Home ತಾಜಾ ಸುದ್ದಿ ಜಾತ್ಯತೀತ, ಸಮಾಜವಾದ ಪದ ಕಿತ್ತು ಹಾಕಿರುವುದು ಸಂವಿಧಾನದ ಬಗ್ಗೆ ಇರುವ ಅಸಹನೆಗೆ ಸಾಕ್ಷಿ

ಜಾತ್ಯತೀತ, ಸಮಾಜವಾದ ಪದ ಕಿತ್ತು ಹಾಕಿರುವುದು ಸಂವಿಧಾನದ ಬಗ್ಗೆ ಇರುವ ಅಸಹನೆಗೆ ಸಾಕ್ಷಿ

0

ಬೆಂಗಳೂರು: ನೂತನ ಸಂಸತ್ ಭವನದ ಪ್ರವೇಶದ ನೆನಪಿಗಾಗಿ ಸಂಸದರಿಗೆ ಕೇಂದ್ರ ಸರ್ಕಾರ ನೀಡಿರುವ ಸಂವಿಧಾನದ ಪ್ರತಿಯ ಪ್ರಸ್ತಾವನೆಯಿಂದ ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ಕಿತ್ತು ಹಾಕಿರುವುದು ಬಿಜೆಪಿ ಪಕ್ಷದ ಅಂತರಂಗದಲ್ಲಿ ಸಂವಿಧಾನದ ಬಗ್ಗೆ ಇರುವ ಅಸಹನೆಗೆ ಸಾಕ್ಷಿ. ಇದು ಅತ್ಯಂತ ಖಂಡನೀಯ ಕೃತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, 1949ರ ಸಂವಿಧಾನದ ಪ್ರತಿಯನ್ನೇ ನೀಡಲಾಗಿದೆ ಎನ್ನುವುದು ತಮ್ಮೊಳಗಿನ ದುಷ್ಟ ಆಲೋಚನೆಯನ್ನು ಮುಚ್ಚಿಕೊಳ್ಳುವ ಪ್ರಯತ್ನವಾಗಿದೆ. ತಿದ್ದುಪಡಿಯಾದ ನಂತರ ಪರಿಷ್ಕೃತ ಪ್ರತಿಯನ್ನು ನೀಡಬೇಕಾಗಿರುವುದು ನ್ಯಾಯವೂ ಹೌದು, ಧರ್ಮವೂ ಹೌದು. 1972ರಲ್ಲಿಯೇ ಸಂವಿಧಾನಕ್ಕೆ 42ನೇ ತಿದ್ದುಪಡಿ ಮಾಡಿ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಎಂಬ ಪದಗಳನ್ನು ಸೇರಿಸಲಾಗಿತ್ತು. ಈ ಪದಗಳನ್ನು ಕಿತ್ತುಹಾಕಿರುವುದು ಸಂವಿಧಾನ ವಿರೋಧಿ ನಡೆ ಮಾತ್ರವಲ್ಲ, ಇದೊಂದು ದೇಶದ್ರೋಹ ಕೃತ್ಯವಾಗಿದೆ. ಇದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನವಾಗಿದೆ ಎಂದಿದ್ದಾರೆ.
ಸಂವಿಧಾನದ ಬಗ್ಗೆ ಭಾರತೀಯ ಬಿಜೆಪಿ ಪಕ್ಷ ಮತ್ತು ಅದರ ಮಾತೃ ಸಂಸ್ಥೆಯಾಗಿರುವ ಆರ್‌ಎಸ್‌ಎಸ್‌ಗೆ ಇರುವ ವಿರೋಧಕ್ಕೆ ಇತಿಹಾಸ ಸಾಕ್ಷಿ. ಸಂವಿಧಾನವನ್ನು ದೇಶ ಒಪ್ಪಿಕೊಂಡ ಕಾಲದಲ್ಲಿಯೇ ಆರ್‌ಎಸ್‌ಎಸ್ ಅದನ್ನು ವಿರೋಧಿಸಿತ್ತು. ಈ ಸಂವಿಧಾನದಲ್ಲಿ ಭಾರತೀಯತೆ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಮರೆಯಲಾಗದು.
ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನದ ಪುನರ್ ಪರಿಶೀಲನೆಗೊಳಪಡಿಸುವ ವಿಫಲ ಪ್ರಯತ್ನ ನಡೆದಿರುವುದನ್ನು ದೇಶದ ಜನತೆ ಮರೆತಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರದ ಕಾಲದಲ್ಲಿ ಬಿಜೆಪಿ ನಾಯಕರು ಮತ್ತು ಸಂಸದರು ನಿರಂತರವಾಗಿ ಸಂವಿಧಾನದ ಮೇಲೆ ದಾಳಿ ನಡೆಸಿದ್ದಕ್ಕೆ ದೇಶ ಸಾಕ್ಷಿಯಾಗಿದೆ. ಸಂವಿಧಾನವನ್ನು ಬದಲಾಯಿಸಲಿಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಅನಂತ್‌ಕುಮಾರ ಹೆಗಡೆ ಎಂಬ ರಾಜ್ಯದ ಸಂಸದ ನೀಡಿದ್ದ ಬೇಜವಾಬ್ದಾರಿ ಹೇಳಿಕೆಯನ್ನು ಕನಿಷ್ಠ ಖಂಡಿಸುವ ಇಲ್ಲವೇ ಅವರ ವಿರುದ್ಧ ಕ್ರಮಕೈಗೊಳ್ಳುವ ಕೆಲಸವನ್ನೂ ನರೇಂದ್ರ ಮೋದಿ ಸರ್ಕಾರ ಮಾಡದೆ ಇರುವುದು ಆ ಪಕ್ಷದ ಅಂತರಂಗದ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿದ್ದಾರೆ.
ನೇರಾನೇರವಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಧೈರ್ಯ ಇಲ್ಲದ ಬಿಜೆಪಿ ಮತ್ತು ಕೇಂದ್ರ ಸರ್ಕಾರ, ಈ ರೀತಿ ಅಡ್ಡದಾರಿ ಹಿಡಿದು ಸಂವಿಧಾನದ ಆಶಯಗಳನ್ನು ಅಳಿಸಿಹಾಕುವ ಪ್ರಯತ್ನ ನಡೆಸುತ್ತಿದೆ. ಅಂತಿಮವಾಗಿ ಸಂವಿಧಾನಕ್ಕೆ ವಿರುದ್ಧವಾಗಿ ಮನುಧರ್ಮ ಶಾಸ್ತ್ರವನ್ನು ಜಾರಿಗೊಳಿಸುವ ಗುಪ್ತ ಅಜೆಂಡಾದ ಭಾಗವಾಗಿಯೇ ಈ ಎಲ್ಲ ಕಸರತ್ತುಗಳು ನಡೆಯುತ್ತಿರುವಂತೆ ಕಾಣುತ್ತಿದೆ ಎಂದಿದ್ದಾರೆ.

Exit mobile version