Home ಅಪರಾಧ ಹಾಲಸ್ವಾಮಿ ಬ್ಯಾಂಕ್ ಖಾತೆ, ಲಾಕರ್ ಪರಿಶೀಲನೆ

ಹಾಲಸ್ವಾಮಿ ಬ್ಯಾಂಕ್ ಖಾತೆ, ಲಾಕರ್ ಪರಿಶೀಲನೆ

0

ಹೂವಿನಹಡಗಲಿ: ಐದು ಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಸ್ವಾಮಿಗಳ ಬ್ಯಾಂಕ್ ಖಾತೆಗಳನ್ನು ಗುರುವಾರ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದರು.
ಹಿರೇಹಡಗಲಿ ಗ್ರಾಮದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಭೇಟಿ ನೀಡಿದ ಸಿಸಿಬಿ ಪೊಲೀಸರು ಸ್ವಾಮಿಗಳ ಬ್ಯಾಂಕ್ ಖಾತೆಗಳ ವಿವರ ಪಡೆದರು ಮತ್ತು ಇದೇ ಬ್ಯಾಂಕಿನಲ್ಲಿ ಸ್ವಾಮಿಗಳು ಹೊಂದಿರುವ ಲಾಕರ್ ತಪಾಸಣೆ ನಡೆಸಿದರು. ನಂತರ ಅದೇ ಗ್ರಾಮದ ಬಿಡಿಸಿಸಿ ಬ್ಯಾಂಕ್‌ಗೆ ಭೇಟಿ ನೀಡಿ ಅಲ್ಲಿಯೂ ಶ್ರೀಗಳ ಬ್ಯಾಂಕ್ ಖಾತೆ ವಿವರಗಳನ್ನು ಪಡೆದರು. ನಂತರ ಹೂವಿನಹಡಗಲಿಯ ಐಡಿಎಫ್‌ಸಿ ಬ್ಯಾಂಕಿಗೆ ಭೇಟಿ ನೀಡಿ ಸ್ವಾಮಿಗಳು ಹೊಂದಿರುವ ಎಲ್ಲಾ ಖಾತೆಗಳ ವಿವರ ಹಾಗೂ ವಹಿವಾಟು ನಡೆಸಿದ ವಿವರ ಪತ್ರಗಳನ್ನು ಪಡೆದಿದ್ದಾರೆ.
ಅಭಿನವ ಹಾಲಸ್ವಾಮಿಗಳು ಬೇನಾಮಿ ಹೆಸರಿನಲ್ಲಿ ಖರೀದಿಸಿರುವ ಆಸ್ತಿ ವಿವರಗಳನ್ನು ಸಹ ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಸಿಸಿಬಿ ಪೊಲೀಸರು ಯಾವುದೇ ಮಾಹಿತಿಯನ್ನು ದೃಢಪಡಿಸಿಲ್ಲ.

Exit mobile version