿತ್ತು. ಇದಾದ ಬಳಿಕ ಸದನದ ಮೈಕ್, ಆಡಿಯೋ ಹಾಗೂ ವಿಡಿಯೋ ಎಲ್ಲವನ್ನೂ ಬಂದ್ ಮಾಡಲಾಗಿತ್ತು. ಅದ್ದಲ ಗೊಂದಲದ ನಡುವೆಯೇ, ಲಕ್ಷ್ಮಿ ಹೆಬಾಳ್ಕರ್ ನನ್ನ ಬಳಿ ಬಂದು, ಸಿಟಿ ರವಿಯವರು ನನ್ನ ಬಗ್ಗೆ ಕೆಟ್ಟ ಪದ ಬಳಸಿದ್ದಾರೆ ಎಂದು ದೂರಿದರು. ಬಳಿಕ ಉಮಾಶ್ರೀ, ನಾಗರಾಜ್, ಯಾತೀಂದ್ರ ಬಂದು ಬೈದಿರುವುದನ್ನು ನಾವು ಕೇಳಿದ್ದೇವೆ ಎಂದರು. ಮತ್ತೊಂದೆಡೆ ಸಿಟಿ ರವಿ ಬೈದಿಲ್ಲ ಅಂತ ಬಿಜೆಪಿ ನಾಯಕರು ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
ಸಿ.ಟಿ.ರವಿ ಬಂಧನ ವಿಚಾರ ನನ್ನ ಗಮನಕ್ಕೆ ತಂದಿದ್ದಾರೆ. ಸುವರ್ಣ ಸೌಧ ಹೊರಗಡೆ, ಸಂಜೆ ಆರು ಗಂಟೆ ನಂತರ ಬಂಧನ ಪ್ರಕ್ರಿಯೆ ನಡೆಸಿದ್ದಾರೆ. ಎಲ್ಲವನ್ನೂ ವಿಚಾರಣೆ ನಡೆಸಿ ಸೋಮವಾರ ವರದಿ ಕೊಡ್ತೇನೆ ಎಂದು ವಿವರ ನೀಡಿದರು.